ಟಿಎಂಸಿಯ ಮುಖಂಡರ ಫೈಟ್‌ ಮತ್ತೆ ಮುನ್ನೆಲೆಗೆ! ಏನಿದು ಪ್ರಕರಣ?

ಕೋಲ್ಕತ್ತಾ:

   ತೃಣಮೂಲ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ  ಮತ್ತೆ ಮುನ್ನಲೆಗೆ ಬಂದಿದೆ. ಈ ತಿಂಗಳ ಆರಂಭದಲ್ಲಿ ಪಕ್ಷದ ಮಹಿಳಾ ಸಹೋದ್ಯೋಗಿಯೊಂದಿಗಿನ ವಾಗ್ವಾದದ ಬಳಿಕ ಲೋಕಸಭೆಯ ಮುಖ್ಯ ಸಚೇತಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಲ್ಯಾಣ್ ಬ್ಯಾನರ್ಜಿ , ಈಗ ತಮ್ಮ ಪಕ್ಷದ ಸಂಸದರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಬಿಜೆಪಿ ಸಂಸದರೊಬ್ಬರು ಬೆದರಿಕೆ ಹಾಕಿದಾಗ ತೃಣಮೂಲ ಸಂಸದರು ತಮಗೆ ಬೆಂಬಲ ನೀಡಲಿಲ್ಲ ಎಂದು ಅವರು ದೂರಿದ್ದಾರೆ.

    ಸಹೋದ್ಯೋಗಿ ಮಹುವಾ ಮೊಯಿತ್ರಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾಡಿದ್ದಾರೆ ಎನ್ನಲಾದ ಟೀಕೆಯ ಬಗ್ಗೆ ಪ್ರತಿಕ್ರಿಯಿಸುವಾಗ, ಬ್ಯಾನರ್ಜಿ ಈ ಆರೋಪಗಳನ್ನು ಮಾಡಿದರು. ಈ ವಿಷಯದಲ್ಲಿ ಯಾವುದೇ ಕಾಮೆಂಟ್ ಮಾಡಲು ನಿರಾಕರಿಸಿದ ಅವರು, ಮಾಜಿ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ಮೊಯಿತ್ರಾ ವಿರುದ್ಧ ಅಸಂಸದೀಯ ಶಬ್ದಗಳನ್ನು ಬಳಸಿದ್ದನ್ನು ಖಂಡಿಸಿದರು. “ಮಹುವಾ ಮೊಯಿತ್ರಾ ವಿರುದ್ಧ ಬಿಧೂರಿ ಮಾಡಿದ ಟೀಕೆ ಸಂಪೂರ್ಣ ಖಂಡನೀಯ. ಮಹಿಳಾ ಸಂಸದರ ವಿರುದ್ಧ ಈ ರೀತಿಯ ದಾಳಿ ಬಿಜೆಪಿಯ ಸಂಸ್ಕೃತಿಯೇ? ಈ ಹಿಂದೆಯೂ ಬಿಧೂರಿ ಕೆಟ್ಟ ಟೀಕೆಗಳನ್ನು ಮಾಡಿದ್ದರು, ಹೀಗಾಗಿಯೇ ಅವರಿಗೆ 2024ರ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ,” ಎಂದು ಬ್ಯಾನರ್ಜಿ ಹೇಳಿದರು. 

   2023ರಲ್ಲಿ ಮೊಯಿತ್ರಾ ಅವರ ಮೇಲೆ ಕ್ಯಾಶ್-ಫಾರ್-ಕ್ವೆರಿ ಆರೋಪ ಬಂದಾಗ, ಬಿಜೆಪಿಯಿಂದ ತೀವ್ರ ಟೀಕೆಗೆ ಒಳಗಾಗಿದ್ದರು. ಆಗ ಮೊಯಿತ್ರಾ ಬೆಂಬಲಕ್ಕೆ ನಿಂತಾಗ ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ತಮಗೆ ಬೆದರಿಕೆ ಒಡ್ಡಿದ್ದರು ಎಂದು ಬ್ಯಾನರ್ಜಿ ಆರೋಪಿಸಿದರು. “ಮೊಯಿತ್ರಾ ಬೆಂಬಲಕ್ಕೆ ನಿಂತಾಗ, ರೂಡಿ ನನಗೆ ಬೆದರಿಕೆ ಹಾಕಿದರು, ತಮ್ಮ ಶಕ್ತಿ ತೋರಿಸಿದರು. ಆದರೆ, ನಮ್ಮ ಉಪನಾಯಕಿ ಸತಾಬ್ದಿ ರಾಯ್ ಮೌನವಾಗಿದ್ದರು. ಎಸ್‌ಪಿ ಸಂಸದರು ನನ್ನ ಬೆಂಬಲಕ್ಕೆ ಬಂದರೂ, ನಮ್ಮ ಸಂಸದರು ಒಬ್ಬರೂ ಬರಲಿಲ್ಲ,” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

   ಸೆರಂಪುರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ 68 ವರ್ಷದ ಬ್ಯಾನರ್ಜಿ, ಪಕ್ಷದ ನಾಯಕತ್ವಕ್ಕೆ ಎಲ್ಲ ಮಾಹಿತಿಯೂ ತಲುಪುವುದಿಲ್ಲ, “ಫಿಲ್ಟರ್” ಇದೆ ಎಂದು ಸೂಚಿಸಿದರು. ಕೋಲ್ಕತ್ತಾದಲ್ಲಿ ಅತ್ಯಾಚಾರ ಪ್ರಕರಣದ ಬಗ್ಗೆ ಬ್ಯಾನರ್ಜಿ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಮೊಯಿತ್ರಾ ಅವರು “ಮಹಿಳಾದ್ವೇಷಿ” ಎಂದು ಹೇಳಿದ್ದರು, ಇದು ತೃಣಮೂಲ ದೆಹಲಿ ಶಿಬಿರದಲ್ಲಿ ಒಡಕು ಮೂಡಿಸಿತ್ತು. ಈ ವಿವಾದವನ್ನು ಸರಿಪಡಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಧ್ಯಪ್ರವೇಶಿಸಿ, ಸಂಸದರಿಗೆ ಒಗ್ಗಟ್ಟಿನಿಂದ ಹೋರಾಡುವಂತೆ ಸೂಚಿಸಿದ್ದರು.

Recent Articles

spot_img

Related Stories

Share via
Copy link