ತುಮಕೂರು : ಇಂದು ಜಿಲ್ಲೆಯ ಖಾಸಗಿ ಶಾಲೆಗಳು ಬಂದ್!!

ತುಮಕೂರು : 

     ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘದ ನೇತೃತ್ವದಲ್ಲಿ ಜ. 6 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರಣದಿಂದಾಗಿ ಬುಧವಾರ ಜಿಲ್ಲೆಯಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ ಎಂದು ಸಂಘದ ರಾಜ್ಯ ಕಾರ್ಯಾಧ್ಯಕ್ಷ ಡಾ.ಹಾಲನೂರು ಎಸ್.ಲೇಪಾಕ್ಷ್ ಹೇಳಿದ್ದಾರೆ.

      ಮಂಗಳವಾರ ಸಿದ್ಧಗಂಗಾ ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬುಧವಾರ ಜಿಲ್ಲೆಯ ಎಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಆನ್‍ಲೈನ್, ಆಫ್‍ಲೈನ್ ತರಗತಿಗಳನ್ನು ಬಂದ್ ಮಾಡಲಾಗಿದೆ. ಎಸ್‍ಎಸ್‍ಎಲ್‍ಸಿ ತರಗತಿಗಳೂ ನಡೆಯುವುದಿಲ್ಲ ಎಂದು ಹೇಳಿದರು.

      ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹಕ್ಕೆ ರಾಜ್ಯದ 30 ಜಿಲ್ಲೆಯಿಂದಲೂ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಭಾಗವಹಿಸಲಿದ್ದಾರೆ. ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 50 ಬಸ್ ಜನ ತೆರಳಲಿದ್ದು, ಸುಮಾರು 15 ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನ ಮೌರ್ಯ ವೃತ್ತದಿಂದ ಫ್ರೀಡಂ ಪಾರ್ಕ್‍ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಧರಣಿ ನಡೆಸಲಾಗುವುದು. ಶಿಕ್ಷಣ ಸಚಿವರು ಪ್ರತಿಭಟನಾ ಸ್ಥಳಕ್ಕೆ ಬಂದು ಬೇಡಿಕೆ ಆಲಿಸದಿದ್ದರೆ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಕೊರೊನಾ ಸಂದರ್ಭದಲ್ಲಿ ಹಲವು ಶಿಕ್ಷಕರು ಪ್ರಾಣ ಕಳೆದುಕೊಂಡಿದ್ದಾರೆ. ಅವರಿಗೋಸ್ಕರ ವಿಶೇಷ ಪ್ಯಾಕೇಜ್ ನೀಡಬೇಕು. ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ಶಾಲಾ ಆರಂಭಗೊಂಡಿದ್ದು ತಕ್ಷಣ ಶೈಕ್ಷಣಿಕ ಕ್ಯಾಲೆಂಡರ್ ಹಾಗೂ ಪಠ್ಯಪುಸ್ತಕವನ್ನು ನಿಗಧಿಗೊಳಿಸಿ ತಕ್ಷಣ ಬಿಡುಗಡೆಗೊಳಿಸಬೇಕು. ಆರ್‍ಟಿಇ ಮರುಪಾವತಿಯನ್ನು ಒಂದೇ ಕಂತಿನಲ್ಲಿ ಜ. 20 ರೊಳಗೆ ಬಿಡುಗಡೆಗೊಳಿಸಬೇಕು. ಪ್ರಸ್ತುತ ವರ್ಷದ ರಾಜ್ಯ ಸರ್ಕಾರ ತನ್ನ ಅಧೀನದಲ್ಲಿರುವ ಶಾಲಾ ಮಕ್ಕಳಿಗೆ ಖರ್ಚು ಮಾಡುವ ತಲಾವಾರು ವೆಚ್ಚವನ್ನೇ ಖಾಸಗಿ ಆರ್‍ಟಿಇ ಮಕ್ಕಳಿಗೆ ಕೊಡಬೇಕು ಹಾಗೂ ಖಾಸಗಿ ಶಾಲಾ ಖರ್ಚು ವೆಚ್ಚದ ಆಡಿಟ್ ವರದಿಯನ್ನು ಪರಿಗಣಿಸುವಂತಿಲ್ಲ ಎಂದರು.
1995 ರಿಂದ 2010ರ ವರೆಗಿನ ಎಲ್ಲ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸಬೇಕು. ಬೀದರ್ ಜಿಲ್ಲೆಯ 124 ಶಾಲೆಗಳನ್ನು ಮುಚ್ಚುವ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಕಳೆದ 9 ತಿಂಗಳಿಂದ ಖಾಸಗಿ ಶಾಲಾ ನೌಕರರು ಸಂಬಳವಿಲ್ಲದೆ ಕಷ್ಟದಲ್ಲಿದ್ದಾರೆ. ಅವರಿಗೆ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಕನಿಷ್ಠ ತಿಂಗಳಿಗೆ 10 ಸಾವಿರ ರೂ. ನಂತೆ 9 ತಿಂಗಳ ಪ್ಯಾಕೇಜ್ ನೀಡಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಚಂದ್ರಶೇಖರ್, ಪದಾಧಿಕಾರಿಗಳಾದ ಡಿ.ನಾರಾಯಣಮೂರ್ತಿ, ಮಂಜುನಾಥ್ ಮತ್ತಿತರರು ಹಾಜರಿದ್ದರು.