ಟೋಕಿಯೋದಲ್ಲಿ ಮಕ್ಕಳ ಸುರಕ್ಷತೆ ಹೇಗಿದೆ ಗೊತ್ತಾ…?

ಟೋಕಿಯೋ

   ಬೀದಿಯಲ್ಲಿ ಬೆಳಗಿನ ಸಮಯದಲ್ಲಿ ಓಡಾಡುವಾಗ ಒಂದು ಅಚ್ಚರಿ ದೃಶ್ಯವನ್ನು ಗಮನಿಸಬಹುದು. ಅದೇನೆಂದರೆ, ಐದು ವರ್ಷದ ಪುಟಾಣಿ ಮಕ್ಕಳು ಶಾಲೆಗೆ ಒಬ್ಬರೇ ಹೋಗುವು ದನ್ನು ನೋಡಬಹುದು. ಬೆಂಗಳೂರಿನಲ್ಲಿ ತಂದೆ-ತಾಯಂದಿರು 10-15 ವರ್ಷದವರನ್ನೂ ಖುದ್ದಾಗಿ ಶಾಲೆಗೆ ಬಿಟ್ಟು ಬರುವುದು ಸಾಮಾನ್ಯ. ಆದರೆ ಒಂದನೇ ತರಗತಿ ಮಕ್ಕಳೂ ಅಲ್ಲಿ ನಿರಾತಂಕವಾಗಿ ಒಬ್ಬರೇ ಶಾಲೆಗೆ ಹೋಗುತ್ತಾರೆ. ಕೆಲ ವರ್ಷಗಳ ಹಿಂದೆ, ಅಮೆರಿಕದ ಪತ್ರಿಕೆಯೊಂದು ಮುಖಪುಟ ದಲ್ಲಿ ಈ ವಿಷಯವನ್ನೇ ದೊಡ್ಡದಾಗಿ ಪ್ರಕಟಿಸಿ, ‘ಟೋಕಿಯೋ ವಿಶ್ವದಲ್ಲಿಯೇ ಸುರಕ್ಷಿತ ನಗರ’ ಎಂದು ಬರೆದಿತ್ತು. ಟೋಕಿಯೋದಲ್ಲಿ ಐದು ವರ್ಷದ ಮಕ್ಕಳು ಸ್ವತಂತ್ರವಾಗಿ ಸಾರ್ವಜನಿಕ ಸಾರಿಗೆ ಯಲ್ಲಿ ಯಾರ ಸಹಾಯವಿಲ್ಲದೇ ಸಂಚರಿಸುತ್ತಾರೆ.

   ಅಲ್ಲಿನ ಮಕ್ಕಳು ಒಬ್ಬರೇ ತಮ್ಮ ಮನೆಯಿಂದ ಅರ್ಧ ಕಿ.ಮೀ. ದೂರದಲ್ಲಿರುವ ಬಸ್ ನಿಲ್ದಾಣ ತಲುಪಿ, ಅಲ್ಲಿಂದ ಬಸ್ಸನ್ನೇರಿ ಶಾಲೆಗೆ ಹೋಗಿ, ಮರಳುವುದನ್ನು ನೋಡಬಹುದು. ನಿಜ, ಜಪಾನ್ ವಿಶ್ವದ ಅತ್ಯಂತ ಸುರಕ್ಷಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಇಲ್ಲಿ ಅಪರಾಧದ ಪ್ರಮಾಣ ಬಹಳ ಕಡಿಮೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಸಹಾಯ ಮಾಡಲು ಸಿದ್ಧರಾಗಿರುವವರು ಹೆಚ್ಚು. 

