ಬೆಂಗಳೂರಿಗರಿಗೆ ಇದೆಂತಾ ದುಸ್ಥಿತಿ : ಮಹಿಳೆಯರ ಟಾಯ್ಲೆಟ್‌ ಬಳಸುತ್ತಿರುವ ಪುರುಷರು,

ಬೆಂಗಳೂರು :

    ಬೆಂಗಳೂರಿನ ಪ್ರಮುಖ ಸ್ಥಳದಲ್ಲಿ ಮಹಿಳೆಯರ ಶೌಚಾಲಯವನ್ನೇ ಪುರುಷರು ಬಳಸುವಂತಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಗರದಲ್ಲಿ ಪ್ರಖ್ಯಾತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂತಹ ದುಸ್ಥಿತಿ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್‌ ಕೂಡ ಕಿಡಿಕಾರಿದ್ದಾರೆ.

   ಇನ್ನು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ವಿಕ್ಟೋರಿಯಾದ ಸಿ ಬ್ಲಾಕ್‌ನಲ್ಲಿ ಶೌಚಾಲಯ ಬಂದ್‌ ಆಗಿದೆಯಂತೆ. ಇದರಿಂದ ಮಹಿಳಾ ವಾರ್ಡ್‌ನಲ್ಲಿರುವ ಟಾಯ್ಲೆಟ್‌ಗಳನ್ನೇ ಬಳಸಲು ಸೂಚನೆ ನೀಡಲಾಗಿದ್ದು, ಇದರಿಂದ ರೋಗಿಗಳಿಗೆ ಮುಜುಗರ ಉಂಟಾಗಿದೆ ಎಂದು ಹೇಳಲಾಗಿದೆ.

   ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ವಿಕ್ಟೋರಿಯಾದಲ್ಲಿ ಈ ಸಮಸ್ಯೆ ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಆಸ್ಪತ್ರೆಯ ಸಿ ಬ್ಲಾಕ್‌ನಲ್ಲಿರೋ ಪುರುಷರ ವಾರ್ಡ್‌ನಲ್ಲಿ ಟಾಯ್ಲೆಟ್‌ ಬಂದ್‌ ಆಗಿರುವ ಕಾರಣ ಎರಡು ದಿನಗಳಿಂದ ಮೂತ್ರ ವಿಸರ್ಜನೆ ಹಾಗೂ ಮಲ ವಿಸರ್ಜನೆಗೆ ಪರದಾಡಿದ್ದಾರೆ ಎನ್ನಲಾಗಿದೆ.

   ಟಾಯ್ಲೆಟ್‌ನ ಪೈಪ್‌ನಲ್ಲಿ ನೀರು ಸರಾಗವಾಗಿ ಹರಿಯದ ಕಾರಣ, ಅದನ್ನು ಬಂದ್‌ ಮಾಡಲಾಗಿದೆ ಎಂದು ಹೇಳಲಾಗಿದೆ. ನೀರು ಬ್ಲಾಕ್‌ ಆಗಿರೋ ಕಾರಣ ವಾರ್ಡ್‌ ಒಳಗೆಲ್ಲ ದುರ್ವಾಸನೆ ಬೀರುತ್ತಿದ್ದು, ರೋಗಿಗಳು ಸಂಕಟ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿದೆ.ಅಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗಳಿಗೆ ಊಟ ಮಾಡಲು ಸಹ ಈ ವಾಸನೆ ಬಿಡುತ್ತಿಲ್ಲ. ಇದರಿಂದಾಗಿ ರೋಗಿಗಳು ವಾಂತಿ ಮಾಡಿಕೊಳ್ಳುತ್ತಿದ್ದಾರಂತೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೆ, ಇಲ್ಲಿನ ಅವ್ಯವಸ್ಥೆಗೆ ಮತ್ತಷ್ಟು ರೋಗಗಳು ಸುತ್ತಿಕೊಳ್ಳುವಂತಿದೆ ಎಂದು ದೂರಿದ್ದಾರೆ ಎಂದು ವರದಿಯಾಗಿದೆ.ಈ ಬಗ್ಗೆ ರಾಜ್ಯ ಸರ್ಕಾರವನ್ನು ವಿಪಕ್ಷ ನಾಯಕ ಆರ್‌.ಅಶೋಕ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

