ತಿಪಟೂರು :
ಬಂಡೆಯನ್ನೇ ದೇವರೆಂದು ತಿಳಿದು ಬಂಡೆಯನ್ನು ಪೂಜಿಸಿ, ಸಾಂಪ್ರದಾಯಕ ವಿಧಾನದಿಂದ ಚಮಟಿಗೆ ಹುಳಿ ಬಳಸಿ, ಕಲ್ಲನ್ನು ಸುಟ್ಟು ಚಪ್ಪಡಿ, ಕಂಬಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಜನರಿಗೆ ಇಂದು ಅದೇ ಬಂಡೆಯೇ ಜೀವವನ್ನು ತೆಗೆಯುವ ಆತಂಕದಿಂದ ಜೀವನ ಸಾಗಿಸುವಂತಾಗಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಬಂಡೆಗೇಟ್, ಶಾಂತಿನಿವಾಸ ಎಸ್ಟೇಟ್ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು ತಮ್ಮ ಜೀವವನ್ನು ಕೈನಲ್ಲಿ ಹಿಡಿದು ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಡೇಗೇಟ್ ಮತ್ತು ಶಾಂತಿನಿವಾಸ ಎಸ್ಟೇಟ್‍ನಲ್ಲಿ ಸುಮಾರು 200 ಮನೆಗಳಿದ್ದು ಬಹುತೇಕ ಮನೆಗಳಲ್ಲಿ ಒಬ್ಬರಲ್ಲಾ ಒಬ್ಬರು ಅನಾರೋಗ್ಯದಿಂದ ಬಳಲುತ್ತಿರುವುದು ಸಾಮಾನ್ಯವಾಗಿದೆ. ಮುಖ್ಯವಾಗಿ ಕೆಮ್ಮು, ಕಣ್ಣು ಉರಿ, ಜ್ವರದಂತಹ ರೋಗಗಳ ಜೊತೆಗೆ ಯಾವಾಗ ಜೀವ ಹೋಗುತ್ತದೆ ಎಂಬುದೇ ತಿಳಿಯದೇ ಜೀವಿಸುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿ ಒಂದೇ ಕಾರಣ ಅದು ಕಲ್ಲು ಗಣಿಗಾರಿಕೆ.
ಕೆ.ಜಿ.ಸಿ.ಐ.ಎಲ್.ಜಿ.ಎಲ್.ಸಿ ಜ್ಯಾಂಟ್ ವೆಂಚರ್ಸ್ ಎಂಬ ಕಂಪನಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದು ಅತ್ಯದಿಕ ಪ್ರಮಾಣದ ಡಿಟೋನೇಟರ್, ಡೈನಾಮೆಂಟ್‍ಗಳನ್ನು ಬಳಸಿ ಕಲ್ಲನ್ನು ಸಿಡಿಸುತ್ತಿದ್ದು ಆ ಸದ್ದಿಗೆ ಜನರು ಹೃದಯ ಹೊಡೆದು ಹೋಗುವ ಪರಿಸ್ಥಿತಿಯ ಜೊತೆಗೆ ಗಭೀರ್ಣಯರಿಗೆ ಗರ್ಭಪಾತವಾದರು ಆಶ್ಚರ್ಯವೇನಿಲ್ಲವೆಂದು ಸ್ಥಳೀಯರು ತಿಳಿಸುತ್ತಾರೆ. ಮುಖ್ಯವಾಗಿ ಕಂಪನಿಯವರು ಹೇಳುವಂತೆ ಸಂಜೆ 4-5 ಗಂಟೆಯ ಸುಮಾರಿಗೆ ಸೈರನ್ ಹಾಕುತ್ತಾರೆ. ಆಗ ಯಾರು ಮನೆಯ ಒಳಗೆ ಇರಬಾರದು, ಹಾಗೇನಾದರು ಇದ್ದು ಪ್ರಾಣಪಾಯವಾದರೆ ನಮಗೆ ಸಂಬಂಧವಿಲ್ಲವೆಂದು ಕಂಪನಿಯವರು ತಿಳಿಸುತ್ತಾರೆ. ಈ ಸಿಡಿಮದ್ದನ್ನು ಬಳಸಿ ಬಂಡೆಯನ್ನು ಹೊಡೆದ ನಂತರ ಬರುವ ಹೊಗೆಯಿಂದ ಸುತ್ತಮುತ್ತಲ 4-5 ಕಿಲೋಮೀಟರ್‍ಗಳಷ್ಟು ದೂರ ದಟ್ಟವಾದ ಹೊಗೆ ಆವರಿಸಿದಾಗ ಒಬ್ಬರ ಮುಖ ಒಬ್ಬರಿಗೆ ಕಾಣುವುದಿಲ್ಲ. ಜೊತೆ ಉರಸಿರಾಟ ಸಾಧ್ಯವಾಗದಷ್ಟು ಕೆಟ್ಟವಾಸನೆ ಬರುತ್ತದೆ. ಆದ್ದರಿಂದ ಈ ಕಲ್ಲುಗಣಿಗಾರಿಕೆ ಸಮಸ್ಯೆಯನ್ನು ಪರಿಹರಿಸಿ ಎಂದು ಶುಕ್ರವಾರ ಒಂದು ತಂಡ ಬಿ.