ತಿರುಪತಿಯಲ್ಲಿ ರಶ್‌ ಕಡಿಮೆ ಮಾಡಲು ಸೂಪರ್‌ ಡೂಪರ್‌ ಐಡಿಯಾ ಜಾರಿ….!

ತಿರುಪತಿ:

    ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ  2024ರಲ್ಲಿ ಸಂಭವಿಸಿದ ದುರಂತದಲ್ಲಿ ಆರು ಜನ ಸಾವನ್ನಪ್ಪಿ, 40ಕ್ಕೂ ಹೆಚ್ಚು ಜನ ಗಾಯಗೊಂಡ ಒಂಬತ್ತು ತಿಂಗಳ ನಂತರ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು  ಸೆಪ್ಟೆಂಬರ್ 25 ರಂದು ದೇಶದ ಮೊದಲ ಕೃತಕ ಬುದ್ಧಿಮತ್ತೆ  ಆಧಾರಿತ ಕಮಾಂಡ್ ಕಂಟ್ರೋಲ್ ಸೆಂಟರ್  ಉದ್ಘಾಟಿಸಿದರು. ಈ ನವೀನ ಯೋಜನೆಯು ಭಕ್ತರ ಗುಂಪನ್ನು ನಿರ್ವಹಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ರೂಪಿಸಿದೆ. 

   ಈ ಕೇಂದ್ರವನ್ನು ತಿರುಮಲದ ವೈಕುಂಠಂ 1 ಕಾಂಪ್ಲೆಕ್ಸ್‌ನಲ್ಲಿ ಸ್ಥಾಪಿಸಲಾಗಿದೆ. ದೇವಸ್ಥಾನದಾದ್ಯಂತ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ದೊಡ್ಡ ಪರದೆಯ ಮೂಲಕ ಭಕ್ತರ ಚಲನೆ ಮತ್ತು ಸಾಲುಗಳನ್ನು ನೈಜ ಸಮಯದಲ್ಲಿ ಗಮನಿಸಲಾಗುತ್ತದೆ. 25ಕ್ಕೂ ಹೆಚ್ಚು ತಾಂತ್ರಿಕ ಸಿಬ್ಬಂದಿ ಈ ಕ್ಯಾಮೆರಾಗಳನ್ನು ನಿರ್ವಹಿಸುತ್ತಾರೆ. ತಿರುಮಲದ ಪ್ರಮುಖ ಪ್ರವೇಶದ್ವಾರವಾದ ಅಲಿಪಿರಿಯಿಂದಲೇ ಭಕ್ತರ ಒತ್ತಡವನ್ನು ಗಮನಿಸಲು ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. 

   ಈ ಎಐ ಕ್ಯಾಮೆರಾಗಳು ಕೇವಲ ವಿಡಿಯೋ ರೆಕಾರ್ಡ್ ಮಾಡುವುದಷ್ಟೇ ಅಲ್ಲ, ಸಾಲಿನಲ್ಲಿ ಜನರ ಸಂಖ್ಯೆಯನ್ನು ಎಣಿಕೆ ಮಾಡುವುದು, ಗುಂಪಿನ ಚಲನೆಯನ್ನು ಗಮನಿಸುವುದು ಮತ್ತು ದರ್ಶನದ ಕಾಯುವ ಸಮಯವನ್ನು ಅಂದಾಜಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಮಾಡುತ್ತವೆ. 3ಡಿ ನಕ್ಷೆಗಳ ಮೂಲಕ ನೈಜ ಸಮಯದ ದೃಶ್ಯವನ್ನು ಒದಗಿಸುವ ಈ ವ್ಯವಸ್ಥೆ, ಜನರ ಗುಂಪು ತುಂಬಿದ ಕಾರಿಡಾರ್‌ಗಳನ್ನು ಗುರುತಿಸಿ, ಪರಿಹಾರ ಸೂಚಿಸುತ್ತದೆ. ಕಳವು ಅನುಮಾನಾಸ್ಪದ ಚಟುವಟಿಕೆಗಳನ್ನು ಪತ್ತೆಹಚ್ಚುವ ಜೊತೆಗೆ, ಕಳೆದುಹೋದ ಮಕ್ಕಳು ಅಥವಾ ವೃದ್ಧರನ್ನು ಮುಖ ಗುರುತಿಸುವ ಮೂಲಕ ಹುಡುಕಲು ಸಹಾಯ ಮಾಡುತ್ತದೆ. 

   ಎಐ ವ್ಯವಸ್ಥೆ ಭಕ್ತರ ಮುಖದ ಭಾವನೆ ಮತ್ತು ದೇಹದ ಚಲನೆಯನ್ನು ವಿಶ್ಲೇಷಿಸಿ, ಒಬ್ಬ ವ್ಯಕ್ತಿಯು ಒತ್ತಡದಲ್ಲಿ, ಅನಾರೋಗ್ಯದಲ್ಲಿದ್ದರೆ ಅಥವಾ ಅಸ್ವಸ್ಥರಾಗಿದ್ದರೆ ತಕ್ಷಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತದೆ. ಕ್ಯಾಮೆರಾಗಳು ಮತ್ತು ಟಿಕೆಟ್ ದಾಖಲೆಗಳಿಂದ ಡೇಟಾವನ್ನು ಸಂಗ್ರಹಿಸಿ, ಗರಿಷ್ಠ ಭಕ್ತರ ಒತ್ತಡದ ಸಮಯವನ್ನು ಊಹಿಸುತ್ತದೆ. ಇದರಿಂದ ಟಿಟಿಡಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವುದು ಅಥವಾ ಹೆಚ್ಚುವರಿ ಸಾಲು ತೆರೆಯುವುದನ್ನು ಯೋಜಿಸಬಹುದು. ಬೆಂಕಿ ಅಥವಾ ವೈದ್ಯಕೀಯ ತುರ್ತು ಸಂದರ್ಭದಲ್ಲಿ, ಸುರಕ್ಷಿತ ಮತ್ತು ತ್ವರಿತ ನಿರ್ಗಮನ ಮಾರ್ಗಗಳನ್ನು ತೋರಿಸುತ್ತದೆ.

   ಈ ಎಐ ಕೇಂದ್ರವನ್ನು ಜನರು “ದೇವಾಲಯದ ಭದ್ರತೆಗೆ ಆಧುನಿಕ ಕೊಡುಗೆ” ಎಂದು ಶ್ಲಾಘಿಸಿದ್ದಾರೆ. “ಇದು ಭಕ್ತರ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹೇಳಿದ್ದಾರೆ. ಈ ಯೋಜನೆ ಇತರ ದೇವಾಲಯಗಳಿಗೂ ಮಾದರಿಯಾಗಬಹುದು ಎಂದು ತಜ್ಞರು ಭಾವಿಸಿದ್ದಾರೆ.

Recent Articles

spot_img

Related Stories

Share via
Copy link