ತಂಬಾಕು ಸೇವನೆಯಿಂದ ಪ್ರತಿವರ್ಷ 10ಲಕ್ಷ ಸಾವು

 ತಿಪಟೂರು : 

      ಐ.ಪಿ.ಹೆಚ್. ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗು ಜಿಲ್ಲೆಯ ಶಿಕ್ಷಣ ಇಲಾಖೆಗಳೊಂದಿಗೆ ಒಗ್ಗೂಡಿ, “ತಂಬಾಕು ಮುಕ್ತ ಶಾಲೆ” ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಈ ಅಭಿಯಾನದ ಅಡಿಯಲ್ಲಿ ಶಾಲೆಗಳನ್ನು ತಂಬಾಕು ಮುಕ್ತ ಮಾಡಲು ಪಣತೊಟ್ಟಿದ್ದು, ಇದರಿಂದ ಮಕ್ಕಳನ್ನು ತಂಬಾಕು ದುಶ್ಚ್ಚಟದಿಂದ ದೂರವಿಡಲು ಸರಕಾರವು ರೂಪಿಸಿರುವ ಕಾಯಿದೆಯನ್ನು ಅನುಷ್ಠಾನ ಮಾಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಡಾ||ಚಂದ್ರಶೇಖರ್ ಕೊಟಗಿ ತಿಳಿಸಿದರು.

      ಅವರು ಬುಧವಾರ ನಗರದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಇನ್‍ಸ್ಟ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ಬೆಂಗಳೂರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತುಮಕೂರು ಜಿಲ್ಲೆರವರ ಸಹಯೋಗದೊಂದಿಗೆ ತಿಪಟೂರು ಪಟ್ಟಣದಲ್ಲಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ “ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ” ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

      ತಂಬಾಕು ಸೇವನೆಯಿಂದ ಪ್ರತಿ ವರ್ಷ ದೇಶದಲ್ಲಿ 10 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ತಂಬಾಕು ದುಶ್ಚ್ಚಟವು ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾಗುವುದು ಬಹಳಷ್ಟು ಸಂಶೋಧನೆಗಳಿಂದ ತಿಳಿದು ಬಂದಿದೆ. ಇಂತಹ ದುಷ್ಪರಿಣಾಮವನ್ನು ಹಾಗೂ ಸಾವುಗಳನ್ನು ತಡೆಗಟ್ಟಬಹುದಾಗಿದೆ. ಸರ್ಕಾರವು ಪ್ರತಿಯೊಂದು ಮಟ್ಟದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ತಂಬಾಕು ದುಶ್ಚ್ಚಟಕ್ಕೆ ಸಣ್ಣ ವಯಸ್ಸಿನಲ್ಲಿಯೇ ಮಕ್ಕಳು ಬಲಿಯಾಗುತ್ತಿದ್ದಾರೆ. ತಂಬಾಕು ಉತ್ಪನ್ನಗಳು ಶಾಲೆಯ ಹತ್ತಿರ 100 ಮೀಟರ್ ಒಳಗೆ ಸುಲಭವಾಗಿ ದೊರೆಯುವುದು ಹಾಗೂ ತಂಬಾಕು ಪದಾರ್ಥಗಳ ಸೇವನೆಯಿಂದ ಆರೋಗ್ಯದ ಮೇಲುಂಟಾಗುವ ದುಷ್ಪರಿಣಾಮಗಳ ಕುರಿತ ಅರಿವಿನ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿವೆ. ಮಕ್ಕಳನ್ನು ಈ ದುಶ್ಚಟದಿಂದ ದೂರವಿಡಲು ತಂಬಾಕು ನಿಯಂತ್ರಣ ಕಾಯಿದೆ ಕೋಟ್ಪಾ 2003 ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕಿದೆ ಹಾಗೂ ತಂಬಾಕು ಮುಕ್ತ ಶಾಲೆಗಳನ್ನು ನಿರ್ಮಾಣ ಮಾಡಬೇಕಿದೆ ಎಂದರು.

ತುಮಕೂರು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ರವಿ ಪ್ರಕಾಶ್ ಮಾತನಾಡಿ, “ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತ ಶಾಲೆಗಳನ್ನಾಗಿ ಮಾರ್ಪಾಡು ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಈ ಸಂಬಂಧ ಅಗತ್ಯವಿರುವ ಜಾಗೃತಿ ಕಾರ್ಯಕ್ರಮಗಳೂ ಸೇರಿದಂತೆ, ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದರು.

      ಕಾರ್ಯಾಗಾರದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಡಿ.ಎಸ್.ಮೂರ್ತಿ, ಐ.ಪಿ.ಹೆಚ್. ಸಂಸ್ಥೆಯ ಅಚ್ಯುತ ಎನ್.ಜಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತರಾದ ಹರೀಶ್ ಕೆ.ಎಸ್. ಮತ್ತು ತಾಲ್ಲೂಕಿನ ವಿವಿಧ ಶಾಲೆಗಳ 40ಕ್ಕೂ ಹೆಚ್ಚು ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link