ಟೋಲ್ ಪ್ಲಾಜಾ ಪರಿಶೀಲಿಸಿದ ಎನ್‌ಹೆಚ್ ಮತ್ತು ಎನ್‌ಹೆಚ್‌ಎಐ ಅಧಿಕಾರಿಗಳು….!

ಬಾಗೇಪಲ್ಲಿ: 

   ರಾಷ್ಟೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಗಳನ್ನು ಕಲ್ಪಿಸದೆ ಟೋಲ್ ಫ್ಲಾಜಾದಲ್ಲಿ ಸುಂಕ ವಸೂಲಿ ಮಾಡುತ್ತಿರುವ ಗುತ್ತಿಗೆದಾರ ರನ್ನು ರಾಷ್ಟೀಯ ಹೆದ್ದಾರಿ ಹಾಗು ರಾಷ್ಟೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಟ್ಟಣಕ್ಕೆ ಸಮೀಪದ ನಾರೇಪಲ್ಲಿ ಸಮೀಪದ ಟೋಲ್ ಫ್ಲಾಜಾದವರು ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸರ್ಕಾರಿ ನಿಯಮಗಳಂತೆ ಸೌಲಭ್ಯಗಳನ್ನು ಕಲ್ಪಿಸದೆ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದರು. ಈ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ರಾಷ್ಟೀಯ ಹೆದ್ದಾರಿ ಹಾಗು ರಾಷ್ಟೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿ ಕಾರದ ಅಧಿಕಾರಿಗಳು ಬಾಗೇಪಲ್ಲಿ ಟೋಲ್ ಫ್ಲಾಜಾ ಬಳಿ ತನಿಖೆಯನ್ನು ನಡೆಸಿದರಲ್ಲದೆ ಸರ್ಕಾರದ ನಿಯಮಗಳಂತೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಿದರು.

    ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ನಿಯಮಗಳ ಪ್ರಕಾರ ಟೋಲ್ ಪ್ಲಾಜಾ ಬಳಿಯಿಂದ ಪ್ರತಿ ೨೦ ಕಿಮೀ ವ್ಯಾಪ್ತಿಯಲ್ಲಿ ೨ ಕ್ರೇನ್, ೨ ಅಂಬುಲೆನ್ಸ್, ೨ ವಾಟರ್ ಟ್ಯಾಂಕರ್ ಇರಬೇಕು. ಹೆದ್ದಾರಿಯಲ್ಲಿ ಅಪಘಾತಗಳು ನಡೆದರೆ ತುರ್ತಾಗಿ ಗಾಯಾಳು ಗಳನ್ನು ಗುತ್ತಿಗೆದಾರರು ಸಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಆದರೆ ಅಪಘಾತದ ಸ್ಥಳಕ್ಕೆ ಸರ್ಕಾರಿ ಅಂಬುಲೆನ್ಸ್ಗಳು ಹೋಗುತ್ತಿದೆಯೇ ಹೊರತು ಟೋಲ್ ಗುತ್ತಿಗೆದಾರನ ಅಂಬುಲೆನ್ಸ್ಗಳು ಹೋಗುತ್ತಿಲ್ಲ. ಇವುಗಳ ತುರ್ತು ಸಂಖ್ಯೆಯೂ ಸಾರ್ವಜನಿಕರಿಗೆ ತಿಳಿಯು ವಂತೆ ಎಲ್ಲಿಯೂ ನಮೂದಿಸಿಲ್ಲ. ಇಲ್ಲಿ ವಾಹನಗಳಿಂದ ಸುಂಕ ವಸೂಲಿ ಮಾಡುವುದಕ್ಕೆ ತೋರಿಸುವ ಆಸಕ್ತಿ ಸೌಲಭ್ಯಗಳನ್ನು ಕಲ್ಪಿಸಲು ತೋರಿಸುತ್ತಿಲ್ಲ.

   ಸಾರ್ವಜನಿಕರ ಪ್ರಾಣ ರಕ್ಷಣೆಗೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಟೋಲ್ ಗುತ್ತಿಗೆದಾರ ರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರಲ್ಲದೆ. ಇನ್ನು ಒಂದು ವಾರದ ಸಮಯವನ್ನು ನಿಮಗೆ ನೀಡುತ್ತಿದ್ದೇನೆ. ಸರ್ಕಾರಿ ನಿಯಮಗಳ ಪಾಲನೆಯನ್ನು ಸರಿಯಾಗಿ ಮಾಡಿದರೆ ಸರಿ ಇಲ್ಲದಿದ್ದರೆ ಟೋಲ್‌ಬಳಿ ವಾಹನಗಳಿಂದ ಸುಂಕ ವಸೂಲಿ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆಯನ್ನು ನೀಡಿದರು. ಇವರ ನಿರ್ಲಕ್ಷ್ಯ ಮುಂದುವರೆದರೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ರವರಿಗೆ ಸೂಚಿಸಿದರು.

   ಬಾಗೇಪಲ್ಲಿ ಟಿಬಿಕ್ರಾಸ್ ಸಮೀಪದ ಮದರಸಾ ಮುಂಭಾಗದಿಂದ ಪರಗೋಡು ಸಮೀಪದ ಸಾಲುಮರದ ತಿಮ್ಮಕ್ಕ ಪಾರ್ಕ ವರೆಗೆ ಪ್ರತಿನಿತ್ಯ ಅಪಘಾತಗಳು ನಡೆಯುತ್ತಲೇ ಇದ್ದು. ಹೆದ್ದಾರಿ ರಸ್ತೆ ವಿಭಜಕದ ನಡುವೆ ಸಾರ್ವಜನಿಕರು ಮತ್ತು ದ್ವಿಚಕ್ರವಾಹನಗಳ ಸವಾರರು ನುಸುಳುತ್ತಿರುವುದು ಅಪಘಾತಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಅನೇಕರು ತಮ್ಮ ಅಮೂಲ್ಯವಾದ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಪ್ರದೇಶದಲ್ಲಿ ಡಿವೈಡರ್ ನಡುವೆ ಮೀಡಿಯನ್ ರೈಲಿಂಗ್ಸ್(ಕಬ್ಬಿಣದ) ತುರ್ತಾಗಿ ಅಳವಡಿಸಬೇಕು. ಯಾವುದೇ ಮುಲಾಜಿಗೆ ಒಳಗಾಗದೆ ಜನರು ಮತ್ತು ದ್ವಿಚಕ್ರವಾಹನ ಸವಾರರು ಅತ್ತ-ಇತ್ತ ಓಡಾಡದಂತೆ ನಿರ್ಬಂಧಿಸಿ ಅಪಘಾತಗಳನ್ನು ತಪ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿ ದರು.

  ಟೋಲ್ ಪ್ಲಾಜಾ ತನಿಖೆಗೆ ಆಗಮಿಸಿದ್ದ ರಾಷ್ಟೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಜಗದೀಶ್, ಇಇ ಪಂಪಾಪತಿ, ಎಇಇ ಮಲ್ಲಿಕಾರ್ಜುನ್ ಮಲಿಕೆರೆ, ಜೆಇ ಶಿವಣ್ಣ, ರಾಷ್ಟೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ವ್ಯವಸ್ಥಾಪಕ ಸೌರಭ್, ತಹಶೀಲ್ದಾರ್ ಮನೀಷ್ ಎನ್ ಪತ್ರಿ, ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ, ನಯಾಜ್ ಬೇಗ್ ಉಪಸ್ಥಿತರಿದ್ದರು.