ತಿಪಟೂರು :
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯರನ್ನು ತಿಂಗಳು ತಿಂಗಳು ಸೂಕ್ತವಾಗಿಯೇ ಪರೀಕ್ಷಿಸುತ್ತಾರೆ. ಆದರೆ ಪ್ರಸವದ ಸಂದರ್ಭದಲ್ಲಿ ಮಾತ್ರ ವೈದ್ಯರು ಇರುವುದಿಲ್ಲ, ವೈದ್ಯರಿದ್ದರೆ ಅನಸ್ತೇಷಿಯಾ ಕೊಡುವವರು ಇರುವುದಿಲ್ಲ, ಎಲ್ಲರೂ ಇದ್ದರೆ ವಿದ್ಯುತ್ ಇರುವುದಿಲ್ಲ, ಆಗ ತಾಯಿ ಮಗುವಿನ ಆರೋಗ್ಯದ ದೃಷ್ಠಿಯಿಂದ ದುಬಾರಿ ಬೆಲೆತೆತ್ತು ಖಾಸಗಿ ಆಸ್ಪತ್ರೆಗೆ ಹೋಗದೇ ವಿಧಿಇಲ್ಲ ಎಂದು ತಾ.ಪಂ ಸದಸ್ಯೆ ಕಾವ್ಯ ಪ್ರಸನ್ನ ಆಕ್ರೋಶವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಈ ವಿಚಾರವಾಗಿ ಧನಿಗೂಡಿಸಿದ ತಾ.ಪಂ ಸದಸ್ಯ ಸುರೇಶ್, ಊರತುಂಬೆಲ್ಲಾ ಮಾಸ್ಕ್ ಹಾಕಿಲ್ಲವೆಂದು ದಂಡಹಾಕುತ್ತಾರೆ. ಆದರೆ ರೋಗಿಗಳೇ ತುಂಬಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಸ್ಯಾನಿಟೈಸರ್ ಇಲ್ಲದೇ ಇದ್ದರೂ ಯಾರು ಗಮನಕ್ಕೆ ತೆಗೆದುಕೊಳ್ಳದಿರುವುದು ಸಾರ್ವಜನಿಕ ಆಸ್ಪತ್ರೆಯೇ ಕೊರೊನಾದ ಹಾಟ್ಸ್ಪಾಟ್ ಆಗುತ್ತದೆ, ಮೊದಲು ಅದನ್ನು ಸರಿಪಡಿಸಿ ಎಂದರು.
ಇದಕ್ಕೆ ಉತ್ತರಿಸಿದ ತಾಲ್ಲೂಕು ವೈದ್ಯಾಧಿಕಾರಿ, ಆಸ್ಪತ್ರೆಯಲ್ಲಿ ಮಾಸ್ಕ್ ಮತ್ತು ಸ್ಯಾನೀಟೈಸರ್ಗೆ ವ್ಯವಸ್ಥೆಮಾಡಲಾಗುವುದೆಂದು ಮತ್ತು ಆಡಳಿತ ವೈದ್ಯಾಧಿಕಾರಿಗಳಿಗೆ ಆಸ್ಪತ್ರೆಯ ಸಮಸ್ಯೆಗಳನ್ನು ತಿಳಿಸಿ ಪರಿಹರಿಸಲಾಗುವುದೆಂದು ತಿಳಿಸಿದರು.
ಅನುದಾನಕ್ಕಾಗಿ ಸದಸ್ಯರ ಕಿತ್ತಾಟ: ತಾಲ್ಲೂಕು ಪಂಚಾಯಿತಿಯ ಸದಸ್ಯರ ಅಧಿಕಾರವಧಿಯ ಇದು ಕಡೆಯ ಸಾಮಾನ್ಯಸಭೆ. ನಿಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಹಾಕಿದ್ದಾರೆ ನಮಗೆ ಏಕೆ ಕೊಟ್ಟಿಲ್ಲ, ಅನುದಾನವನ್ನು ಸಮನಾಗಿ ಹಂಚಿಕೆಯಾಗಿಲ್ಲವೆಂದು ತಾ.ಪಂ ಸದಸ್ಯ ಸಿದ್ದಾಪುರ ಸುರೇಶ್ ಆರೋಪಿಸಿದರು.
