ತಿಪಟೂರು :
ತಾಲ್ಲೂಕಿನ ಹೊನ್ನವಳ್ಳಿಯಲ್ಲಿ ಕೆರೆಗೆ ಹೇಮಾವತಿ ನೀರು ಬಿಡುತ್ತಿಲ್ಲ ಹಾಗೂ ಕುಡಿಯಲು ನೀರಿಲ್ಲವೆಂದು ಗ್ರಾಮ ಪಂಚಾಯಿತಿ ಚುನಾವಣಾ ಆದೇಶ ಪ್ರಕಟಗೊಂಡಾಗಿನಿಂದಲೇ ನಾವು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ತಾಲ್ಲೂಕು ಅಧಿಕಾರಿಗಳಿಗೆ ಮನವಿಕೊಟ್ಟರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಲಿಲ್ಲ, ಆದ್ದರಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸದೇ ಚುನಾವಣೆಯನ್ನು ಬಹಿಷ್ಕಾರಿಸಿದ್ದಾರೆ.
ಹೊನ್ನವಳ್ಳಿ ಸುತ್ತಮುತ್ತಲ ಭಾಗದಲ್ಲಿ ಜನಜಾನುವಾರಿಗೆ ಕುಡಿಯುವ ನೀರಿಗೆ ತೀವ್ರ ಸಂಕಷ್ಟವಿದೆ, ಇನ್ನೂ ಇಲ್ಲಿರುವ ಶುದ್ಧನೀರಿನ ಘಟಕಗಳಿಗೇ ನೀರು ಸರಬರಾಜು ಆಗುತ್ತಿಲ್ಲ, ನಮ್ಮ ಜನರು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ಹೈನುಗಾರಿಕೆ, ಕುರಿ ಸಾಕಣಿಕೆಯನ್ನು ಬಿಟ್ಟಿದ್ದಾರೆ. ತೋಟದ ಬೋರ್‍ವೆಲ್ ಇರುವ ರೈತರು ಜಾನುವಾರುಗಳನ್ನು ಸಾಕುತ್ತಿದ್ದಾರೆ ಎಂದು ಹೊನ್ನವಳ್ಳಿ ಹೋಬಳಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರೇಗೌಡ ಹೇಳಿದರು.
ಕಳೆದ ಲೋಕಸಬಾ ಚುನಾವಣೆಯಲ್ಲಿ ಹೀಗೆ ನೀರಿಗಾಗಿ ಮತ ಬಹಿಷ್ಕಾರವನ್ನು ಮಾಡುತ್ತೇವೆ ಎಂದಾಗ ರಾಜಕಾರಣಿಗಳು ನೀರು ಒದಗಿಸುವ ಭರವಸೆ ನೀಡಿದ್ದರು. ಅದು ಈವರೆಗೂ ಕಾರ್ಯಗತವಾಗಿಲ್ಲ. ಈ ಬಾರಿ ಹೊನ್ನವಳ್ಳಿ ಜನರು ಪಕ್ಷಾತೀತವಾಗಿ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿ ಸಂಪೂರ್ಣವಾಗಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಹಾಗೆಯೇ ಹೊನ್ನವಳ್ಳಿ ಗ್ರಾಮ ಪಂಚಾಯತಿಯ 6 ಕ್ಷೇತ್ರಗಳ 14 ಸ್ಥಾನಗಳಿಗೆ ಯಾರೂ ನಾಮಪತ್ರ ಸಲಿಸಿಲ್ಲ.
ಬಂದ್ ಸನ್ನಿವೇಶ: ಹೊನ್ನವಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರದ ಮಧ್ಯೆ ಸಂಧಾನ ಮಾಡಲು ಪ್ರಯತ್ನಿಸುತ್ತಿದ್ದ ಅಧಿಕಾರಿಗಳು ಬುಧವಾರ ಧರಣಿ ನಡೆಸುತ್ತಿದ್ದವರನ್ನೆಲ್ಲ ಚದುರಿಸಿ ಗ್ರಾಮ ಪಂಚಾಯಿತಿಯ ಹತ್ತಿರದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದರು. ಆದರೂ ಸಹ ಯಾರು ಬಂದು ನಾಮಪತ್ರ ಸಲ್ಲಿಸಲಿಲ್ಲ. ಹಾಗೆಯೇ ನಾಮಪತ್ರ ಸಲ್ಲಿಸಲು ಅವಧಿ ಮುಗಿದ ನಂತರ ಗ್ರಾಮ ಪಂಚಾಯಿತಿ ಮುಂದೆ ಧರಣಿನಿರತರು ಸೇರಿ ಜೈಕಾರ ಕೂಗುತ್ತ ಕೊಲ್ಲಪುರದಮ್ಮ ದೇವಸ್ಥಾನ ಬಳಿಗೆ ತೆರದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