ತಿಪಟೂರು : ಈಚನೂರು ಕೆರೆ ಹೂಳು ಸಾಗಾಟ ವಿವಾದ

ತಿಪಟೂರು :

      ನಗರಕ್ಕೆ ನೀರನ್ನು ಒದಗಿಸುತ್ತಿದ್ದ ಈಚನೂರು ಕೆರೆಯ ನೀರಿನ ಸಂಗ್ರಹಣಾ ಸಾಮಥ್ರ್ಯವನ್ನು ಹೆಚ್ಚಿಸುವ ಸಲುವಾಗಿ 30 ಕೋಟಿ ರೂ. ವೆಚ್ಚದಲ್ಲಿ ಕೆರೆಯಲ್ಲಿ 13 ಅಡಿ ಹೂಳು ತೆಗೆಯುವ ಕಾಮಗಾರಿ ಆರಂಭಿಸಲಾಗಿದ್ದು, ಈ ಬಗ್ಗೆ ಸ್ಥಳಿಯರಿಗೆ ಸೂಕ್ತ ಮಾಹಿತಿ ಇಲ್ಲದೆ ಹೂಳು ತೆಗೆದ ಮಣ್ಣಿನ ವಿಚಾರದಲ್ಲಿ ಜೂ. 03 ರ ಸಂಜೆ ರೈತರಿಗೂ ಮತ್ತು ಗುತ್ತಿಗೆದಾರರಿಗೂ ಮಾತಿನ ಚಕಮಕಿಯಾಗಿ ಪರಿಸ್ಥಿತಿ ವಿಕೋಪಕ್ಕೋದ ಘಟನೆ ನಡೆದಿದೆ.

      ವಿಷಯ ತಿಳಿದ ನಂತರ ಭಾನುವಾರ ಶಾಸಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು, ಗುತ್ತಿಗೆದಾರ ಹಾಗೂ ಈಚನೂರು ಮತ್ತು ಸುತ್ತಮುತ್ತಲಿನ ಜನರ ಸಮ್ಮುಖದಲ್ಲಿ ಸಭೆ ನಡೆಸಿ ಗೊಂದಲಗಳನ್ನು ಪರಿಹರಿಸಲಾಯಿತು. ಕೆರೆಯ ಹೂಳು ತೆಗೆಯುವುದರಿಂದ ಕೆರೆಯ ನೀರಿನ ಸಂಗ್ರಹಣಾ ಸಾಮಥ್ರ್ಯ 72 ಎಂ.ಸಿ.ಎಫ್.ಟಿಗೆ ಹೆಚ್ಚುವುದಲ್ಲದೆ ಮೋಟಾರ್ ಇಲ್ಲದೇ ಕರೆಯಲ್ಲಿ ಅರ್ಧ ನೀರು ತುಂಬುತ್ತದೆ. ಇದರಿಂದ ತಿಪಟೂರು ನಗರಕ್ಕೆ ಸದಾಕಾಲ ನೀರು ದೊರೆಯುತ್ತದೆ. ಹಾಗೂ ಇಲ್ಲಿನ ಅಂತರ್ಜಲವು ಹೆಚ್ಚುತ್ತದೆ. ಕೆರೆಗೆ ಯಾವುದೆ ಮ್ಯಾಟ್ ಅಳವಡಿಸುವುದಿಲ್ಲ ಎಂದು ಶಾಸಕ ಬಿ.ಸಿ.ನಾಗೇಶ್ ಸಭೆಯಲ್ಲಿ ತಿಳಿಸಿದರು.

