ಇಂದು ಮೂರು ಪಕ್ಷಗಳ ಅಭ್ಯರ್ಥಿಗಳಿಂದ ಉಮೇದುವಾರಿಕೆ

ತುಮಕೂರು:

ಕೆಪಿಸಿಸಿ ಅಧ್ಯಕ್ಷರಿಂದ ಆರ್. ರಾಜೇಂದ್ರಗೆ ಬಿ.ಫಾರಂ | ಜೆಡಿಎಸ್‍ನಿಂದ ಜನತಾ ಸಂಗಮ ಸಮಾವೇಶ

    ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಲು ಇಂದು ಕಡೇ ದಿನವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ರಾಜೇಂದ್ರ, ಜೆಡಿಎಸ್‍ಅಭ್ಯರ್ಥಿಯಾಗಿ ಸ್ವಯಂ ನಿವೃತ್ತಿ ಪಡೆದ ಕೆಎಎಸ್ ಅಧಿಕಾರಿ ಅನಿಲ್‍ಕುಮಾರ್, ಬಿಜೆಪಿ ಅಭ್ಯರ್ಥಿಯಾಗಿ ಬಿಬಿಎಂಪಿಮಾಜಿ ಕಾರ್ಪೋರೇಟರ್ ಎನ್.ಲೋಕೇಶ್‍ಗೌಡ ಅವರು ಉಮೇದುವಾರಿಕೆ ಸಲ್ಲಿಸಲಿದ್ದಾರೆ.

ಕೈ ನಾಯಕರ ಸಮ್ಮುಖ ಉಮೇದುವಾರಿಕೆ:

ನಿರೀಕ್ಷೆಯಂತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್.ರಾಜೇಂದ್ರ ಅವರಿಗೆ ಟಿಕೆಟ್ ದೊರೆತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಸೋಮವಾರ ಬಿ.ಫಾರಂ ಪಡೆದರು. ಇಂದು ಬೆಳಿಗ್ಗೆ 10.45 ರಿಂದ 11.15ರೊಳಗೆ ಮಾಜಿಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕರಾದ ವೆಂಕಟರವಣಪ್ಪ, ಡಾ.ಎಚ್.ಡಿ.ರಂಗನಾಥ್ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಎಸ್.ಷಫಿ ಅಹಮದ್, ರಫೀಕ್ ಅಹಮದ್, ಷಡಾಕ್ಷರಿ, ಜಿಲ್ಲಾಧ್ಯಕ್ಷ ರಾಮಕೃಷ್ಣ, ಮುರಳೀಧರಹಾಲಪ್ಪ ಮತ್ತಿತರೊಡಗೂಡಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದು, ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಇಂದಿನಿಂದ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ನ.17 ಬುಧವಾರ ಶುಭದಿನವೆಂದು ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ರಾಜೇಂದ್ರ ತಮಗೆ ಟಿಕೆಟ್ ಸಿಗುವ ವಿಶ್ವಾಸವ್ಯಕ್ತಪಡಿಸಿದ್ದರು.ನ.21 ಮಾಜಿ ಸಿಎಂ ಸಿದ್ದರಾಮಯ್ಯ ಸಹ ಜನಜಾಗೃತಿ ಸಮಾವೇಶದ ವೇದಿಕೆಯಲ್ಲೇ ಬಹುತೇಕ ಆರ್.ರಾಜೇಂದ್ರ ಅವರೇ ಅಭ್ಯರ್ಥಿಯೆಂದು ಘೋಷಿಸಿದ್ದರು. ಅದರಂತೆ ಎಐಸಿಸಿ ಸೋಮವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ರಾಜೇಂದ್ರ ಅವರ ಹೆಸರನ್ನು ತುಮಕೂರು ಕ್ಷೇತ್ರಕ್ಕೆ ನಿಗದಿಪಡಿಸಲಾಗಿದೆ ಎಂದರು.