ಜೆ.ಪಿ ಮುಖಂಡ ಲೋಕೇಶ್ವರ್ ಮನೆಗೆ ತೆರಳಿ ದೂರನ್ನು ಸಲ್ಲಿಸುವುದರ ಜೊತೆಗೆ ಇಂದು ಬಂಡೆ ಹೊಡೆಯಲು ತಂಡಿದ್ದ ಅಪಾರ ಸಿಡಿಮದ್ದಿನ ವಾಹನ ಮತ್ತು ಸಿಡಿಮದ್ದುಗಳ ಚಿತ್ರಗಳನ್ನು ತಂದು ತೋರಿಸಿದ್ದಾರೆ.
ಅಧಿಕ ಪ್ರಮಾಣದ ಸಿಡಿಮದ್ದು ಪತ್ತೆ :
ಕಲ್ಲು ಗಣಿಗಾರಿಕೆ ನಡೆಸುವ ಕಂಪನಿಯವರು ಹೇಳುವಂತೆ ನಾವು ಹೆಚ್ಚಿಗೆ ಸಿಡಿಮದ್ದು ಸಿಡಿಸುವುದಿಲ್ಲವೆಂದು ಹೇಳುತ್ತಾರೆ. ಆದರೆ ಇಂದು ಬೆಳಗ್ಗೆ ಕಲ್ಲುಗಣಿಗಾರಿಕೆ ನಡೆಸುವ ಸ್ಥಳದಲ್ಲಿ ಒಂದು ವಾಹನದ ಸಂಫುರ್ಣವಾಗಿ ಸಿಡಿಮದ್ದನ್ನು ತುಂಬಿರುವುದನ್ನು ಸ್ಥಳೀಯರು ಪತ್ತೆಹಚ್ಚಿದ್ದು ಅದರ ಛಾಯಾಚಿತ್ರಗಳನ್ನು ತೆಗೆದಿದ್ದಾರೆ. ಇವರನ್ನು ನೋಡಿದ ಕಲ್ಲುಗಣಿಗಾರಿಕೆಯವರು ಸಿಡಿಮದ್ದನ್ನು ಸಿಕ್ಕಸಿಕ್ಕ ಕಡೆಗಳಲ್ಲಾ ಎಸೆದಿದ್ದು ಅಧಿಕಾರಿಗಳಿಗೆ ಮಾಹಿತಿ ತಿಳಿಸುವ ಹೊತ್ತಿಗೆ ಸಿಡಿಮದ್ದು ತುಂಬಿದ್ದ ವಾಹನವನ್ನು ಸ್ಥಳದಿಂದ ಕಣ್ಮರೆಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದಲ್ಲದೇ ಹೆಚಿನ ಪ್ರಮಾಣದ ಸಿಡಿಮದ್ದನ್ನು ಬಳಸಿ ಬಂಡೆಯನ್ನು ಹೊಡೆದಿರುವುದಕ್ಕೆ ಸಾಕ್ಷಸಿಕ್ಕರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಈ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಗುಡ್ಡಗಳ ಕೆಳಗೆ ನಾಲ್ಕಾರು ಕಟ್ಟೆಗಳಿದ್ದು ಇಲ್ಲಿ ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳಿಗೆ ಕುಡಿವ ನೀರನ್ನು ಒದಗಿಸುತ್ತಿವೆ. ಆದರೆ ಈ ಕಲ್ಲುಗಣಿಗಾರಿಕೆ ಬರುವ ಧೂಳು ಮತ್ತು ಹೊಗೆಯಿಂದ ನೀರು ಹಾಳಾಗಿದ್ದು ದನಕರುಗಳು ನೀರನ್ನು ಕುಡಿಯುತ್ತಿಲ್ಲ, ಜೊತೆಗೆ ಇಲ್ಲಿನ ಧೂಳು ತೆಂಗಿನ ಮರದ ಮೇಲೆ ಕುಳಿತು ತೋಟಗಳು ಹಾಳಾಗುತ್ತಿದ್ದು ನಮಗೆ ಬದಕಲು ಬೇರೆ ನೆಲೆಇಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.