      ಕೆರೆಯ ಮಣ್ಣನ್ನು ಹೆಚ್ಚಾಗಿ ಇಟ್ಟಿಗೆ ಕಾರ್ಖಾನೆಗಳಿಗೆ ಸಾಗಿಸುತ್ತಿದ್ದು, ರೈತರಿಗೆ ಯಾವಾಗಲೋ ಒಂದು ಲೋಡ್ ಮಣ್ಣನ್ನು ಕೊಡುತ್ತಾರೆ ಎಂದು ರೈತರು ಗುತ್ತಿಗೆದಾರನ ಬಳಿ ಶನಿವಾರ ಮಾತಿನ ಚಕಮಕಿ ನಡೆಸಿ ಹೂಳು ತೆಗೆಯುವುದನ್ನು ನಿಲ್ಲಿಸಿದ್ದರು. ಈ ಕುರಿತು ಭಾನುವಾರ ಸಭೆ ಕರೆದು ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಕೆರೆಯಲ್ಲಿ ಮಣ್ಣು ತುಂಬಲು 2 ಹಿಟಾಚಿ ಯಂತ್ರಗಳಿದ್ದು ಕೆರೆಯ ಮಣ್ಣನ್ನು ಉಚಿತವಾಗಿ ತಮ್ಮ ಜಮೀನಿಗೆ ತುಂಬಿಸಿಕೊಳ್ಳಬಹುದು ಹಾಗೂ ಲಾರಿಯಲ್ಲಿ ಹೊಡೆಸಿಕೊಳ್ಳುವುದಾದರೆ ಮಣ್ಣು ತುಂಬುವ ಸ್ಥಳದಿಂದ ಜಮೀನಿಗೆ ಹೋಗಿ ಬರುವುದು ಸೇರಿ 3 ಕಿ.ಮೀ ವ್ಯಾಪ್ತಿಗೆ ಉಚಿತ ಹಾಗೂ 3 ಕಿ.ಮೀಗಿಂತ ಹೆಚ್ಚಿನ ದೂರದ ಜಮೀನುಗಳಿಗೆ 1 ಕಿ.ಮೀಗೆ ಗರಿಷ್ಟ 175 ರೂ.ಗಳನ್ನು ನಿಗದಿಪಡಿಸಲಾಯಿತು. ಈ ವಿಚಾರ ತಿಳಿಯುತ್ತಿದ್ದಂತೆಯೆ ಸ್ಥಳೀಯ ದಲ್ಲಾಳಿಗಳು ಇದಕ್ಕಿಂತ ಕಡಿಮೆ ಹಣಕ್ಕೆ ಮಣ್ಣು ಹೊಡೆಯುತ್ತಿದ್ದರು ಸಭೆಯಲ್ಲಿ ಮಣ್ಣು ಹೊಡೆಸಿಕೊಳ್ಳುವ ದರ ಹೆಚ್ಚು ಮಾಡಿ ರೈತರಿಗೆ ಅನಾನೂಕೂಲ ಮಾಡಿದ್ದಾರೆ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದರು.

      ಕೆರೆಯಲ್ಲಿನ ಮಣ್ಣನ್ನು ತೆಗೆದುಕೊಳ್ಳಬಹುದೆ ವಿನಹ ಕೆರೆಯಲ್ಲಿ ಸಿಗಬಹುದಾದ ಮರಳನ್ನು ಯಾವುದೇ ಕಾರಣಕ್ಕೂ ಯಾರು ತುಂಬುವಹಾಗಿಲ್ಲ ಹಾಗೇನಾದರೂ ತುಂಬಿದರೆ ಅವರ ವಾಹನವನ್ನು ಜಫ್ತಿ ಮಾಡಲಾಗುವುದು, ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸಹಕರಿಸಿ ನಿಯಮ ಮೀರಿ ಮರಳು ತುಂಬಿದರೆ ಅವರ ವಾಹನದ ಸಂಖ್ಯೆಯನ್ನು ತಕ್ಷಣ ವಾಟ್ಸಾಪ್‍ನಲ್ಲಿ ಕಳಹಿಸಿ ಎಂದು ತಹಸೀಲ್ದಾರ್ ಚಂದ್ರಶೇಖರ್ ತಿಳಿಸಿದರು.

