ಬೆಂಗಳೂರು
ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬ ಬಳಸಲಾಗುತ್ತದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪ ಸದ್ಯ ಎಲ್ಲೆಡೆ ಸಂಚಲನ ಮೂಡಿಸಿದೆ. ತಿರುಪತಿ ಲಡ್ಡುಗೆ ಪ್ರಮುಖವಾಗಿ ಕರ್ನಾಟಕದಿಂದ ಸರಬರಾಜು ಮಾಡಲಾಗುತ್ತಿರುವ ನಂದಿನ ತುಪ್ಪವನ್ನು ಬಳಕೆ ಮಾಡಲಾಗುತ್ತದೆ. ಈ ಆರೋಪದ ಬಗ್ಗೆ ಕೆಎಂಎಫ್ ಒಕ್ಕೂಟದ ಅಧ್ಯಕ್ಷ ಭೀಮಾ ನಾಯ್ಕ್ ಪ್ರತಿಕ್ರಿಯಿಸಿದ್ದು, ಅವರ ಹೇಳಿಕೆಗೂ, ನಮ್ಮ ನಂದಿನಿ ಬ್ರ್ಯಾಂಡ್ಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಕಳೆದ 4 ವರ್ಷಗಳಿಂದ ನಂದಿನಿ ತುಪ್ಪ ಅಲ್ಲಿಗೆ ಹೋಗಿಲ್ಲ. ಈಗ ನಂದಿನಿ ತುಪ್ಪ ತಿರುಪತಿಗೆ ಸರಬರಾಜು ಮಾಡಲು ಶುರು ಮಾಡಿದ್ದೇವೆ. 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 3 ರಿಂದ 4 ಮೆಟ್ರಿಕ್ ಟನ್ ತುಪ್ಪ ಸರಬರಾಜು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
2019ರಲ್ಲಿ ಸಮ್ಮಿಶ್ರ ಸರ್ಕಾರ ಇತ್ತು. ಆ ವರ್ಷ 17 ಟನ್ ಸರಬರಾಜು ಮಾಡಿದ್ದೇವೆ. 2020-24ರವರೆಗೆ ಟಿಟಿಡಿನವರು ನಂದಿನಿ ತುಪ್ಪವನ್ನ ಸ್ಥಗಿತ ಮಾಡಿದ್ದರು. ಇಲ್ಲಿ ಹೊಸ ಸರ್ಕಾರ ಬಂದ ಮೇಲೆ ಟ್ರಸ್ಟ್ನ ಅಧಿಕಾರಿಗಳು ನಂದಿನಿ ತುಪ್ಪವನ್ನ ಹೊರಗಿಟ್ಟು ಬೇರೆ ಬೇರೆ ಬ್ರ್ಯಾಂಡ್ ತುಪ್ಪವನ್ನ ಖರೀದಿ ಮಾಡಿದ್ದಾರೆ. ಇದರ ಹಿನ್ನಲೆ ಏನು ಅಂತ ತನಿಖೆ ಮಾಡುತ್ತೇವೆ. ಭ್ರಷ್ಟಾಚಾರ ನಡೆದಿದೆ ಅಂತ ಈಗಿನ ಸಿಎಂ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.
ಟಿಟಿಡಿ ಹೊಸ ಅಧ್ಯಕ್ಷರು, ನಿರ್ದೇಶಕರೆಲ್ಲ ಸೇರಿ ನಂದಿನಿ ತುಪ್ಪ ಬೇಕು ಅಂತ ಮೇಲ್ ಮಾಡಿದ್ದರು. ಈ ಬಾರಿ ಟೆಂಡರ್ನಲ್ಲಿ ಭಾಗವಹಿಸಲು ಹೇಳಿದ್ದರು. ಹೀಗಾಗಿ 3 ಲಕ್ಷದ 50 ಸಾವಿರ ಕೆ.ಜಿ ತುಪ್ಪವನ್ನ ಟೆಂಡರ್ ತೆಗೆದುಕೊಂಡಿದ್ದೇವೆ. ಮೊದಲ ಹಂತದಲ್ಲಿ 350 ಮೆಟ್ರಿಕ್ ಟನ್ ತುಪ್ಪವನ್ನ ಕಳೆದ ವಾರ ಸರಬರಾಜು ಮಾಡಿದ್ದೇವೆ ಎಂದಿದ್ದಾರೆ.
ಇಡೀ ದೇಶದಲ್ಲೇ ಗ್ರಾಹಕರ ನಂಬಿಕೆ ಬ್ರ್ಯಾಂಡ್ ನಂದಿನಿ. ನಂದಿನಿ ತುಪ್ಪ ಬಹಳ ಕ್ವಾಲಿಟಿಯಾಗಿದೆ. ಮನೆಯಲ್ಲಿ ಮಾಡಿದ ರೀತಿಯೇ ಇರುತ್ತೆ. ಕಳಪೆ ತುಪ್ಪ ಬಳಕೆ ಮಾಡಿದ್ದಾರೆ ಅಂತ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಅವರೇ ತನಿಖೆ ಮಾಡಿಸಿದರೆ ಸತ್ಯಸತ್ಯತೆ ಹೊರಬರಲಿದೆ. ಎಫ್ಎಸ್ಎಲ್ಗೆ ಕಳುಹಿಸಿ ವರದಿ ಪಡೆಯುತ್ತಾರೆ. ಅಲ್ಲಿನ ಸರ್ಕಾರವೇ ಅದನ್ನು ನಿಭಾಯಿಸುತ್ತೆ ಎಂದಿದ್ದಾರೆ.
ತಿರುಪತಿಗೆ ನಂದಿನಿ ತುಪ್ಪ ಸ್ಥಗಿತಗೊಳ್ಳುವ ಭೀತಿ ವಿಚಾರವಾಗಿ ಮಾತನಾಡಿದ್ದು, ಟಿಟಿಡಿಯವರು ಬೇಡ ಅಂದ್ರೂ ನಮಗೆ ತೊಂದರೆ ಆಗಲ್ಲ. ಕರ್ನಾಟಕದಲ್ಲಿ ನಂದಿನಿ ತುಪ್ಪಕ್ಕೆ ತುಂಬಾ ಬೇಡಿಕೆ ಇದೆ. ನಾವು ಎಷ್ಟು ತಯಾರು ಮಾಡ್ತಿವೋ ಅಷ್ಟೇ ಬೇಡಿಕೆ ಇದೆ. ದುಬೈ, ಖತಾರ್ ಸೇರಿ ಬೇರೆ ದೇಶಗಳಲ್ಲೂ ಬೇಡಿಕೆ ಇದೆ. ತಿರುಪತಿ ಲಡ್ಡುವಿನಲ್ಲಿ ನಂದಿನಿ ತುಪ್ಪ ಬಳಕೆಯಾದರೆ ನಮಗೆ ಹೆಮ್ಮೆ ಎಂದು ಹೇಳಿದ್ದಾರೆ.
ಟಿಟಿಡಿಯವರು ಎಷ್ಟು ತುಪ್ಪ ಕೇಳುತ್ತಾರೋ ಅಷ್ಟು ಕೊಡುತ್ತೇವೆ. ಟಿಟಿಡಿ ತೆಗೆದುಕೊಂಡಿಲ್ಲ ಅಂದ್ರೂ ನಮ್ಮಲ್ಲೇ ಬೇಡಿಕೆ ಇದೆ. ನಂದಿನಿ ತುಪ್ಪವನ್ನು ಬೇಡ ಎನ್ನುವ ಪ್ರಶ್ನೆ ಇಲ್ಲ. ನಂದಿನಿ ತುಪ್ಪ ಬೇಡ ಅಂತ ಟೆಂಡರ್ ರದ್ದುಗೊಳಿಸೋಕೆ ಆಗಲ್ಲ ಎಂದು ತಿಳಿಸಿದ್ದಾರೆ.ನಂದಿನಿ ಹಾಲಿನ ದರ ಏರಿಕೆ ಮುನ್ನವೇ ಬಿಜೆಪಿ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. 5 ವರ್ಷ ಬೊಂಬಡಾ ಹೊಡೆದುಕೊಂಡು ಹೋಗಿ ಅಂತಾ ಕೂರಿಸಿದ್ದಾರೆ. ರಾಜ್ಯದ ಜನರು ಬಿಜೆಪಿಯವರನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ನಮ್ಮ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳನ್ನು ಕೊಡ್ತೀವಿ ಅಂತಾ ಹೇಳಿದ್ವಿ, ಮಾತಿನಂತೆ ನಾವು ನಡೆದುಕೊಂಡು ಹೋಗುತ್ತಿದ್ದೇವೆ ಎಂದಿದ್ದಾರೆ.