ಬೆಂಗಳೂರು
ನಗರದ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪೊಲೀಸರಿಗೆ ಶರಣಾಗಿದ್ದ ಆರೋಪಿ ಗಂಗರಾಜುವನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಒಂದೊಂದೇ ಭಯಾನಕ ಅಂಶಗಳು ಹೊರಬರುತ್ತಿವೆ. ಇದರೊಂದಿಗೆ, ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಕೂಡ ದೊರೆತಂತಾಗಿದೆ. ಅಸಲಿಗೆ ಗಂಗರಾಜು ಕೊಲೆ ಮಾಡಿದ್ದು ಎರಡನೇ ಪತ್ನಿಯನ್ನಲ್ಲ, ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯನ್ನು ಹಾಗೂ ಆಕೆಯ ಮಗಳನ್ನು ಎಂಬುದು ಗೊತ್ತಾಗಿದೆ.
ಮೊದಲ ಪತ್ನಿ ಹಾಗೂ ಮೊದಲ ಪತಿಯಿಂದ ವಿಚ್ಛೇದನ ಪಡೆಯದೆ ಭಾಗ್ಯಮ್ಮ ಮತ್ತು ಗಂಗರಾಜು ಲಿವಿಂಗ್ ಇನ್ ರಿಲೇಷನಲ್ಲಿದ್ದರು. ಭಾಗ್ಯಮ್ಮಗೆ ಮಗಳಿದ್ದ ವಿಚಾರ ತಿಳಿದಿದ್ದರೂ ಕೂಡಾ ಒಟ್ಟಿಗೆ ಜೀವನ ಮಾಡಲು ಆರೋಪಿ ಒಪ್ಪಿದ್ದ. ಆದರೆ, ಇತ್ತೀಚೆಗೆ ಭಾಗ್ಯಮ್ಮ ಸೇರಿ ಹೆಣ್ಣುಮಕ್ಕಳ ಮೇಲೂ ಸಾಕಷ್ಟು ಅನುಮಾನ ಪಡುತ್ತಿದ್ದ. ಪತ್ನಿ ಜೊತೆ ಮಗಳಿಗೂ ಅಕ್ರಮ ಸಂಬಂಧವಿದೆ ಎಂದು ಮಲತಂದೆಯೇ ಅನುಮಾನ ಪಟ್ಟಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
ಇತ್ತೀಚೆಗೆ ಮನೆಗೆ ಬಂದಿದ್ದ ಭಾಗ್ಯಮ್ಮ ಅಕ್ಕನ ಮಗಳು ಹೇಮಾವತಿ ನಡತೆ ಮೇಲೂ ಆರೋಪಿಗೆ ಅನುಮಾನ ಶುರುವಾಗಿತ್ತು. ಇದೇ ಕಾರಣಕ್ಕೆ ಗಲಾಟೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದ. ಗಲಾಟೆ ಬಳಿಕ ಹೆಸರಘಟ್ಟಕ್ಕೆ ಹೋಗಿದ್ದ ಆರೋಪಿ ರೈತರ ಸಂತೆಯಲ್ಲಿ ಮಚ್ಚು ಖರೀದಿ ಮಾಡಿದ್ದ. ರೈತರು ಬಳಸುವ ಹರಿತವಾದ ಮಚ್ಚನ್ನು 500 ರೂಪಾಯಿ ಕೊಟ್ಟು ನೇರವಾಗಿ ಮನೆಗೆ ತಂದಿದ್ದ. ಬಳಿಕ ಮೂವರನ್ನು ಕೊಲೆ ಮಾಡಿ ಶರಣಾಗತಿಗೆ ಪ್ಲಾನ್ ಕೂಡಾ ಮಾಡಿಕೊಂಡಿದ್ದ.
ಆರೋಪಿಯು ಆರು ವರ್ಷಗಳಿಂದ ಮೃತಳ ಜೊತೆಗೆ ಇದ್ದಿದ್ದು ವಿಚಾರಣೆ ವೇಳೆ ತಿಳಿದು ಬಂದಿದೆ. ಆದರೆ, ಆಕೆಯ ಮೇಲಿನ ಅನುಮಾನದಿಂದಲೇ ಆತ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.