ಕಾನ್ಪುರ:
ಸಾಮಾಜಿಕ ಜಾಲತಾಣದಲ್ಲಿ ಅಪಘಾತದ ದೃಶ್ಯಾವಳಿಗಳ ವಿಡಿಯೊಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಭೀಕರ ಅಪಘಾತದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವೈರಲ್(Viral Video) ಆಗಿದೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ಸಂಭವಿಸಿದೆ. ವೇಗವಾಗಿ ಬಂದ ಎಸ್‍ಯುವಿ ಹೆದ್ದಾರಿಯಲ್ಲಿ ವಿಭಜಕಕ್ಕೆ ಡಿಕ್ಕಿ ಹೊಡೆದು ಆಟಿಕೆ ಕಾರಿನಂತೆ ರಸ್ತೆಯಲ್ಲಿ ಗಿರಗಿರನೆ ತಿರುಗಿದೆ.
ವೇಗವಾಗಿ ಬಂದ ಮಹೀಂದ್ರಾ ಸ್ಕಾರ್ಪಿಯೊ ಎಸ್‍ಯುವಿ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿರುವ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಕಾನ್ಪುರ್ ದೇಹತ್‌ನ ಅಕ್ಬರ್‌ಪುರ ಪೊಲೀಸ್ ಠಾಣೆ ಪ್ರದೇಶದ ಅಡಿಯಲ್ಲಿ ಬರುವ ಬಾರಾ ಟೋಲ್ ಪ್ಲಾಜಾವನ್ನು ದಾಟಿದ ಸ್ವಲ್ಪ ಸಮಯದ ನಂತರ ಈ ಘಟನೆ ನಡೆದಿದೆ. ಈ ಭೀಕರ ಅಪಘಾತವು ಹೆದ್ದಾರಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಅಪಘಾತ ಎಷ್ಟು ತೀವ್ರವಾಗಿತ್ತೆಂದರೆ, ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರ ರಸ್ತೆಯಲ್ಲೇ ಐದರಿಂದ ಆರು ಬಾರಿ ತಿರುಗಿ ನಂತರ ನಿಂತಿತು. ಅದೃಷ್ಟವಶಾತ್, ಸ್ಕಾರ್ಪಿಯೋ ಹಿಂದೆ ಬೇರೆ ಯಾವುದೇ ವಾಹನ ವೇಗವಾಗಿ ಬರುತ್ತಿರಲಿಲ್ಲ. ಸಿಸಿಕ್ಯಾಮರಾದಲ್ಲಿ ದ್ವಿಚಕ್ರವಾಹನವೊಂದು ಎಡಬದಿ ಬರುವುದು ಕಾಣುತ್ತದೆ. ಅದೃಷ್ಟವಶಾತ್ ಆ ವೇಳೆಗೆ ಅವರು ಮುಂದೆ ಸಾಗಿರುವುದರಿಂದ ಅಪಾಯ ತಪ್ಪಿದೆ.
ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ. ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ, ಹಾನಿಗೊಳಗಾದ ವಾಹನವನ್ನು ತೆಗೆದುಹಾಕಿ, ಸಂಚಾರವನ್ನು ಸುಗಮವಾಗಿ ಪುನಃಸ್ಥಾಪಿಸಲಾಗಿದೆ ಎಂದು ದೃಢಪಡಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೊಗೆ ಪ್ರತಿಕ್ರಿಯಿಸಿದ ಪೊಲೀಸರು, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪಘಾತಕ್ಕೀಡಾದ ವಾಹನವನ್ನು ತಕ್ಷಣವೇ ತೆಗೆದುಹಾಕಲಾಗಿದೆ ಮತ್ತು ಸಂಚಾರ ಸಾಮಾನ್ಯವಾಗಿದೆ ಎಂದು ಹೇಳಿದರು.