ಕೊಳವೆ ಬಾವಿಗಳಿಗೆ ಹಾನಿ :
ಬೆನ್ನಾಯಕನಹಳ್ಳಿ ಸರ್ವೇ ನಂ 128ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಇಂದ ಸುತ್ತಮುತ್ತಲ ಹಳ್ಳಿಗಳಲ್ಲಿ ಅಂರ್ತಜಲ ಸಂಪೂರ್ಣವಾಗಿ ಕುಸಿಯುವದರ ಜೊತೆಗೆ ಸುತ್ತಮುತ್ತಲಿನ ಹಳ್ಳಿಗಳ ಮನೆಗಳು ಯಾವಾಗ ಬೀಳುತ್ತವೋ ಎಂಬ ಪರಿಸ್ಥಿತಿಯಲ್ಲಿ ಸೈರನ್ ಕೂಗಿದ ತಕ್ಷಣ ಮನೆಯಿಂದ ಆಚೆ ಓಡಿಬರುತಿದ್ದಾರೆ. ಮತ್ತು ಈ ಸ್ಪೋಟದಿಂದ ಬಂಡೆ ಮತ್ತು ಮಣ್ಣಿನ ಪದರಗಳ ಜರುಗುವಿಕೆಯಿಂದ ಕೊಳವೆ ಬಾವಿಗಳು ಹಾಳಾಗಿ ಮೋಟರ್‍ಗಳು ಸಿಕ್ಕಿಹಾಕಿಕೊಂಡು ಉದಾಹರಣೆಗಳು ಸಾಕಷ್ಟಿವೆ.
ರೈತರು ತಮ್ಮ ದೈನಂದಿನ ಉದ್ದೇಶಕ್ಕೂ ಇಲ್ಲ ಯಾವುದಾರು ಉದ್ದೇಶಕ್ಕೆ ವಿದ್ಯುತ್ ಎಳೆದುಕೊಂಡರೆ ಅವರಿಗೆ ಹಲವಾರು ದಂಡವನ್ನು ವಿಧಿಸುವ ಬೆಸ್ಕಾಂ ಅಧಿಕಾರಿಗಳು ಇಲ್ಲಿ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಸುಮಾರು 1 ಕಿಲೋ ಮೀಟರ್ ದೂರದಿಂದ ನೇರವಾಗಿ ವಿದ್ಯುತ್ ಪರಿವರ್ತಕದಿಂದೇ ವಿದ್ಯುತ್ ಕದಿಯುತ್ತಿದ್ದರೂ ಕಣ್ಮುಚ್ಚಿಕುಳಿತಿದ್ದಾರೆ. ಇದರಿಂದ ರೈತರಿಗೆ ಒಂದು ಕಾನೂನು, ಉದ್ಯಮಿಗಳಿಗೆ ಒಂದು ಕಾನೂನು ಎಂಬಂತಾಗಿದೆ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.
ಪರಿಸರ, ರಸ್ತೆ ಹಾಳು :
ದೇಶದ ಅಭಿವೃದ್ಧಿಯಾದರೆ ನಮಗೂ ಸಂತೋಷ ಆದರೆ ದೇಶದ ಅಭಿವೃದ್ಧಿಯ ನೆಪದಲ್ಲಿ ನಮ್ಮ ಪರಿಸರ ಮತ್ತು ರಸ್ತೆಯನ್ನು ಹಾಳಾದರೆ ನಮ್ಮ ಯಾರು ಹೊಣೆ. ಕಲ್ಲು ಗಣಿಗಾರಿಕೆ ಕಂಪನಿ ವಾಹನದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಲ್ಲನ್ನು ತುಂಬಿ ಸಾಗಿಸುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು ಸಾರಿಗೆ ಇಲಾಖೆಯವರ ಕಣ್ಣಿಗೆ ಇವರ ವಾಹನಗಳು ಬಿದ್ದಿಲ್ಲವೇ, ನಮ್ಮ ಚಿಕ್ಕಪುಟ್ಟ ವಾಹನದಲ್ಲಿ ದಾಖಲೆಗಳು ಇಲ್ಲವೆಂದು ಅಪಾರ ಪ್ರಮಾಣದ ದಂಡವನ್ನು ವಿಧಿಸುವ ಅಧಿಕಾರಿಗಳಿಗೆ ವಾಹನಗಳನ್ನು ಕಂಡರೆ ದಂಡವಿಧಿಸದೇ ಇರಲು ಸಾಧ್ಯವೇ ಇಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಲ್ಲು ಗಣಿಗಾರಿಕೆ ಕಾನೂನು ಪ್ರಕಾರವಿದೆ ಇದನ್ನು ತಡೆಯುವ ಹಾಗಿಲ್ಲವೆಂದು ತಿಳಿಸುವ ಜನಪ್ರತಿನಿಧಿಗಳ ಕಣ್ಣಿಗೆ ಪರಿಸರ ಹಾಲಾಗುವುದು ಕಾಣುತ್ತಿಲ್ಲವೇ, ಇಲ್ಲಿನ ಜನರು ಜೀವವನ್ನು ಕೈನಲ್ಲಿಡಿದು ಬದುಕುತ್ತಿದ್ದು ನಾನಾ ರೋಗಗಳಿಂದ ಬಳಲುತ್ತಿದ್ದರು ಯಾರು ಗಮನಿಸದಿರುವುದು ವಿಪರ್ಯಾಸ.
-ಶಂಕರಯ್ಯ, ಸ್ಥಳೀಯ ನಿವಾಸಿ
ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಪಕ್ಕದಲ್ಲಿ ಸಾವಿರಾರು ಎಕರೆ ಅರಣ್ಯ ಪ್ರದೇಶವಿದೆ, ಅಲ್ಲೂ ಬಂಡೆ ಇದೆ ಅಲ್ಲಿ ಕಲ್ಲು ತೆಗೆಯಿರಿ ಎಂದರೆ ಅದು ಅರಣ್ಯ, ಪ್ರಾಣೀ ಪಕ್ಷಿಗಳಿಗೆ ತೊಂದರೆ ಯಾಗುತ್ತದೆ ಎನ್ನುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಇಲ್ಲಿನ ನಿವಾಸಿಗಳು ಪ್ರಾಣಿಗಿಂಗ ಕಡೆಯಾದರೆ ಅಥವಾ ಇಲ್ಲಿನ ಜನರು ಇರುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಾಗುತ್ತಾರೆಯೇ.
-ಭರತ್, ಸ್ಥಳೀಯ ಯುವಕ
ಕಲ್ಲುಗಣಿಗಾರಿಕೆ ಮಾಡುವುದು ಕಾನೂನಿನ ಪ್ರಕಾರವಾಗಿದ್ದರು ಇಲ್ಲಿ ಯಾವುದೇ ಸರ್ಕಾರದ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಜೊತೆಗೆ ಅತಿಯಾದ ಸಿಡಿಮದ್ದುಗಳನ್ನು ಸಂಗ್ರಹಿಸಿರುವುದು ಇನ್ನೊಂದು ಕಲ್ಲುಗಣಿ ಸ್ಪೋಟಗೊಂಡು ಜೀವಹಾನಿ ಯಾಗುವ ಮೊದಲೇ ಅಧಿಕಾರಿಗಳು ಕ್ರಮವಹಿಸಬೇಕು ಮತ್ತು ಸಂಬಂಧ ಪಟ್ಟ ಇಲಾಖೆಯವರು ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು.
-ಲೋಕೇಶ್ವರ್, ನಿವೃತ್ತ ಎ.ಸಿ.ಪಿ ಹಾಗೂ ಬಿ.ಜೆ.ಪಿ ಮುಖಂಡ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