ನಾಮಪತ್ರ ಸಲ್ಲಿಕೆ ಜೊತೆಗೆ ಜೆಡಿಎಸ್ ಸಮಾವೇಶ:

ಜೆಡಿಎಸ್ ಅಭ್ಯರ್ಥಿಯಾಗಿ ಕೆಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ಜಿಪಂ ಮಾಜಿ ಸದಸ್ಯ ರಾಮಾಂಜಿನಪ್ಪ ಅವರ ಪುತ್ರ ಅನಿಲ್‍ಕುಮಾರ್ ಸಹ ಇಂದು ಬೆಳಿಗ್ಗೆ 11ಕ್ಕೆ ನಾಮಪತ್ರ ಸಲ್ಲಿಸಲಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಡಿ.ಸಿ.ಗೌರಿಶಂಕರ್, ಎಂ.ವಿ.ವೀರಭದ್ರಯ್ಯ, ಎಂಎಲ್ಸಿ ತಿಪ್ಪೇಸ್ವಾಮಿ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ಜೆಡಿಎಸ್ ಮುಖಂಡರು ಸಾಥ್ ನೀಡುವರು. ಬಳಿಕ ಅಮಾನಿಕೆರೆ ಗಾಜಿನಮನೆಯಲ್ಲಿ ಜೆಡಿಎಸ್ ಜನತಾ ಸಂಗಮ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ಜಿಲ್ಲೆ- ರಾಜ್ಯದ ಜೆಡಿಎಸ್ ಮುಖಂಡರು ಹಾಲಿ ಮಾಜಿಶಾಸಕರು, ಗ್ರಾಪಂ ಸದಸ್ಯರು,ಮಹಾನಗರಪಾಲಿಕೆ, ನಗರಸಭೆ, ಪುರಸಭೆ,ಪಟ್ಟಣ ಪಂಚಾಯ್ತಿ ಸದಸ್ಯರು ಹಾಗೂ ಜಿಪಂ-ತಾಪಂ ಮಾಜಿ ಸದಸ್ಯರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವರು ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಮಧು ತಿಳಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಲೋಕೇಶ್‍ಗೌಡ ಉಮೇದುವಾರಿಕೆ:

ಬಿಜೆಪಿ ಅಭ್ಯರ್ಥಿಯಾಗಿ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎನ್.ಲೋಕೇಶ್‍ಗೌಡ ಉಮೇದುವಾರಿಕೆ ಸಲ್ಲಿಸಲಿದ್ದು, ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ 10.30ಕ್ಕೆ ಪಕ್ಷದ ಜಿಲ್ಲಾ ಕಚೇರಿ ಬಳಿ ಸಮಾವೇಶಗೊಂಡು ಅಲ್ಲಿಂದ ಮೆರವಣಿಗೆ ಮೂಲಕ ಡಿಸಿ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ವೇಳೆ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ರಾಜ್ಯ ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾನಾ, ಬಿಜೆಪಿ ಶಾಸಕರಾದ ಸಿ.ಎಂ.ರಾಜೇಶ್‍ಗೌಡ, ಮಸಾಲೆಜಯರಾಂ, ಜಿ.ಬಿ.ಜ್ಯೋತಿಗಣೇಶ್, ಎಂಎಲ್ಸಿ ಚಿದಾನಂದ,ಎಂ.ಗೌಡ, ಸಂಸದ ಜಿ.ಎಸ್.ಬಸವರಾಜ್, ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾಜಿ ಸಚಿವ ಶಿವಣ್ಣ ಸೇರಿ ಮಾಜಿಶಾಸಕರು, ಪಕ್ಷದ ಜಿಲ್ಲಾ ಮುಖಂಡರು, ನಿಗಮ ಮಂಡಳಿ ಅಧ್ಯಕ್ಷರು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಉಪಸ್ಥಿತರಿರುವರು ಎಂದು ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap