ಮಂಗಳೂರು:
ನೈರುತ್ಯ ರೈಲ್ವೆ ವಲಯವು ಹಾಸನ ಜಂಕ್ಷನ್ ರೈಲು ನಿಲ್ದಾಣದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಮಂಗಳೂರು–ಬೆಂಗಳೂರು ಮಧ್ಯೆ ಇದೇ 14ರಿಂದ 22ರ ವರೆಗೆ ಕೆಲ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.ಸ್ಥಗಿತಗೊಳ್ಳಲಿರುವ ರೈಲುಗಳು: ಬೆಂಗಳೂರು–ಕಣ್ಣೂರು (16511), ಬೆಂಗಳೂರು–ಕಾರವಾರ ಪಂಚಗಂಗಾ ಎಕ್ಸಪ್ರೆಸ್ (16595) ಇದೇ 16ರಿಂದ 20ರ ವರೆಗೆ ರದ್ದುಪಡಿಸಲಾಗಿದೆ.
ಕಣ್ಣೂರು–ಬೆಂಗಳೂರು (16512), ಕಾರವಾರ–ಬೆಂಗಳೂರು ಪಂಚಗಂಗಾ ಎಕ್ಸಪ್ರೆಸ್ (16596) ರೈಲುಗಳು ಇದೇ 17ರಿಂದ 21 ರ ವರೆಗೆ ರದ್ದಾಗಲಿವೆ.ಯಶವಂತಪುರ–ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ ಎಕ್ಸಪ್ರೆಸ್ (16575) ವಾರದಲ್ಲಿ ಮೂರು ದಿನ ಸಂಚರಿಸುವ ರೈಲು ಇದೇ 14, 17, 19 ಮತ್ತು 21ರಂದು ಸಂಚಾರ ನಡೆಸುವುದಿಲ್ಲ. ಮಂಗಳೂರು ಜಂಕ್ಷನ್ –ಯಶವಂತಪುರ ಗೊಮ್ಮಟೇಶ್ವರ ಎಕ್ಸಪ್ರೆಸ್ (16576) ಡಿ.15, 18, 20, 22ರಂದು ಸಂಚರಿಸುವುದಿಲ್ಲ.
ಯಶವಂತಪುರ–ಕಾರವಾರ ಎಕ್ಸಪ್ರೆಸ್ (16515) ವಾರಕ್ಕೆ ಮೂರು ದಿನ ಸಂಚರಿಸುವ ಈ ರೈಲು ಡಿ.13, 15, 18, 20, 22ರಂದು ಹಾಗೂ ಕಾರವಾರ–ಯಶವಂತಪುರ ಎಕ್ಸಪ್ರೆಸ್ (16516) ಡಿ.14, 16, 19, 21, 23ರಂದು ಇರುವುದಿಲ್ಲ.
ಯಶವಂತಪುರ–ಮಂಗಳೂರು ಜಂಕ್ಷನ್ ಎಕ್ಸಪ್ರೆಸ್ (16539/16540 ವಾರಕ್ಕೆ ಒಂದು ದಿನ ಸಂಚರಿಸುವ ರೈಲು) ಡಿ.16 ಮತ್ತು 17ರಂದು ಸಂಚಾರ ನಡೆಸುವುದಿಲ್ಲ.ಬೆಂಗಳೂರು–ಮುರುಡೇಶ್ವರ–ಬೆಂಗಳೂರು (16585/16586) ರೈಲು ಮಾತ್ರ ಬದಲಿ ಮಾರ್ಗದಲ್ಲಿ ಅಂದರೆ ಯಶವಂತಪುರ ಬೈಪಾಸ್, ನೆಲಮಂಗಲ, ಶ್ರವಣಬೆಳಗೊಳ, ಹಾಸನ ಮೂಲಕ ಸಂಚರಿಸಲಿದೆ.
ಬೆಂಗಳೂರು ಸಿಟಿ, ಮಂಡ್ಯ ಹಾಗೂ ಮೈಸೂರು ನಿಲ್ದಾಣಗಳಿಗೆ ಡಿ.14ರಿಂದ 16ರ ವರೆಗೆ ತೆರಳುವುದಿಲ್ಲ. ಡಿ. 17 ಮತ್ತು 22ರ ವರೆಗೆ ಈ ರೈಲು ಯಶವಂತಪುರ ಬೈಪಾಸ್, ಹಾಸನ ಮೂಲಕ ಸಂಚರಿಸಲಿದ್ದು, ಮೈಸೂರನ್ನು ಸಂಪರ್ಕಿಸುವುದಿಲ್ಲ.
ಹಾಸನ ಜಂಕ್ಷನ್ ರೈಲ್ವೆ ಯಾರ್ಡ್ನಲ್ಲಿ ಮರುವಿನ್ಯಾಸ, ಸಿಗ್ನಲ್ ಮತ್ತು ಇಂಟರ್ ಲಾಕಿಂಗ್ ವ್ಯವಸ್ಥೆ ಸುಧಾರಣೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರಿಂದ ಏಕಕಾಲದಲ್ಲಿ ಅರಸೀಕೆರೆ, ನೆಲಮಂಗಲ, ಮೈಸೂರು, ಹಾಸನ ಈ ನಾಲ್ಕೂ ಕಡೆಯ ರೈಲುಗಳ ಆಗಮನ ಮತ್ತು ನಿರ್ಗಮನ ಸಾಧ್ಯವಾಗಲಿದೆ ಎಂದು ನೈರುತ್ಯ ರೈಲ್ವೆ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