ಟೊರೊಂಟೊ
ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಡೆಲ್ಟಾ ಏರ್ಲೈನ್ಸ್ ವಿಮಾನ ಅಪಘಾತಕ್ಕೀಡಾಗಿದೆ.15 ಪ್ರಯಾಣಿಕರು ಗಾಯಗೊಂಡಿದ್ದಾರೆ. ವಿಮಾನವು ಮಿನ್ನಿಯಾಪೋಲಿಸ್ನಿಂದ ಟೊರೊಂಟೊಗೆ ಹಾರುತ್ತಿದ್ದಾಗ ಲ್ಯಾಂಡಿಂಗ್ ಸಮಯದಲ್ಲಿ ರನ್ವೇಯಲ್ಲಿ ಮಗುಚಿ ಬಿದ್ದಿದೆ. ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಇತರರು ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ. ವಿಮಾನದಲ್ಲಿ 80 ಮಂದಿ ಪ್ರಯಾಣಿಕರಿದ್ದರು.
ಬಾವಲಿ ರೀತಿ ವಿಮಾನದಲ್ಲಿ ನೇತಾಡುತ್ತಿದ್ದೆವು ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಉತ್ತರ ಅಮೆರಿಕಾದಲ್ಲಿ ಸಂಭವಿಸಿದ ಕನಿಷ್ಠ ನಾಲ್ಕನೇ ಪ್ರಮುಖ ವಿಮಾನ ಅಪಘಾತ ಇದಾಗಿದೆ. ಜನವರಿ 29 ರಂದು ರಾಷ್ಟ್ರದ ರಾಜಧಾನಿಯ ಬಳಿ ವಾಣಿಜ್ಯ ಜೆಟ್ಲೈನರ್ ಮತ್ತು ಸೇನಾ ಹೆಲಿಕಾಪ್ಟರ್ ಡಿಕ್ಕಿ ಹೊಡೆದು 67 ಜನರು ಸಾವನ್ನಪ್ಪಿದರು. ಜನವರಿ 31 ರಂದು ಫಿಲಡೆಲ್ಫಿಯಾದಲ್ಲಿ ವೈದ್ಯಕೀಯ ಸಾರಿಗೆ ವಿಮಾನವೊಂದು ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಆರು ಜನರು ಸಾವನ್ನಪ್ಪಿದ್ದರು.
