ದಿಢೀರ್‌ ಕುಸಿದ ಟಮೋಟೋ ಬೆಲೆ : ಕಂಗಾಲಾದ ರೈತರು

ಚಿಕ್ಕಬಳ್ಳಾಪುರ

     ಬಿಟ್ಟೂಬಿಡದ ಜಿಟಿ ಜಿಟಿ ಮಳೆಯಿಂದ ಕೆಂಪು ಸುಂದರಿ ಟೊಮೇಟೊಗೆ ಕಂಟಕ ಎದುರಾಗಿದ್ದು ಟೊಮೇಟೊ ಬೆಲೆ ಕುಸಿದಿದೆ. ಮೂರು ದಿನಗಳ ಹಿಂದೆ 15 ಕೆಜಿಯ ಒಂದು ಬಾಕ್ಸ್ ಟೊಮೇಟೊ ಬೆಲೆ ಸಾವಿರ ರೂಪಾಯಿ ಇತ್ತು. ಆದರೆ ಈಗ ದಿಢೀರ್ ಬೆಲೆ ಕುಸಿದಿದ್ದು 15 ಕೆಜಿಯ ಒಂದು ಬಾಕ್ಸ್ ಟೊಮೇಟೊ ಬೆಲೆ 250 ರೂಪಾಯಿಗೆ ಆಗಿದೆ. ಮಳೆಯಿಂದ ಟೊಮೇಟೊ ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಾಟವಾಗದ ಕಾರಣ ಚಿಕ್ಕಬಳ್ಳಾಪುರದ ಎಪಿಎಂಸಿ ಟೊಮೇಟೊ ಮಾರುಕಟ್ಟೆಯಲ್ಲಿ ಟೊಮೇಟೊ ಕೇಳುವವರೇ ಇಲ್ಲದಂತಾಗಿದೆ. 

    ಮಳೆಯಿಂದ ವಿವಿಧ ರಾಜ್ಯಗಳಿಗೆ ಟೊಮೇಟೊ ಎಕ್ಸಪೋರ್ಟ್ ಆಗ್ತಿಲ್ಲ. ದಿಢೀರ್ ಬೆಲೆ ಕುಸಿದಿದೆ. ಮಳೆಯಿಂದ ಹಣ್ಣುಗಳು ಹಾಳಾಗುತ್ತಿರುವ ಹಿನ್ನಲೆ ಖರೀದಿದಾರರು ಬರ್ತಿಲ್ಲ ಎಂದು ರೈತರೊಬ್ಬರು ಕಣ್ಣೀರು ಹಾಕಿದ್ದಾರೆ. 

  ಇನ್ನು ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಶಾಲೆಗಳಿಗೆ ರಜೆ ನೀಡಿಲ್ಲ. ಮಳೆಯ ಮುನ್ಸೂಚನೆ ಇದ್ರೂ ಸೂಕ್ತ ಕ್ರಮ ಕೈಗೊಂಡಿಲ್ಲ. 

  ನಿರಂತರ ಮಳೆಗೆ ರಾಯಚೂರಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಲಿಂಗಸುಗೂರು ತಾಲೂಕಿನ ಗೌಡೂರು ತಾಂಡಾದಲ್ಲಿ ಮಳೆಯಿಂದಾಗಿ ಹೊಲದ ಬದುವಿನ ಮಣ್ಣು ಕುಸಿದಿದ್ದು, ಬೃಹತ್ ಬಂಡೆ ಉರುಳಿಬಿದ್ದಿದೆ. ದುರದೃಷ್ಟವಶಾತ್ ಬಂಡೆ ಬಳಿಯೇ ಆಟವಾಡ್ತಿದ್ದ ಮೂವರು ಮಕ್ಕಳ ಮೇಲೆ ಬಂಡೆ ಉರುಳಿ ಬಿದ್ದಿದೆ. 9 ವರ್ಷದ ಮಂಜುನಾಥ್‌, 8 ವರ್ಷದ ವೈಶಾಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ 18 ವರ್ಷದ ರಘು ಸಾವನ್ನಪ್ಪಿದ್ದಾನೆ.

   ಮೂವರು ಸಾವಿನ ಸುದ್ದಿ ಕೇಳ್ತಿದ್ದಂತೆ ಹೆತ್ತವ್ರಿಗೆ ದಿಗಿಲು ಬಡಿದಂತಾಗಿತ್ತು. ಘಟನಾ ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಯಮನಂತೆ ಮಕ್ಕಳ ಮೇಲೆ ಎರಗಿದ್ದ ಬಂಡೆ ಎದುರು ಕಣ್ಣೀರ ಧಾರೆ ಹರಿದಿತ್ತು.

 

Recent Articles

spot_img

Related Stories

Share via
Copy link
Powered by Social Snap