      ಕೆರೆಯ ಹೂಳನ್ನು ಬೆಳಗ್ಗೆ 6.30 ರಿಂದ 9.00, 10.00 ರಿಂದ 1.00 ಹಾಗೂ 2.10 ರಿಂದ ಸಂಜೆ 5 ಗಂಟೆಯವರೆಗೂ ತೆಗೆಯಬಹುದು, ಅಹಿತಕರ ಘಟನೆ ನಡೆಯದಂತೆ ಆರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗುವುದೆಂದು ಡಿವೈಎಸ್ಪಿ ತಿಳಿಸಿದರು.
ಪದೇ ಪದೇ ಹಿಟಾಚಿಗಳ ಸ್ಥಳ ಬದಲಾವಣೆ ಸಾಧ್ಯವಿಲ್ಲ, ಹಾಗೂ ರೈತರ ಟ್ರ್ಯಾಕ್ಟರ್‍ಗಳಿಗೆ ಮಣ್ಣು ತುಂಬಲು 2 ಹಿಟಾಚಿ ಲಭ್ಯವಿರುತ್ತದೆ ಜೊತೆಗೆ ಲಾರಿಗಳು ಇಲ್ಲದ ವೇಳೆ ಇತರ ಹಿಟಾಚಿಗಳಿಂದ ಮಣ್ಣು ತುಂಬಿಸಿಕೊಳ್ಳಬಹುದು ಎಂದು ಬಾವಾ ಕಂಪನಿಯ ವ್ಯವಸ್ಥಾಪಕ ನಾಗೇಶ್ವರ್‍ರಾವ್ ತಿಳಿಸಿದರು.

     ಸಭೆಯಲ್ಲಿ ಇಂಜಿನಿಯರ್ ಶಿವನಂಜಪ್ಪ, ಕಂದಾಯ ಇಲಾಖೆ, ಗುತ್ತಿಗೆದಾರ ಹಾಗೂ ಈಚನೂರು ಮತ್ತು ಸುತ್ತಮುತ್ತಲಿನ ಜನರು ಹಾಜರಿದ್ದರು.

 ಈಚನೂರು ಕೆರೆಯು ಸುತ್ತಮುತ್ತಲ ರೈತರಿಗೆ ಜೀವನಾಡಿಯಾಗಿದ್ದು ರೈತರಿಗೆ ಯಾವುದೇ ಅನ್ಯಾಯವಾಗದ ರೀತಿಯಲ್ಲಿ ಕಾಮಗಾರಿ ನಡೆಸಿ ರೈತರಿಗೆ ಅನುಕೂಲಮಾಡಿ ಕೊಡಿ

 -ನ್ಯಾಕೇನಹಳ್ಳಿ ಸುರೇಶ್, ತಾ.ಪಂ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು

      ಕೆರೆಯ ಅಂಗಳಕ್ಕೆ ಮ್ಯಾಟ್ ಅಳವಡಿಸಲ್ಲ ಹಿಂದಿನ ಕಾಲದಲ್ಲಿ ಕೆರೆ ನಿರ್ಮಾಣ ಮಾಡಬೇಕಾದರೆ ಕೆರೆಯ ಅಂಗಳದಲ್ಲಿ ಎಲ್ಲಿ ಸಡಿಲ ಮಣ್ಣಿರುತ್ತದೋ ಅಲ್ಲಿ ಜೇಡಿಮಣ್ಣನ್ನು ಹಾಕಿ ಎಮ್ಮೆಗಳಿಂದ ತುಳಿಸಿ ನೆಲವನ್ನು ಗಟ್ಟಿಮಾಡಲಾಗುತ್ತಿತ್ತು ಅದೇ ಕ್ರಮವನ್ನು ಅನುಸರಿಸಿ ಜೇಡಿಮಣ್ಣಿನ ಪರದೆಯೊಂದನ್ನು ಹಾಕುತ್ತೇವೆ ಹೊರತು ಯಾವುದೇ ಮ್ಯಾಟ್ ಅಳವಡಿಸುವುದಿಲ್ಲ.

-ಬಿ.ಸಿ.ನಾಗೇಶ್, ಶಾಸಕರು

       ಸಭೆಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಕಡಿಮೆ ದರಕ್ಕೆ ದಲ್ಲಾಳಿಗಳು ಮಣ್ಣನ್ನು ಹೊಡೆಯುತ್ತಿದ್ದರು ಆದರೆ ಸಭೆಯ ನಂತರ ಮಣ್ಣಿನ ದರ ಹೆಚ್ಚಾಗಿದೆ. ದರ ಕಡಿಮೆ ಮಾಡಿ ಉತ್ತಮ ಮಣ್ಣನ್ನು ಮೊದಲು ರೈತರಿಗೆ ಕೊಡಿ, ರೈತರಿಗೆ ಸಾಕಾದ ನಂತರ ಮಣ್ಣನ್ನು ಎಲ್ಲಿಗಾದರು ಕೊಡಿ.

-ರೈತರು

-ರಂಗನಾಥ್ ಪಾರ್ಥಸಾರಥಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap