ತಿರುಪತಿ ಲಡ್ಡು ಪ್ರಸಾದದ ಬಗ್ಗೆ ಪವನ್‌ ಕಲ್ಯಾಣ್‌ ಹೇಳಿದ್ದೇನು ಗೊತ್ತಾ….?

ಮರಾವತಿ:

    ಕೋಟ್ಯಂತರ ಹಿಂದುಗಳ ಪವಿತ್ರ ಕ್ಷೇತ್ರ ತಿರುಪತಿಯ ತಿರುಮಲ ದೇಗುಲದ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಹಾಗೂ ಪ್ರಾಣಿಗಳ ಕೊಬ್ಬು ಬಳಕೆ ಆಗುತ್ತಿತ್ತೆಂಬ ವಿಚಾರ ಬೆಳಕಿಗೆ ಬಂದಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ ನಡೆದಿತ್ತೆನ್ನಲಾದ ಈ ಪ್ರಮಾದವನ್ನು ಸತ್ಯ ಎಂದು ಗುಜರಾತ್​ನ ಪ್ರಯೋಗಾಲಯ ದೃಢಪಡಿಸಿದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.

   ಇದೀಗ ತಿರುಮಲ ಲಡ್ಡು ವಿವಾದದ ಬಗ್ಗೆ ಜನಸೇನಾ ಪಕ್ಷದ ಮುಖ್ಯಸ್ಥ ಹಾಗೂ ಆಂಧ್ರದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದ್ದಾರೆ. ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಐಟಿ ಸೆಲ್​ ಮಾಡಿರುವ ಎಕ್ಸ್​ ಪೋಸ್ಟ್​ಗೆ ಪವನ್​ ಕಲ್ಯಾಣ್​ ಪ್ರತಿಕ್ರಿಯೆ ನೀಡಿದ್ದಾರೆ.

   ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು (ಮೀನಿನ ಎಣ್ಣೆ, ಹಂದಿ ಕೊಬ್ಬು, ದನದ ಕೊಬ್ಬು) ಬೆರೆಸಿರುವುದು ಬೆಳಕಿಗೆ ಬಂದಿದ್ದು ಎಲ್ಲರ ಭಾವನೆಗಳಿಗೆ ಧಕ್ಕೆ ತಂದಿದೆ. ಹಲವು ಪ್ರಶ್ನೆಗಳಿಗೆ ವೈಎಸ್​ಆರ್​ಸಿಪಿ ಆಡಳಿತಾವಧಿಯಲ್ಲಿ ರಚನೆಯಾದ ಟಿಟಿಡಿ ಮಂಡಳಿಯೇ ಉತ್ತರ ನೀಡಬೇಕಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

   ದೇಶದ ಎಲ್ಲ ದೇವಾಲಯಗಳ ವ್ಯವಹಾರಗಳ ಮೇಲ್ವಿಚಾರಣೆಗಾಗಿ ರಾಷ್ಟ್ರೀಯ ಮಟ್ಟದ ಸನಾತನ ಧರ್ಮರಕ್ಷಣಾ ಮಂಡಳಿಯನ್ನು ಸ್ಥಾಪಿಸುವ ಸಮಯ ಬಂದಿದೆ ಎಂದು ಪವನ್ ಕಲ್ಯಾಣ್ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಎಲ್ಲ ಸಮುದಾಯಗಳೊಂದಿಗೆ ರಾಷ್ಟ್ರಮಟ್ಟದ ಚರ್ಚೆಯಾಗಬೇಕು. ಸನಾತನ ಧರ್ಮಕ್ಕೆ ಯಾವುದೇ ಧಕ್ಕೆಯಾಗದಂತೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಪವನ್ ಕಲ್ಯಾಣ್ ತಮ್ಮ ಎಕ್ಸ್​ ಖಾತೆಯಲ್ಲಿ ಹೇಳಿದ್ದಾರೆ.

   ವೈಎಸ್​ಆರ್​ಸಿಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ತಿರುಮಲ ತಿರುಪತಿ ಶ್ರೀವೆಂಕಟೇಶ್ವರ ದೇವಸ್ಥಾನದ ಪ್ರಸಾದದ ಲಡ್ಡುಗಳ ತಯಾರಿಕೆಗೆ ಶುದ್ಧ ತುಪ್ಪದ ಬದಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು. ಆ ಮೂಲಕ ದೇವಸ್ಥಾನದ ಪವಿತ್ರ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಲಾಗಿತ್ತೆಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ. ಮಂಗಳಗಿರಿಯಲ್ಲಿ ನಡೆದ ಎನ್​ಡಿಎ ಮೈತ್ರಿಕೂಟದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ನಾಯ್ಡು, ಪ್ರಸಾದ ಅಪವಿತ್ರಗೊಳಿಸಿದ ಬಗ್ಗೆ ಹಲವಾರು ಬಾರಿ ದೂರು ನೀಡಲಾಗಿದ್ದರೂ ಕ್ರಮ ಜರುಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

   ತೆಲುಗುದೇಶಂ ಮತ್ತು ವೈಎಸ್​ಆರ್​ಪಿ ತಿರುಪತಿ ಲಡ್ಡು ವಿಚಾರದಲ್ಲಿ ತುಚ್ಛ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿವೆ. ಇದರಿಂದ ತಿರುಪತಿಯ ಕೋಟ್ಯಂತರ ಭಕ್ತರ ಭಾವನೆಗೆ ಘಾಸಿಯಾಗಿದೆ. ಹಾಗಾಗಿ ಆಂಧ್ರ ಸರ್ಕಾರ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷೆ ವೈಎಸ್ ಶರ್ವಿುಳಾ ಆಗ್ರಹಿಸಿದ್ದಾರೆ.

