ವಾಷಿಂಗ್ಟನ್
ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಸಕ್ರಿಯವಾಗಿ ಪರೀಕ್ಷಿಸುತ್ತಿರುವ ದೇಶಗಳಲ್ಲಿ ಒಂದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹಾಗೇ, ಅಮೆರಿಕ ಕೂಡ ತನ್ನದೇ ಆದ ಪರಮಾಣು ಪರೀಕ್ಷೆಗಳನ್ನು ಪುನರಾರಂಭಿಸುವ ಅಗತ್ಯವನ್ನು ಹೊಂದಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದ ಖಾಸಗಿ ನ್ಯೂಸ್ ಚಾನೆಲ್ಗೆ ನೀಡಿದ 60 ನಿಮಿಷಗಳ ಸಂದರ್ಶನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳು ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿವೆ, ಆದರೆ ಅಮೆರಿಕ ಮಾತ್ರ ಇನ್ನೂ ಪರಮಾಣು ಪರೀಕ್ಷೆಗಳನ್ನು ಮಾಡದ ಏಕೈಕ ರಾಷ್ಟ್ರವಾಗಿದೆ ಎಂದು ಹೇಳಿದ್ದಾರೆ.
ಪೋಸಿಡಾನ್ ನೀರೊಳಗಿನ ಡ್ರೋನ್ ಸೇರಿದಂತೆ ಮುಂದುವರಿದ ಪರಮಾಣು ಸಾಮರ್ಥ್ಯದ ವ್ಯವಸ್ಥೆಗಳ ಇತ್ತೀಚಿನ ಪರೀಕ್ಷೆಗಳ ನಂತರ ರಷ್ಯಾ 30 ವರ್ಷಗಳಿಗೂ ಹೆಚ್ಚು ಕಾಲ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ಫೋಟಿಸುವ ನಿರ್ಧಾರದ ಬಗ್ಗೆ ಕೇಳಿದಾಗ ಡೊನಾಲ್ಡ್ ಟ್ರಂಪ್ ಈ ಹೇಳಿಕೆಗಳನ್ನು ನೀಡಿದ್ದಾರೆ.
ಪರಮಾಣು ಸಿಡಿತಲೆಗಳನ್ನು ಹೊಂದಿರುವ ದೇಶಗಳು ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿವೆ. ಆದರೆ, ಅವರು ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಚೀನಾ ಮತ್ತು ಪಾಕಿಸ್ತಾನ ಈಗಾಗಲೇ ರಹಸ್ಯ ಸ್ಫೋಟಗಳನ್ನು ನಡೆಸುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
“ಭಾರತ ಪಾಕಿಸ್ತಾನದೊಂದಿಗೆ ಪರಮಾಣು ಯುದ್ಧವನ್ನು ನಡೆಸಲು ನಿರ್ಧರಿಸಿತ್ತು. ಆ ಎರಡೂ ದೇಶಗಳ ಮಧ್ಯೆ ನಾನು ಪ್ರವೇಶಿಸದಿದ್ದರೆ ಲಕ್ಷಾಂತರ ಜನರು ಸಾಯುತ್ತಿದ್ದರು. ಅದು ಕೆಟ್ಟ ಯುದ್ಧವಾಗುವುದರಲ್ಲಿತ್ತು. ಎರಡೂ ಕಡೆ ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ನಾನು ಆಗ ಅವರಿಬ್ಬರಿಗೂ ನೀವು ಯುದ್ಧ ನಿಲ್ಲಿಸದಿದ್ದರೆ ಅಮೆರಿಕ ನಿಮ್ಮ ಜೊತೆ ಯಾವುದೇ ವ್ಯವಹಾರ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದೆ. ಅದರಿಂದ ಯುದ್ಧ ನಿಂತಿತು” ಎಂದು ಟ್ರಂಪ್ ಮತ್ತೆ ಪುನರುಚ್ಛರಿಸಿದ್ದಾರೆ.
ಟ್ರಂಪ್ ಹೇಳಿದಂತೆ ಒಂದುವೇಳೆ ಚೀನಾ ಮತ್ತು ಪಾಕಿಸ್ತಾನ ನಿಜವಾಗಿಯೂ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿದ್ದರೆ, ಅದು ಭಾರತಕ್ಕೆ ದೊಡ್ಡ ಆತಂಕ ತಂದಿಡುವುದು ಸುಳ್ಳಲ್ಲ.








