ಬೆಂಗಳೂರಿಗರೇ ಗಮಿನಿಸಿ! ಈ ರಸ್ತೆಗಳಲ್ಲಿ 2 ದಿನ ವಾಹನ ಸಂಚಾರ ಬಂದ್

ಬೆಂಗಳೂರು:

   ಬೆಂಗಳೂರಿನ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ಸಂಚಾರ ಪೊಲೀಸರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಏಪ್ರಿಲ್ 12 ಹಾಗೂ 13ರಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಿರುವುದಾಗಿ ತಿಳಿಸಿದ್ದಾರೆ. ವಾಹನ ಸವಾರರು ಆ ದಿನಗಳಂದು ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಸೂಚನೆ ನೀಡಿದ್ದಾರೆ. ಇನ್ನು ಯಾವ ಕಾರಣಕ್ಕೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ? ಹಾಗೂ ಯಾವ ರಸ್ತೆಗಳನ್ನು ಬಂದ್ ಮಾಡಲಾಗಿದೆ? ಎಂಬ ಮಾಹಿತಿ ಇಲ್ಲಿದೆ ನೋಡಿ. 

   ನಗರದ ಕೇಂದ್ರ ಭಾಗದಲ್ಲಿರುವ ತಿಗಳರಪೇಟೆಯಲ್ಲಿ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವದ ಆಚರಣೆ ನಡೆಯುತ್ತಿದೆ. ಈ ಕಾರಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ. ಬೆಂಗಳೂರು ಕರಗೋತ್ಸವ ಇರುವುದರಿಂದ ಎರಡು ದಿನಗಳ ಕಾಲ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

  ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಕರಗದ ಆಚರಣೆಗಳು ನಡೆಯುವುದರಿಂದ ಏಪ್ರಿಲ್ 12ರ ರಾತ್ರಿ 10 ಗಂಟೆಯಿಂದ ಏಪ್ರಿಲ್ 13ರ ಸಂಜೆ 6 ಗಂಟೆಯವರೆಗೆ ಅವೆನ್ಯೂ ರಸ್ತೆ, ಕೆಆರ್ ಮಾರ್ಕೆಟ್ ರಸ್ತೆ, ಮಾರುಕಟ್ಟೆ ವೃತ್ತ, ಕಾಟನ್ಪೇಟ್, ಕೆ.ಜಿ.ರಸ್ತೆ, ಚಿಕ್ಕಪೇಟೆ ಸೇರಿದಂತೆ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಇನ್ನು ಧರ್ಮರಾಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಡುವುದರಿಂದ ಆ ಸಮಯದಲ್ಲೂ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎನ್ನಲಾಗಿದೆ. ವಾಹನ ಸವಾರರು ಈ ದಿನಗಳಂದು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ. ಈ ರಸ್ತೆಗಳ ಬದಲಿಗೆ ಬಳಸಬಹುದಾದ ಪರ್ಯಾಯ ರಸ್ತೆ ಮಾರ್ಗಗಳ ಮಾಹಿತಿ ಇಲ್ಲಿದೆ..

ಪರ್ಯಾಯ ಮಾರ್ಗಗಳು:

* ಮಾರ್ಕೆಟ್ ವೃತ್ತದಿಂದ ಕೆ.ಜಿ.ರಸ್ತೆ, ಆನಂದ್ರಾವ್ ಸರ್ಕಲ್ ಮೂಲಕ ಮೆಜೆಸ್ಟಿಕ್ ಕಡೆಗೆ ಚಲಿಸಬಹುದು.

* ಎಎಸ್ ಚಾರ್ ಸ್ಟ್ರೀಟ್ನಿಂದ ಸಿಸಿಬಿ ಜಂಕ್ಷನ್, ಮೆಡಿಕಲ್ ಜಂಕ್ಷನ್, ಮಿನರ್ವಾ ಸರ್ಕಲ್ ಮತ್ತು ಜೆಸಿ ರಸ್ತೆ ಮೂಲಕ ಟೌನ್ಹಾಲ್ ಕಡೆಗೆ ಚಲಿಸಬಹುದು. * ಶಾಂತಲಾ ಜಂಕ್ಷನ್ನಿಂದ ಖೋಡೆ ಜಂಕ್ಷನ್, ಹುಣಸೆಮರ ಜಂಕ್ಷನ್, ಟ್ಯಾಂಕ್ಬಂಡ್ ರಸ್ತೆ ಮೂಲಕ ಮೈಸೂರು ರಸ್ತೆ ಕಡೆಗೆ ತೆರಳಬಹುದು.

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವದ ಆಚರಣೆಗಳು ಕಳೆದ ಶುಕ್ರವಾರದಿಂದಲೇ ಧ್ವಜಾರೋಹಣದ ಮೂಲಕ ಶುರುವಾಗಿದೆ. ತಿಗಳರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಧ್ವಜಾರೋಹಣ ಹಾಗೂ ರಥೋತ್ಸವ ನೆರವೇರಿದ್ದು, ಏಪ್ರಿಲ್ 12ರ ಶನಿವಾರ ರಾತ್ರಿ ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ಮಹಾರಥೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿಯೂ ಎ.ಜ್ಞಾನೇಂದ್ರ ಅವರೇ ಕರಗ ಹೊರಲಿದ್ದು, ಇದರೊಂದಿಗೆ ಅವರು 15 ಬಾರಿ ಕರಗ ಹೊತ್ತಿರುವ ದಾಖಲೆ ನಿರ್ಮಿಸಿದ್ದಾರೆ. ಈ ಕರಗ ನೋಡಲು ಲಕ್ಷಾಂತರ ಮಂದಿ ಸೇರುವುದರಿಂದ ಕರಗ ಉತ್ಸವವನ್ನು ಈ ಬಾರಿ ಮತ್ತಷ್ಟು ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದೆ. ಈಗಾಗಲೇ ಧರ್ಮರಾಯಸ್ವಾಮಿ ದೇವಾಲಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕರಗ ವೀಕ್ಷಣೆಗೆ ಬರುವ ಭಕ್ತಾದಿಗಳಿಗೆ ನಿಲ್ಲುವುದಕ್ಕೆ ಚಾವಣಿ ವ್ಯವಸ್ಥೆ ಮಾಡಲಾಗಿದೆ.