   ಈ ಕಾರಣದಿಂದ, ಐದಾರು ವರ್ಷದ ಮಕ್ಕಳೂ ಶಾಲೆಗೆ ಸ್ವತಂತ್ರವಾಗಿ ಹೋಗಲು ಸಾಧ್ಯವಾಗುತ್ತದೆ. ಟೋಕಿಯೋದಲ್ಲಿ ರೈಲುಗಳು ಮತ್ತು ಬಸ್ಸುಗಳು ಸಮಯಕ್ಕೆ ಸರಿಯಾಗಿ ಓಡುತ್ತವೆ. ಮಕ್ಕಳಿಗೆ ವಿಶೇಷ ಪಾಸ್‌ಗಳು ಲಭ್ಯವಿದ್ದು, ಇವು ಅವರ ಪ್ರಯಾಣವನ್ನು ಸುಲಭಗೊಳಿಸುತ್ತವೆ. ಬಹುತೇಕ ನಿಲ್ದಾಣಗಳಲ್ಲಿ ಎಲಿವೇಟರ್‌ಗಳು ಮತ್ತು ಶೌಚಾಲಯಗಳ ವ್ಯವಸ್ಥೆ ಇದೆ, ಇದು ಮಕ್ಕಳಿಗೆ ಅನುಕೂಲಕರವಾಗಿದೆ.

   ಮಕ್ಕಳಿಗೆ ಸಣ್ಣ-ಪುಟ್ಟ ಅನಾನುಕೂಲವಾದರೂ, ಅವರ ಸಹಾಯಕ್ಕೆ ಸಾರ್ವಜನಿಕರು ಧಾವಿಸು ವುದು ಅಲ್ಲಿನ ಸಮಾಜ ಜೀವನದಲ್ಲಿ ಹಾಸುಹೊಕ್ಕಾಗಿದೆ. ಜಪಾನಿನ ಶಾಲೆಗಳು ಮಕ್ಕಳಲ್ಲಿ ಸ್ವಾವ ಲಂಬನೆ ಮತ್ತು ಶಿಸ್ತನ್ನು ಬೆಳೆಸುವತ್ತ ಆದ್ಯತೆ ನೀಡುವುದು ವಿಶೇಷ. ಮೊದಲ ತರಗತಿಯಿಂದಲೇ ಮಕ್ಕಳಿಗೆ ಸ್ವತಂತ್ರವಾಗಿ ಪ್ರಯಾಣ ಮಾಡುವ ತರಬೇತಿ ನೀಡಲಾಗುತ್ತದೆ ಮತ್ತು ಅವರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರೇರೇಪಿತರಾಗುತ್ತಾರೆ.

   ಈ ನಿಟ್ಟಿನಲ್ಲಿ ಪಾಲಕರು ಯಾವ ರೀತಿ ವರ್ತಿಸಬೇಕು ಎಂಬುದನ್ನೂ ತಿಳಿಸಿ ಕೊಡಲಾಗುತ್ತದೆ. ಜಪಾನಿನಲ್ಲಿ ಸಮುದಾಯದ ಸಹಕಾರ ಮಹತ್ವಪೂರ್ಣವಾದದ್ದು. ಹಿರಿಯ ನಾಗರಿಕರೂ ಮಕ್ಕಳಿಗೆ ರಸ್ತೆ ದಾಟಲು ಸಹಾಯ ಮಾಡುತ್ತಾರೆ ಮತ್ತು ಅಂಗಡಿಗಳು ಅಥವಾ ಮನೆಗಳು ಮಕ್ಕಳಿಗೆ ತಾತ್ಕಾ ಲಿಕ ಆಶ್ರಯ ನೀಡಲು ಹಿಂದೇಟು ಹಾಕುವುದಿಲ್ಲ.

   ತಮ್ಮ ಮಕ್ಕಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದನ್ನು ಪಾಲಕರು ಎಳವೆಯಿಂದಲೇ ರೂಢಿ ಮಾಡಿಸುತ್ತಾರೆ. ಅವರು ಮಕ್ಕಳಿಗೆ ಸುರಕ್ಷಿತವಾಗಿ ಸಾಗಲು ಅಗತ್ಯವಾದ ಮಾರ್ಗದರ್ಶನವನ್ನು ನೀಡುತ್ತಾರೆ ಮತ್ತು ಮಕ್ಕಳ ಮೇಲೆ ನಂಬಿಕೆ ಇಡುತ್ತಾರೆ. ಟೋಕಿಯೋದಲ್ಲಿ ಮಕ್ಕಳಿಗೆಂದೇ ಅನೇಕ ಸೌಲಭ್ಯಗಳಿವೆ. ಉದ್ಯಾನಗಳು, ಆಟದ ಮೈದಾನಗಳು ಮತ್ತು ಮಕ್ಕಳಿಗೆ ಅನುಕೂಲಕರವಾದ ಸಾರ್ವಜನಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜಪಾನಿನ ಸಂಸ್ಕೃತಿಯು ಮಕ್ಕಳಲ್ಲಿ ಶಿಸ್ತು, ಸ್ವತಂತ್ರ ಕಾರ್ಯನಿರ್ವಹಣೆ, ಹೊಣೆಗಾರಿಕೆ ಬೆಳೆಸುವತ್ತ ವಿಶೇಷ ಗಮನ ನೀಡುತ್ತದೆ.

   ಮಕ್ಕಳಿಗೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರೇರೇಪಿಸಲಾಗುತ್ತದೆ ಮತ್ತು ಅವರು ಬಾಲ್ಯ ದಿಂದಲೇ ಸಮಾಜದಲ್ಲಿ ತಮ್ಮ ಪಾತ್ರವನ್ನು ಅರಿಯುತ್ತಾರೆ. ಜಪಾನಿನಲ್ಲಿ ಈ ಸ್ವಾತಂತ್ರ್ಯದ ಹಿಂದೆ ಬಲವಾದ ಸಾಮಾಜಿಕ ವ್ಯವಸ್ಥೆಯಿದೆ. ರಸ್ತೆಗಳಲ್ಲಿ ಕಟ್ಟುನಿಟ್ಟಿನ ನಿಯಮಾವಳಿಗಳಿದ್ದು, ವಾಹನ ಚಲಾಯಿಸಲು ನಿಖರ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮಕ್ಕಳು ರಸ್ತೆ ದಾಟುತ್ತಿದ್ದರೆ ದೂರ ದಿಂದಲೇ ಚಾಲಕರು ವಾಹನವನ್ನು ನಿಲ್ಲಿಸುತ್ತಾರೆ.

   ಶಾಲೆ ಸಮೀಪದ ಪ್ರದೇಶಗಳಲ್ಲಿ ‘ಜುಟ್ ಕೊ’ ಅಥವಾ ‘ಶಾಲಾ ಪಥ’ ಎಂಬ ಸೂಚನೆಗಳು ಇರುತ್ತವೆ. ಶಾಲೆಗಳ ಹೊರಗೆ ಗಸ್ತು ತಿರುಗುವ ಸ್ವಯಂಸೇವಕರಿರುತ್ತಾರೆ. ಅವರು ಶಾಲೆ ಆರಂಭಿಸುವ ಸಮಯ ದಲ್ಲಿ ಮಕ್ಕಳಿಗೆ ನೆರವಾಗುತ್ತಾರೆ. ಪೊಲೀಸ್ ಇಲಾಖೆ ಕೂಡ ಜನನಿವಾಸಿ ಪ್ರದೇಶದಲ್ಲಿರುವ ‘ಕೊಬಾನ್’ ಎಂಬ ಸಣ್ಣ ಪೊಲೀಸ್ ಸ್ಟೇಷನ್‌ಗಳನ್ನು ಬಳಸಿಕೊಂಡು ಸ್ಥಳೀಯ ಮಕ್ಕಳ ಚಟು ವಟಿಕೆಗಳ ಮೇಲೆ ಗಮನ ಇಡುತ್ತದೆ.

   ಟೋಕಿಯೋ ಅತ್ಯಂತ ಜನದಟ್ಟಣೆಯ ನಗರ. ಜಗತ್ತಿನ ಉಳಿದವುಗಳಿಗಿಂತ ನಗರ ಜೀವನದ ಒತ್ತಡ ಹೆಚ್ಚು. ಆದರೂ ಎಲ್ಲವೂ ಸುಸೂತ್ರವಾಗಿ, ಕ್ರಮಬದ್ಧವಾಗಿ, ವ್ಯವಸ್ಥಿತವಾಗಿ ನಡೆಯುತ್ತಿರುತ್ತವೆ.