ತಿಪಟೂರು : ಗ್ರಾಮ ಪಂಚಾಯ್ತಿ ಚುನಾವಣೆ ಸ್ಪರ್ಧೆಗೆ ಯುವಕರ ಉತ್ಸಾಹ

  ತಿಪಟೂರು  : 

      ರಾಜಕೀಯದ ಬುನಾದಿಗೆ ಗ್ರಾಮ ಪಂಚಾಯಿತಿ ಮೊದಲ ಹೆಜ್ಜೆಯಾಗಿದ್ದು ಈ ಬಾರಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಯುವಕರು ಗ್ರಾಮ ಪಂಚಾಯಿ ಚುನಾವಣೆಗೆ ಉತ್ಸಾಹದಿಂದ ಸ್ಪರ್ಧಿಸಿ ಆಯ್ಕೆಯಾಗುವ ಕನಸನ್ನು ಹೊತ್ತಿದ್ದಾರೆ.

      ತಾಲ್ಲೂಕಿನ ಒಟ್ಟು 26 ಗ್ರಾಮ ಪಂಚಾಯತಿಗಳಿದ್ದು ಎರಡನೇ ಹಂತದಲ್ಲಿ ನಡೆಯುವ ಚುನಾವಣೆಗೆ ಸಕಲ ರೀತಿಯಲ್ಲು ಸಿದ್ದತೆಗೊಂಡಿದೆ. ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಒಟ್ಟು 1,39,009 ಮತದಾರರಿದ್ದು, ಈ ಪುರುಷರು 68,072 ಹಾಗೂ 70,937 ಮಹಿಳಾ ಮತದಾರರಿದ್ದಾರೆ. ಡಿಸೆಂಬರ್ 15ರಂದು ಪ್ರಕಟಗೊಳ್ಳುವ ಪೂರಕಪಟ್ಟಿ ಪ್ರಕಟವಾಗಬೇಕಾಗಿದೆ.

      ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಡಿಸೆಂಬರ್ 17 ಕಡೇದಿನವಾಗಿದೆ. ತಾಲೂಕಿನಲ್ಲಿ 188 ಮೂಲ ಹಾಗೂ 14 ಆಕ್ಸಿಲರಿ ಮತಗಟ್ಟೆಗಳು ಸೇರಿ ಒಟ್ಟು 202 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 135 ಸಾಮಾನ್ಯ, 25 ಸೂಕ್ಷ್ಮ, 28 ಅತಿಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೂ ಚುನಾವಣಾ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದು ಎಲ್ಲಾ ಕಡೆಗಳಲ್ಲಿಯೂ ನಾಮಪತ್ರವನ್ನು ಸ್ವೀಕರಿಸಲಾಗುತ್ತಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿಯಾದ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

      ಈ ಬಾರಿ ನೇರವಾಗಿ ಗ್ರಾಮಪಂಚಾಯಿತಿಗಳಿಗೆ 1.5 ಕೋಟಿ ಅನುದಾನ ಸಿಗಲಿದೆ ಎಂಬ ಮಾಹಿತಿಯನ್ನು ಆಧರಿಸಿ ಇದರಲ್ಲಿ ತಮ್ಮ ಗ್ರಾಮಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕೆಂಬ ಎಂಬ ಉದ್ದೇಶದಿಂದ ಹೆಚ್ಚಿನದಾಗಿ ಯುವಕರು ನಾಮಪತ್ರಗಳನ್ನು ಸಲ್ಲಿಸುತ್ತಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸೋಲುಗೆಲುವಿನ ಲೆಕ್ಕಾಚಾರ ಪ್ರಾರಂಭವಾಗಿದ್ದು ತೆರೆಮರೆಯಲ್ಲಿ ನಡೆಯುತ್ತಿದ್ದ ಚುನಾವಣೆಯ ಗೆಲುವಿನ ಲೆಕ್ಕಾಚಾರವೀಗ ಬಹಿರಂಗವಾಗಿಯೇ ನಡೆಯುತ್ತಿದೆ. ಚುನಾವಣೆಗೆ ಸ್ಪರ್ಧಿಸಿರುವ ಆಕಾಂಕ್ಷಿಗಳು ಎದುರಾಳಿಗಳ ಏಟಿಗೆ ಎದಿರೇಟು ಎಂಬಂತೆ ಈಗಿನಿಂದಲೇ ಕೇರಿಗಳಲ್ಲಿ, ಮನೆಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕೆಲವು ಕಡೆ ಸಂತೋಷಕೂಟಗಳು ನಡೆಯುತ್ತಿರುವುದಲ್ಲದೇ, ಮನೆಗಳಿಗೆ ಕೋಳಿಗಳನ್ನು ಹಂಚುತ್ತಿರುವ ಬಗ್ಗೆಯೂ ಕೇಳಿಬರುತ್ತಿದೆ.

      2015ರಲ್ಲಿ ನಡೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ಶಾಸಕರಾಗಿದ್ದ ಕಾಂಗ್ರೆಸ್‍ನ ಕೆ.ಷಡಕ್ಷರಿಯವರ ನೇತೃತ್ವದಲ್ಲಿ 26 ಗ್ರಾಮ ಪಂಚಾಯತಿಗಳಲ್ಲಿ 13ರಲ್ಲಿ ಕಾಂಗ್ರೆಸ್ ಬೆಂಬಲಿಗರು, 3 ಗ್ರಾಮ ಪಂಚಾಯಿತಿಗಳಲ್ಲಿ ಜೆ.ಡಿ.ಎಸ್ ಬೆಂಬಲಿಗರ ಬೆಂಬಲದೊಂದಿಗೆ ಅಧಿಕಾರ ಹಿಡಿದಿದ್ದರು. 10 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿಗರು ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

      ಈ ಶಾಸಕರಾಗಿರುವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಚುನಾವಣೆಗೆ ಸಜ್ಜಾಗಿದ್ದು 20ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್‍ನಿಂದ ಬಿಜೆಪಿಗೆ ಬಂದಿರುವ ಲೋಕೇಶ್ವರ್ ತಮ್ಮ ಬೆಂಬಲಿಗರನನು ಕಣಕ್ಕಿಳಿಸುತ್ತಿರುವುದು, ಶಾಸಕರು ಮತ್ತು ಲೋಕೇಶ್ವರ್ ಬೆಂಬಲಿಗರ ನಡುವೆ ಬೆಂಬಲಿಗರ ಬಂಡಾಯ ವ್ಯಕ್ತವಾಗಬಹುದು.

      ಕೆರೆಗೆ ಹೇಮಾವತಿ ನೀರು ಹರಿಸಲು ಆಗ್ರಹಿಸಿ ಹೊನ್ನವಳ್ಳಿ ಹೋಬಳಿ ನೀರಾವರಿ ಹೋರಾಟ ಸಮಿತಿ ಗ್ರಾಮಪಂಚಾಯ್ತಿ ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದೆ.

      ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಲಲು ಪಕ್ಷಗಳ ನಾಯಕರು ಸಭೆ ನಡೆಸುತ್ತಾ ತಂತ್ರ ರೂಪಿಸುತ್ತಿದ್ದಾರೆ. ಹಳ್ಳಿಹಳ್ಳಿಗಳಲ್ಲಿ ಚಳಿಗಾಲದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಕಾವು ಏರುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link