ತಿಪಟೂರು :

ಕೇಂದ್ರದ ಮೋದಿ ಸರ್ಕಾರ ಮತ್ತು ರಾಜ್ಯದ ಯಡಿಯೂರಪ್ಪ ಸರ್ಕಾರ ಯಾವಾಗಲೂ ರೈತರ ಮತ್ತು ಜನಪರವಾದ ಯೋಜನೆಗಳಲ್ಲಿ ಅದರಲ್ಲೂ ನೀರಾವರಿಗೆ ಹೆಚ್ಚಿನ ಒತ್ತನ್ನು ನೀಡಿದ್ದು ಈಗಿನ 200 ಕೋಟಿ ರೂ. ಯೋಜನೆಯು ತಾಲ್ಲೂಕಿನ ಸಮಗ್ರ ನೀರಾವರಿ ಯೋಜನೆಯಾಗಿದೆ ಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಜೆ.ಪಿ ಸರ್ಕಾರ ರೈತರ ಪರವಾಗಿದೆ ಎಂಬುದನ್ನು ಈ ಯೋಜನೆಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ ಎಂದ ಅವರು, ತಾಲ್ಲೂಕಿಗೆ ನಿಗದಿಯಾಗಿದ್ದ 93 ಎಂ.ಸಿ.ಎಫ್.ಟಿ ಇಂದ 217 ಎಂ.ಸಿ.ಎಫ್.ಟಿಗೆ ಹೆಚ್ಚಿಸಿರುವುದು ಸಂತೋಷದಾಯಕ ವಿಷಯ. ಈ ಯೋಜನೆಯಲ್ಲಿ ತಾಲ್ಲೂಕಿನ 96 ಕೆರೆಗಳಿಗೆ ಜನಸಂಖ್ಯೆಯ ಆಧಾರದ ಮೇಲೆ ನೀರನ್ನು ಹರಿಸಲಾಗುವುದು. ಇದರಲ್ಲಿ ಸ್ವಾಭಾವಿಕವಾಗಿ ಹಳ್ಳದ ಮೂಲಕ ಹಾಗೂ ಹಳ್ಳದ ಮೂಲಕ ಸಾಧ್ಯವಾಗದ್ದರೆ ಏತನೀರಾವರಿ ಮೂಲಕ ನೀರನ್ನು ಬಿಡಲಾಗುವುದು ಈ ಯೋಜನೆಯನ್ನು ಜಾರಿಮಾಡುವಲ್ಲಿ ಸಹಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ನೀರಾವರಿ ಹೋರಾಟಗಾರರು ಎಲ್ಲಿದ್ದರು: ಲೋಕಸಭಾ ಮತ್ತು ಗ್ರಾಮ ಪಂಚಾಯಿತಿ ಚುನಾವಣೆ ಬಂದಾಗ ನೀರಿಗಾಗಿ ಹೋರಾಟ ಮಾಡುತ್ತಿರುವವರು ಹಿಂದಿನ ಕಾಂಗ್ರೆಸ್ ಸರ್ಕಾರವಿದ್ದಾಗ ಎಲ್ಲಿ ಹೋಗಿದ್ದರು. ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ್ದರಿಂದ ಇಂದು ರೈತರು ಗ್ರಾಮ ಪಂಚಾಯಿತಿಯಲ್ಲಿ ಆಗುತ್ತಿದ್ದ ಕೆಲಸಕ್ಕೆ ತಾಲ್ಲೂಕು ಕಛೆರಿಗೆ ಅಲೆಯುವಂತೆ ಮಾಡಿ ಸಾಮಾನ್ಯ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದರು.
ನಾನು ಶಾಸಕನಾದ ಮೇಲೆ ಯಾರಾದರು ನಮಗೆ ನೀರಿಗಾಗಿ ಸಮಸ್ಯೆ ಇದೆ ಎಂದು ಯಾರೂ ತಿಳಿಸಿಲ್ಲ, ಹೋಗಲಿ ಶಾಸಕರು ಏನುಮಾಡುತ್ತಿದ್ದಾರೆಂದು ಯಾರಾದರು ನಮ್ಮನ್ನು ಕೇಳಿದ್ದಾರೆಯೇ ಇವರೆಲ್ಲಾ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಾಗಿ ಸ್ಪರ್ಧಿಸಲು ರಾಜಕೀಯ ಪ್ರೇರಿತವಾಗಿ ಧರಣಿ ನಡೆಸುವವರಾಗಿದ್ದಾರೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನಾಲೆಯಿಂದ ನೀರೆತ್ತಲು ಮೋಟಾರ್ ಆನ್ ಅಂಡ್ ಆಫ್ ಮಾಡುವ ವ್ಯವಸ್ಥೆ ಇತ್ತು, ಆಗ ನಾನೇ ಹೊನ್ನವಳ್ಳಿಯಲ್ಲಿ ಧರಣಿ ಕುಳಿತಿದ್ದೆ ಆಗ ಈ ಹೋರಾಟಗಾರರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಎ.ಪಿ.ಎಮ್.ಸಿ.ಅಧ್ಯಕ್ಷ ದಿವಾಕರ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ದೊಡ್ಡಯ್ಯ ಮತ್ತಿರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








