ಬೆಂಗಳೂರು:
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗಿನಲ್ಲಿ ವರುಣದೇವ ಅಬ್ಬರಿಸಿದ್ದು, ಧಾರಾಕಾರ ಮಳೆಯಾಗಿದೆ.
ಕೊಡಗು ಜಿಲ್ಲೆಯಲ್ಲಿ ನಿನ್ನೆಯಿಂದಲೇ ಧಾರಾಕಾರ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಜನರು ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ನಿನ್ನೆ ಸಂಜೆಯಿಂದಲೇ ಮಡಿಕೇರಿ, ಭಾಗಮಂಡಲ ನಾಪೋಕ್ಲು ಸೇರಿದಂತೆ ಹಲವೆಡೆ ವರುಣಾರ್ಭಟ ಜೋರಾಗಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪವಿತ್ರ ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ.
ತ್ರಿವೇಣಿ ಸಂಗಮವು ಕಾವೇರಿ, ಕನ್ನಿಕೆ & ಸುಜೋತಿ ನದಿಗಳು ಸೇರುವ ಸ್ಥಳ. ಸಂಗಮದಲ್ಲಿ ನೀರು ಭರ್ತಿಯಾಗಿದೆ. ಹೀಗಾಗಿ ಮಳೆ ಹೆಚ್ಚಾದರೆ ಭಾಗಮಂಡಲ – ನಾಪೋಕ್ಲು ನಡುವಿನ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಮುಂದುವರಿದಿದೆ. ಮಂಗಳೂರಿನ ಪಡೀಲು ರೈಲ್ವೇ ಬ್ರಿಡ್ಜ್ ಅಂಡರ್ ಪಾಸ್‌ನಲ್ಲಿ ಮಳೆ ನೀರು ತುಂಬಿದ್ದು, ಅರ್ಧ ರಸ್ತೆಯವರೆಗೆ ಹೋಗಿ ರಸ್ತೆ ಮಧ್ಯೆಯಲ್ಲೇ ಕಾರು ನಿಂತಿದೆ. ಅಂಡರ್ ಪಾಸ್‌ನಲ್ಲಿ ನೀರು ತುಂಬಿರೋದ್ರಿಂದ ವಾಹನ ಸಂಚಾರ ಸ್ಥಗಿತವಾಗಿದೆ.
ಕೊಡಗು ಜಿಲ್ಲೆಯಲ್ಲಿ ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಅಮ್ಮತ್ತಿ ಗ್ರಾಮದಲ್ಲಿ ಮರ ಉರುಳಿ ಬಿದ್ದು ಕಾರು ಜಖಂಗೊಂಡಿದೆ. ಮರ ಬಿದ್ದಿದ್ದರಿಂದ ವಿದ್ಯುತ್ ಕಂಬ ಕೂಡ ತುಂಡಾಗಿ ಬಿದ್ದು ಕಾರು ಜಖಂಗೊಂಡಿದೆ. ಕೊಡಗು ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿ, ಪೊನ್ನಂಪೇಟೆ, ವಿರಾಜಪೇಟೆ, ಕುಶಾಲನಗರ ತಾಲೂಕಿನ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳಿಗೆ ಆಯಾ ಕ್ಷೇತ್ರಗಳ ಶಿಕ್ಷಣಾಧಿಕಾರಿಗಳು ರಜೆ ಘೋಷಿಸಿದ್ದಾರೆ.
ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ, ಮೂರು ಮನೆಗಳಿಗೆ ಹಾನಿ: ಬಿರುಗಾಳಿ ಸಹಿತ ಭಾರೀ ಮಳೆಗೆ ಮಡಿಕೇರಿಯ ತ್ಯಾಗರಾಜ ಕಾಲೊನಿ ಯಲ್ಲಿ ಅಲ್ಪ ಪ್ರಮಾಣದಲ್ಲಿ ಕುಸಿದು ಮೂರು ಮನೆಗಳಿಗೆ ಹಾನಿಯಾದ ಘಟನೆ ಕಳೆದ ರಾತ್ರಿ ನಡೆದಿದೆ.
