ಮುರ್ಷಿದಾಬಾದ್:
ಬಿಜೆಪಿಯ ಬೆಂಬಲದಿಂದ ರಾಜಕೀಯ ಸಮಸ್ಯೆಗಳನ್ನು ಕೋಮುವಾದಿ ವಿಷಯವಾಗಿ ಮಾಡುವ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ ನ ಮುರ್ಷಿದಾಬಾದ್ ಶಾಸಕ ಹುಮಾಯೂನ್ ಕಬೀರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ. ಅವರಿಗೆ ಈ ಹಿಂದೆ ಹಲವು ಬಾರಿ ಎಚ್ಚರಿಕೆಯನ್ನು ನೀಡಲಾಗಿತ್ತು. ಆದರೆ ಅವರು ಇದನ್ನು ನಿರ್ಲಕ್ಷಿಸಿರುವುದರಿಂದ ಪಕ್ಷದಿಂದ ಅವರನ್ನು ಅಮಾನತುಗೊಳಿಸಿರುವುದಾಗಿ ಟಿಎಂಸಿಯ ಹಿರಿಯ ನಾಯಕ ಮತ್ತು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ತಿಳಿಸಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಬರಿ ಮಸೀದಿ ನಿರ್ಮಿಸುವುದಾಗಿ ಘೋಷಿಸುವ ಮೂಲಕ ಹೊಸ ವಿವಾದವನ್ನು ಉಂಟು ಮಾಡಿದ ಭರತ್‌ಪುರ ಶಾಸಕ ಹುಮಾಯೂನ್ ಕಬೀರ್ ಅವರನ್ನು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗುರುವಾರ ಅಮಾನತುಗೊಳಿಸಿದೆ.
ಕಬೀರ್ ಅವರು ಬಿಜೆಪಿ ಬೆಂಬಲದೊಂದಿಗೆ ರಾಜಕೀಯ ಸಮಸ್ಯೆಗಳನ್ನು ಕೋಮುವಾದಿ ವಿಚಾರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಟಿಎಂಸಿಯ ಹಿರಿಯ ನಾಯಕ ಫಿರ್ಹಾದ್ ಹಕೀಮ್ ಅವರು ಪಕ್ಷದ ನಿರ್ಧಾರವನ್ನು ಗುರುವಾರ ಘೋಷಿಸಿದ್ದಾರೆ.ಈ ಹಿಂದೆ ಕಬೀರ್ ಅವರಿಗೆ ಮೂರು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೂ ಅವರು ತಮ್ಮ ನಡೆಯನ್ನು ಬದಲಿಸಲಿಲ್ಲ. ಹೀಗಾಗಿ ಇದೀಗ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗುತ್ತಿದೆ. ಇನ್ನು ಮುಂದೆ ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹಕೀಮ್ ತಿಳಿಸಿದ್ದಾರೆ.
ಕಬೀರ್ ಅವರು ಇತ್ತೀಚೆಗೆ ಬಾಬರಿ ಮಸೀದಿ ನಿರ್ಮಿಸುತ್ತೇನೆ ಎಂಡಿ ಜೆ;ಒಡ್ಡಿ. ಇದು ಪ್ರಚೋದನಕಾರಿ ಮತ್ತು ಅನಗತ್ಯ ಎಂದಿರುವ ಹಕೀಮ್, ನಾವು ಅವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದೇವೆ. ಇದೀಗ ಟಿಎಂಸಿಯ ನಿರ್ಧಾರದಂತೆ ಅವರನ್ನು ಅಮಾನತುಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.
ಪಕ್ಷದ ಆಂತರಿಕ ವಿಷಯಗಳು ಸೇರಿದಂತೆ ಹಲವು ವಿಷಯಗಳ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಕಬೀರ್ ಅವರು ಡಿಸೆಂಬರ್ 6 ರಂದು ಬೆಲ್ದಂಗಾದಲ್ಲಿ ಪ್ರಸ್ತಾವಿತ ಮಸೀದಿಗೆ ಅಡಿಪಾಯ ಹಾಕಲಾಗುವುದು ಎಂದು ಘೋಷಿಸಿದ್ದರು. ಬಳಿಕ ತಾವು ಹೊಸ ರಾಜಕೀಯ ಪಕ್ಷವನ್ನು ಕಟ್ಟುವುದಾಗಿ ಹೇಳಿದ್ದು, ಟಿಎಂಸಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಕಬೀರ್ ಅವರಿಗೆ ಈ ರೀತಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಲು ಬಿಜೆಪಿ ಪ್ರೋತ್ಸಾಹಿಸುತ್ತಿದೆ. ಇದು ಕೋಮು ಸಾಮರಸ್ಯಕ್ಕೆ ಹಾನಿ ಮಾಡುವ ಉದ್ದೇಶವಾಗಿದೆ. ಇದನ್ನು ಪಕ್ಷ ಸಹಿಸುವುದಿಲ್ಲ ಎಂದು ಟಿಎಂಸಿ ನಾಯಕರು ಸ್ಪಷ್ಟಪಡಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಕಬೀರ್, ನಾನು ಮಮತಾ ಬ್ಯಾನರ್ಜಿಯವರ ಪಕ್ಷದಲ್ಲಿದ್ದೇನೆ. ಅವರು ನನ್ನನ್ನು ಹೊರಹೋಗುವಂತೆ ಕೇಳಿದರೆ ನಾನು ಹೋಗುತ್ತೇನೆ. ಇದೀಗ ನನ್ನನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಶುಕ್ರವಾರ ಟಿಎಂಸಿಗೆ ರಾಜೀನಾಮೆ ನೀಡುತ್ತೇನೆ. ಇದಕ್ಕೆ ಮುರ್ಷಿದಾಬಾದ್‌ನ ಜನರು ಉತ್ತರ ನೀಡುತ್ತಾರೆ. ನಾನು ಬಿಜೆಪಿ ಮತ್ತು ಟಿಎಂಸಿ ವಿರುದ್ಧ ಹೋರಾಡುತ್ತೇನೆ ಎಂದರು.