ತಾ.ಪಂ ಅಧ್ಯಕ್ಷ ಶಿವಸ್ವಾಮಿ ಮಾತನಾಡಿ, ಕೆಲವು ಸಂದರ್ಭಗಳಲ್ಲಿ ಪಕ್ಕದ ಗ್ರಾ.ಪಂನವರು ನಿಮ್ಮ ಕ್ಷೇತ್ರದಲ್ಲೇ ತಾ.ಪಂ ಕ್ಷೇತ್ರಕ್ಕೆ ಸೇರಿರುವುದರಿಂದ ಅಲ್ಲಿಗೆ ಅನುದಾನವನ್ನು ಹಾಕಲಾಗಿರುತ್ತದೆ ಎಂದು ಸಮಜಾಯಿಷಿ ನೀಡಿದರು. ಅಷ್ಟಕ್ಕೇ ಸುಮ್ಮನಾಗದ ಸದಸ್ಯರು, ನಿಮ್ಮ ಕ್ಷೇತ್ರಕ್ಕೆ ಅವರ ಕಾಲದಲ್ಲಿ ಹೆಚ್ಚಿನ ಅನುದಾನವಾಗಿದೆ ಆಗ ಏನು ಕೇಳಲಿಲ್ಲ ಎಂದು ಸಭೆಯಲ್ಲಿ ಕೆಲಕಾಲ ಗದ್ದಲವನ್ನು ಸೃಷ್ಠಿಸಿದರು.
ಪಿ.ಡಿ.ಓಗೆ ಲಂಚ ಕೊಡಬೇಕೆ :
ತಾ.ಪಂ ಅಧ್ಯಕ್ಷರನ್ನು ನಾವು ಮಾಡಿಸಿದ ಕೆಲಸದ ಬಾಬ್ತನ್ನು ಕೊಡಬೇಕಾದರೆ ಪಿ.ಡಿ.ಓ ಮತ್ತು ಸಂಬಂಧಿಸಿದ ಇಂಜಿಯರ್ಗಳಿಗಳು ಬಿಲ್ನ ಮೊತ್ತವನ್ನು ಹಿಡಿದುಕೊಂಡು ಕೊಡುತ್ತಾರೆ. ಕೇಳಿದರೆ ಪಿ.ಡಿ.ಓಗೆ 2 ಸಾವಿರ ಹಣವನ್ನು ಕೊಡಬೇಕೆಂದು ತಿಳಿಸುತ್ತಾರೆಂದು ಮುಗ್ದವಾಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತಾ.ಪಂ ಇ.ಓ ಇದರ ಬಗ್ಗೆ ಲಿಖಿತವಾಗಿ ದೂರು ಕೊಡಿ ಪರೀಕ್ಷಿಲಾಗುತ್ತದೆ ಎಂದು ತಿಳಿಸಿದರು.
ಜನವರಿ 9ನೇ ತಾರೀಖಿನಿಂದಲೇ ರೈತರಿಂದ ರಾಗಿ ಖರೀದಿಗೆ ದಾಖಲಾತಿ ಪ್ರಾರಂಭವಾಗಿದೆ. ಆದರೆ ಇದುವರೆಗೂ 4925 ಜನರ ನೊಂದಣಿಯಾಗಿದೆ. ಇದನ್ನು ನೀವು ಖರೀದಿಸುವುದು ಯಾವಾಗ ಅವರಿಗೆ ಯಾವರೀತಿ ತಿಳಿಸುತ್ತೀರ ಎಂದು ತಾ.ಪಂ ಸದಸ್ಯರು ಕೇಳಿದರು. ಇದಕ್ಕೆ ಉತ್ತರಿಸಿದ ರಾಗಿ ಖರೀದಿ ಅಧಿಕಾರಿ ನಾವು ವ್ಯಸ್ಥಿತವಾಗಿ ಮಾಡಿದ್ದು ರಾಗಿ ಖರೀದಿಗಾಗಿ ಮಾಡುವ ದಿನವನ್ನು ರೈತಿಗೆ ತಿಳಿಸಿಲಾಗುವುದು ಈಗಾಗಲೇ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿ ಎಲ್ಲರಿಂದಲೂ ರಾಗಿ ಖರೀದಿಸಲಾಗುವುದೆಂದು ತಿಳಿಸಿದರು.
ಕೊರೋನಾದಿಂದ ನಲುಗಿರುವ ಸಂದರ್ಭದಲ್ಲಿ ಶಾಲೆಗಳು ಪ್ರಾರಂಭವಾಗುತ್ತಿವೆ. ಆದರೆ ಶಾಲೆಯಲ್ಲಿ ನೀವು ಎಸ್.ಓ.ಪಿ ಪ್ರಕಾರ ಉತ್ತಮವಾಗಿ ನಿರ್ವಹಿಸುತ್ತೀರಾ, ಆದರೆ ಮಕ್ಕಳು ಶಾಲೆಗೆ ಬರುವಾಗ ಸಿಕ್ಕ ಸಿಕ್ಕವಾಹನಗಳಲ್ಲಿ ಕ್ಕಿಕ್ಕಿರಿದು ತುಂಬಿಕೊಂಡು ಬರುತ್ತಾರೆ. ಆ ಮಕ್ಕಳಿಗೆ ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಮಾಡಿ ಹಾಗೂ ಜೂನ್ನಲ್ಲಿ 10ನೇ ತರಗತಿ ಪರೀಕ್ಷೆ ಇದ್ದು ಅಷ್ಟರೊಳಗೆ ಪಠ್ಯಕ್ರಮ ಮುಗಿಯುವುದೇ ಎಂದು ತಾ.ಪಂ ಸದಸ್ಯ ಮಣಕಿಕೆರೆ ರವಿಕುಮಾರ್ ಪ್ರಶ್ನಿಸಿದರು. ಇದೇ ವೇಳೆ ಖಾಸಗಿ ಶಾಲೆಯ ಶುಲ್ಕದ ಬಗ್ಗೆಯೂ ಸದಸ್ಯರು ಪ್ರಶ್ನಸಿದರು.
ಇದಕ್ಕೆ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಉತ್ತರಿಸಿ, ಸರ್ಕಾರಿ ನಿಯಮದ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆ. ಈ ಬಾರಿ ಬೆಸಿಗೆ ರಜೆ ಇರುವುದಿಲ್ಲ ಹಾಗೂ ಪಠ್ಯಕ್ರಮದಲ್ಲಿ ಶೇಕಡ 20ರಷ್ಟು ಕಡಿಮೆಮಾಡಿರುವುದರಿಂದ 10ನೇ ತರಗತಿ ಪರೀಕ್ಷೆ ವೇಳೆಗೆ ಸೂಕ್ತರೀತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರುಮಾಡುತ್ತೇವೆ ಎಂದು ತಿಳಿಸಿದರು. ಮತ್ತು ಖಾಸಗೀ ಶಾಲಾ ಶುಲ್ಕದ ಬಗ್ಗೆ ಸರ್ಕಾರ ಸದಸ್ಯದಲ್ಲೇ ತೀರ್ಮಾನಿಸುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ತಾ.ಪಂ ಉಪಾದ್ಯಕ್ಷ ಶಂಕರ್, ಸ್ಥಾಯಿಸಮಿತಿ ಅಧ್ಯಕ್ಷೆ ಜಯಂತಿ ಕುಮಾರ್, ತಾ.ಪಂ.ಇ.ಓ ಸುದರ್ಶನ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