   ಮನೆ ಮನೆಗೆ ಆರೋಗ್ಯ ದೂರದ ಮಾತು ಸ್ವಾಮಿ ಮೊದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶೌಚಾಲಯ ಸರಿಮಾಡಿ ಎಂದು ಆಗ್ರಹಿಸಿದ್ದಾರೆ.ಕಾಕಾ ಪಟೀಲನಿಗೂ ಫ್ರೀ, ನಿಂಗೂ ಫ್ರೀ ಎಂದು ಕನ್ನಡಿಗರ ಕಿವಿ ಮೇಲೆ ಹೂ ಇಟ್ಟು ಅಧಿಕಾರಕ್ಕೇರಿದ್ದಾಯ್ತು. ಈಗ ಮನೆ ಮನೆಗೆ ಆರೋಗ್ಯ ಎಂದು ಪುಕ್ಕಟೆ ಪ್ರಚಾರಕ್ಕೆ ಮತ್ತೊಂದು ದಾರಿ ಹುಡುಕಿಕೊಂಡಿರುವ ಕರ್ನಾಟಕ ಸರ್ಕಾರ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶೌಚಾಲಯ ಬಂದ್ ಮಾಡಿ ಪುರುಷರು ಮಹಿಳೆಯರ ವಾರ್ಡ್‌ನ ಶೌಚಾಲಯಕ್ಕೆ ಹೋಗುವ ಶೋಚನೀಯ ಪರಿಸ್ಥಿತಿ ತಂದಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ರಾಜಧಾನಿಯಲ್ಲಿರುವ ಪ್ರತಿಷ್ಠಿತ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಈ ಗತಿ ಆದರೆ ಇನ್ನು ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳ ಅವಸ್ಥೆ ಏನಾಗಿರಬಹುದು ಎಂದು ನೀವೇ ಊಹಿಸಿಕೊಳ್ಳಿ. ಪೊಳ್ಳು ಘೋಷಣೆಗಳು, ಟೊಳ್ಳು ಭರವಸೆಗಳಿಂದ ಆರೋಗ್ಯ ಕ್ಷೇತ್ರ ಸುಧಾರಣೆ ಆಗುವುದಿಲ್ಲ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಅವರೇ..ಎಂದು ಕಿಡಿಕಾರಿದ್ದಾರೆ.

   ಬಡವರು, ಕೆಳಮಧ್ಯಮ ವರ್ಗದ ಜನರಿಗೆ ಆಸರೆಯಾಗಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲು ಮೂಲಸೌಕರ್ಯ ನಿರ್ವಹಣೆ ಮಾಡಿ. ಮನೆ ಮನೆಗೆ ಆರೋಗ್ಯ ಕೊಡದಿದ್ದರೂ ಪರವಾಗಿಲ್ಲ, ಕನಿಷ್ಠ ಪಕ್ಷ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯ ಸಿಗುವಂತೆ ನೋಡಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

   ಮನೆ ಬಾಗಿಲಿಗೆ ಆರೋಗ್ಯ ಎಂದ ಸಿಎಂ: ಇನ್ನು ಸಿಎಂ ಸಿದ್ದರಾಮಯ್ಯ ಅವರು ಗೃಹ ಆರೋಗ್ಯ ಯೋಜನೆಯ ಮೂಲಕ ನಿಮ್ಮ ಮನೆ ಬಾಗಿಲಲ್ಲಿ ಆರೋಗ್ಯ ತಪಾಸಣಾ ವ್ಯವಸ್ಥೆ ಬರುತ್ತಿದೆ ಎಂದು ನಿನ್ನೆ ಹೇಳಿದ್ದರು.

   ರಕ್ತದೊತ್ತಡ, ಸಕ್ಕರೆ ಖಾಯಿಲೆ ಹಾಗೂ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್, ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ಮಾನಸಿಕ ಆರೋಗ್ಯದ ತಪಾಸಣೆ ಸೇರಿದಂತೆ ಬಹುಜನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳನ್ನು ಮನೆಯಲ್ಲೇ ಪತ್ತೆಮಾಡಿ, ಪರಿಸ್ಥಿತಿ ಕೈಮೀರದಂತೆ ನಿಯಂತ್ರಿಸುವುದು ಈ ಯೋಜನೆಯ ಉದ್ದೇಶ. ನೀವಿನ್ನು ನಿಶ್ಚಿಂತರಾಗಿರಿ, ನಿಮ್ಮ ಆರೋಗ್ಯದ ಕಾಳಜಿಯನ್ನು ನಾವು ವಹಿಸುತ್ತೇವೆ ಎಂದು ಅಭಯ ನೀಡಿದ್ದರು.

Recent Articles

spot_img

Related Stories

Share via
Copy link