   ಕಡಲೆ ಹಿಟ್ಟು, ಗೋಡಂಬ ಏಲಕ್ಕಿ, ತುಪ್ಪ, ಸಕ್ಕರೆ, ಕಲ್ಲು ಸಕ್ಕರೆ, ಒಣದ್ರಾಕ್ಷಿ ಬಳಸಲಾಗುತ್ತದೆ. ಕರ್ಪರ ಬಳಕೆ ಕೈಬಿಡಲಾಗಿದೆ. ಪ್ರತೀ ದಿನ ಕನಿಷ್ಠ 400-500 ಕೆಜಿ ತುಪ್ಪ, 750 ಕೆಜಿ ಗೋಡಂಬಿ, 500 ಕೆಜಿ ಒಣದ್ರಾಕ್ಷಿ ಮತ್ತು 200 ಕೆಜಿ ಏಲಕ್ಕಿ ಮತ್ತಿತರ ಪದಾರ್ಥ ಬಳಸಿ ಲಡ್ಡು ತಯಾರಿಸಲಾಗುತ್ತದೆ. ಪ್ರಸಾದ ತಯಾರಿಕೆ ಸಲುವಾಗಿ ಟಿಟಿಡಿ ಆರು ತಿಂಗಳಿಗೊಮ್ಮೆ ಟೆಂಡರ್ ಮೂಲಕ ತುಪ್ಪ ಖರೀದಿ ಮಾಡುತ್ತದೆ. ಈ ರೀತಿ ವರ್ಷಕ್ಕೆ 5 ಲಕ್ಷ ಕೆಜಿ ತುಪ್ಪ ಖರೀದಿಸಲಾಗುತ್ತದೆ.

   ತುಪ್ಪ ಖರೀದಿಗೆ ಗುಣಮಟ್ಟದ ನಿರ್ದಿಷ್ಟ ಮಾನದಂಡ ನಿಗದಿ ಪಡಿಸಲಾಗಿರುತ್ತದೆ. 2022 ಜುಲೈನಿಂದ 2023 ಜುಲೈ ಅವಧಿಯಲ್ಲಿ ಟಿಟಿಡಿ ಬೇರೆಬೇರೆ ಸರಬರಾಜುದಾರರ ಸುಮಾರು 42 ಟ್ರಕ್ ಲೋಡ್ ತುಪ್ಪವನ್ನು ಕಳಪೆ ಎಂದು ತಿರಸ್ಕರಿಸಿತ್ತು. ಗುಜರಾತ್​ನ ಅಮುಲ್ ಹೆಚ್ಚಿನ ಪ್ರಮಾಣದ ತುಪ್ಪ ಸರಬರಾಜು ಮಾಡುತ್ತದೆ. ಕೆಎಂಎಫ್​ನ ನಂದಿನಿ ತುಪ್ಪವನ್ನು ಹಿಂದಿನ ವೈಎಸ್​ಆರ್​ಸಿಪಿ ಸರ್ಕಾರ ನಾಲ್ಕು ವರ್ಷಗಳಿಂದ ಖರೀದಿ ಮಾಡುತ್ತಿರಲಿಲ್ಲ.

  ತಿರುಪತಿ ಲಡ್ಡು ಪ್ರಸಾದ ತಯಾರಿಗೆ ಕಳೆದ ನಾಲ್ಕು ವರ್ಷಗಳಿಂದ ಟಿಟಿಡಿ ಮಂಡಳಿ ನಮ್ಮ ಸಂಸ್ಥೆಯಿಂದ ತುಪ್ಪ ಖರೀದಿ ಮಾಡಿಲ್ಲ. ಆಂಧ್ರದಲ್ಲಿ ಇತ್ತೀಚೆಗೆ ತೆಲುಗುದೇಶಂ ಪಕ್ಷ (ಟಿಡಿಪಿ) ಅಧಿಕಾರಕ್ಕೆ ಬಂದ ನಂತರವಷ್ಟೇ ನಾವು ಮತ್ತೆ ತುಪ್ಪ ಸರಬರಾಜು ಮಾಡುತ್ತಿದ್ದೇವೆ ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಸ್ಪಷ್ಟನೆ ನೀಡಿದೆ.

 

Recent Articles

spot_img

Related Stories

Share via
Copy link
Powered by Social Snap