ತುಮಕೂರು :ಜಿಲ್ಲೆಯಲ್ಲಿ ಇಂದು ಆಡಳಿತ ಮತ್ತು ವಿರೋಧ ಪಕ್ಷಗಳ ಶಕ್ತಿ ಪ್ರದರ್ಶನ

ತುಮಕೂರು

     ಇಂದು ಒಂದೇ ದಿನ ಬಿಜೆಪಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ತುಮಕೂರು ಜಿಲ್ಲೆ ಸಾಕ್ಷಿಯಾಗುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಬಳಿಕ ಮೊದಲ ಬಾರಿ ಜಿಲ್ಲೆ ಪ್ರವೇಶಿಸುತ್ತಿದ್ದು, ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಚೇರಿ ರಾಜೀವ್ ಭವನ ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ಸಮಯದಲ್ಲಿ ತುಮಕೂರು ನಗರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸಚಿವರು, ಶಾಸಕರ ದಂಡೇ ಆಗಮಿಸುತ್ತಿದ್ದು, ಫಲಾನುಭವಿಗಳ ಸಮಾವೇಶ ಉದ್ಘಾಟಿಸಲಿದ್ದಾರೆ.

    ಮಾಜಿ ಉಪಮುಖ್ಯಮಂತ್ರಿ ಕೊರಟಗೆರೆ ಶಾಸಕ ಡಾ.ಜಿ.,ಪರಮೇಶ್ವರ ಅವರ ನೇತೃತ್ವದಲ್ಲಿ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಸ್ಮರಣೆಯಲ್ಲಿ ರಾಜೀವ್ ಭವನ ಸ್ಥಾಪಿಸಿದ್ದು ಇದರ ಉದ್ಘಾಟನೆಯನ್ನು ನಿಮಿತ್ತವಾಗಿಸಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್‌ಸಿಂಗ್ ಸುರ್ಜೇವಾಲ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ರಾಷ್ಟ, ರಾಜ್ಯ, ಜಿಲ್ಲೆಯ ನಾಯಕರನ್ನು ಒಂದೆಡೆ ಸಮಾವೇಶಗೊಳಿಸುತ್ತಿರುವುದರ ಹಿಂದೆ, ವಿಧಾನಸಭೆ ಚುನಾವಣೆ ಸನಿಹದಲ್ಲಿ ಪಕ್ಷದ ಕಾರ್ಯಕರ್ತರನ್ನು ಉತ್ತೇಜಿಸುವ ಕಾರ್ಯತಂತ್ರ ಅಡಗಿದೆ. ಅಲ್ಲದೇ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಅಗ್ರ ನಾಯಕರ ಮೂಲಕ ಮತದಾರರಿಗೆ ಮನದಟ್ಟು ಮಾಡುವ ಪ್ಲ್ಯಾನ್ ಅನ್ನು ಮಾಡಿಕೊಳ್ಳಲಾಗಿದೆ.

ಸರ್ಕಾರದ ಫಲಾನುಭವಿಗಳ ಸಮ್ಮೇಳನ:

      ತುಮಕೂರು ನಗರದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 12ಕ್ಕೆ ಸರ್ಕಾರದ ವಿವಿಧ ಯೋಜನೆಗಳ 25 ಸಾವಿರ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಸಿಎಂ ಬಸವರಾಜಬೊಮ್ಮಾಯಿ ನೇತೃತ್ವದಲ್ಲಿ ಫಲಾನುಭವಿಗಳ ಸಮ್ಮೇಳನ ಮಾಡುತ್ತಿದ್ದು, ಸ್ಮಾರ್ಟ್ಸಿಟಿಯಿಂದ ನಿರ್ಮಿಸಿರುವ ಸುಸಜ್ಜಿತ ಸ್ಟೇಡಿಯಂ, ಡಿಜಿಟಲ್ ಗ್ರಂಥಾಲಯ, ಎಸ್ಪಿ ಕಚೇರಿ ಆವರಣದ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್, ರಿಂಗ್ ರಸ್ತೆ ಸೇರಿ ಸುಮಾರು 600 ಕೋಟಿ ವೆಚ್ಚದ ನಗರ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸುತ್ತಿದ್ದಾರೆ. ಚುನಾವಣೆ ಸನಿಹದಲ್ಲಿ ಬಿಜೆಪಿ ಸರ್ಕಾರ ತನ್ನ ಕೊಡುಗೆಗಳನ್ನು ಮತದಾರರಿಗೆ ನೆನಪಿಸಿ ಮೈಲೇಜ್ ಪಡೆದುಕೊಡುವ ಲೆಕ್ಕಾಚಾರ ಸಮ್ಮೇಳನದ ಹಿಂದಿದೆ ಎಂಬ ಚರ್ಚೆಯು ಸಾಗಿದೆ.

    358ಕ್ಕೂ ಅಧಿಕ ಕೆಎಸ್‌ಆರ್‌ಟಿಸಿ ಖಾಸಗಿ ಬಸ್‌ಗಳ ಮೂಲಕ ಫಲಾನುಭವಿಗಳನ್ನು ಸಮ್ಮೇಳನ ಸ್ಥಳಕ್ಕೆ ಕರೆತರುವ ಜವಾಬ್ದಾರಿಯನ್ನು ಸ್ಥಳೀಯ ಪಿಡಿಓ, ಗ್ರಾಮಲೆಕ್ಕಾಧಿಕಾರಿಗಳಿಗೆ ವಹಿಸಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ. ಇದೇ ಸಮ್ಮೇಳನವನ್ನು ಆಡಳಿತಾರೂಢ ಪಕ್ಷದ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಗಿ ಸಿಕೊಳ್ಳುತ್ತಿದ್ದು, ನಗರ ಹಾಗೂ ಜಿಲ್ಲಾ ಬಿಜೆಪಿ ಮುಖಂಡರು ಫಲಾನುಭವಿಗಳೊಂದಿಗೆ, ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಗೊಳಿಸಲು ಪೂರಕ ಕ್ರಮ ವಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಅರಗಜ್ಞಾನೇಂದ್ರ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜ್, ಸ್ಥಳೀಯ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಸಿ.ಎಂ.ರಾಜೇಶ್‌ಗೌಡ, ಮಸಾಲೆ ಜಯರಾಂ, ಎಂಎಲ್ಸಿ ನಾರಾಯಣಸ್ವಾಮಿ, ಚಿದಾನಂದಗೌಡ ಸೇರಿದಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷರು, ಮೋರ್ಚಾ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap