ಅಮೇರಿಕ :
ತಮ್ಮ ವಿವಿಧ ನೀತಿಗಳ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಭಾರತ ಸೇರಿ ವಿವಿಧ ದೇಶಗಳಿಗೆ ಶಾಕ್ ನೀಡುತ್ತಿದ್ದಾರೆ. 2ನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಅಮೆರಿಕಕ್ಕೆ ಹೆಚ್ಚು ಆದ್ಯತೆ ಎಂಬುದು ಟ್ರಂಪ್ ಮೂಲಮಂತ್ರವಾಗಿದೆ.ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಟ್ರಂಪ್ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇತರ ದೇಶಗಳ ಮೇಲೆ ಭಾರೀ ತೆರಿಗೆ ಹೊರೆಯನ್ನು ಹಾಕಿದ್ದಾರೆ. ಈಗ ಭಾರತ ಸೇರಿದಂತೆ ವಿವಿಧ ದೇಶಗಳ ಉದ್ಯೋಗಿಗಳ ನೇಮಕದ ಕುರಿತು ಟ್ರಂಪ್ ಸೂಚನೆಯೊಂದನ್ನು ನೀಡಿದ್ದಾರೆ.
ಗೂಗಲ್, ಮೈಕ್ರೋಸಾಫ್ಟ್, ಅಡೋಬ್, ಇನ್‌ಟೆಲ್ ಮುಂತಾದ ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಿಗೆ ಟ್ರಂಪ್, “ಭಾರತೀಯರು ಸೇರಿ ವಿವಿಧ ದೇಶದವರನ್ನು ನೇಮಿಸಬೇಡಿ. ಸ್ಥಳೀಯರಿಗೆ ಆದ್ಯತೆಗಳನ್ನು ನೀಡಿ” ಎಂಬ ಸೂಚನೆ ನೀಡಿದ್ದಾರೆ.
ಟ್ರಂಪ್ ಇತ್ತೀಚೆಗೆ ನಡೆದ ಒಂದು ಎಐ ತಂತ್ರಜ್ಞಾನ ಶೃಂಗಸಭೆ ವೇಳೆ, ಅಮೆರಿಕದ ಪ್ರಮುಖ ಟೆಕ್ ಕಂಪನಿಗಳ ಪ್ರಬಂಧಕರೊಂದಿಗೆ ಸಭೆ ನಡೆಸಿ ಗೂಗಲ್ ಮತ್ತು ಮೈಕ್ರೋಸಾಫ್ಟ್ ನಂತಹ ದೊಡ್ಡ ಟೆಕ್ ಕಂಪನಿಗಳಿಗೆ ಸಂದೇಶವನ್ನು ರವಾನಿಸಿದ್ದಾರೆ, ಭಾರತ ಸೇರಿದಂತೆ ವಿದೇಶಗಳಿಂದ ಉದ್ಯೋಗಿಗಳ ನೇಮಕಾತಿ ನಿಲ್ಲಿಸಿ ಎಂದು ನಿರ್ದೇಶಿಸಿದ್ದಾರೆ.
ಅಮೆರಿಕದ ಕಂಪನಿಗಳು ಈಗ ಚೀನಾದಲ್ಲಿ ಕಾರ್ಖಾನೆಗಳನ್ನು ನಿರ್ಮಿಸುವ ಅಥವಾ ಭಾರತೀಯ ಟೆಕ್ ಕಾರ್ಮಿಕರಿಗೆ ಉದ್ಯೋಗ ನೀಡುವ ಬದಲು ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವತ್ತ ಹೆಚ್ಚು ಗಮನಹರಿಸಬೇಕು. ನಿಮ್ಮ ಜಾಗತಿಕವಾದಿ ಮನಸ್ಥಿತಿ ಅಮೆರಿಕನ್ನರನ್ನು ಹಿಂದೆ ತಳ್ಳಿದೆ. ಅಮೆರಿಕ ನೀಡಿರುವ ಸ್ವಾತಂತ್ರ್ಯ ಬಳಸಿಕೊಂಡು ಸಾಕಷ್ಟು ಲಾಭ ಮಾಡಿದ್ದೀರಿ. ಆದರೆ, ಬಂದ ಲಾಭವನ್ನು ಹೊರ ದೇಶಗಳಲ್ಲಿ ಹೂಡಿಕೆ ಮಾಡಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2017ರಿಂದಲೇ ಟ್ರಂಪ್ ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ H-1B ವೀಸಾಗಳ ನಿಯಂತ್ರಣಗಳನ್ನು ಜಾರಿಗೊಳಿಸಿದ್ದರು. ಆಗ ಭಾರತೀಯ ಇಂಜಿನಿಯರ್‌ಗಳ ಪರವಾನಗಿ ಪ್ರಮಾಣ ಕಡಿಮೆಯಾಗಿತ್ತು. ಇದೀಗ ಅವರು ಮತ್ತೆ ಈ ಹಾದಿಯಲ್ಲೇ ಸಾಗುತ್ತಿದ್ದಾರೆ. ದೇಶ ಮೊದಲು ಎಂಬ ಘೋಷಣೆಯನ್ನು ಜಾರಿಗೊಳಿಸಲು ಮುಂದಾಗಿದ್ದಾರೆ.
ಇದು ರಾಜಕೀಯ ಹೇಳಿಕೆ ಎನ್ನುವುದರ ಹೊರತಾಗಿಯೂ, ಈ ಮಾತುಗಳಿಂದ ಭಾರತೀಯ ಬೌದ್ಧಿಕ ಶಕ್ತಿಗೆ ಹಿನ್ನಡೆ ತರಬಹುದಾಗಿದ್ದು, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕನ್ ಕಂಪನಿಗಳ ತೀರ್ಮಾನದ ಮೇಲೆ ಒತ್ತಡ ಉಂಟುಮಾಡಬಹುದಾಗಿದ್ದು ಎರಡೂ ದೇಶಗಳ ನಡುವಿನ ಟೆಕ್–ವ್ಯಾಪಾರ ಸಹಕಾರದ ಬಿರುಕು ತರುವ ಸಾಧ್ಯತೆ ಇದೆ.
ಭಾರತದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಅಮೆರಿಕನ್ ಕಂಪನಿಗಳಲ್ಲಿ ನೇರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೂಗಲ್, ಮೈಕ್ರೋಸಾಫ್ಟ್ ಮತ್ತು ಇತರ ಸಂಸ್ಥೆಗಳು ಭಾರತದ ಕೌಶಲ್ಯ, ಕಡಿಮೆ ವೆಚ್ಚ ಹಾಗೂ ತಾಂತ್ರಿಕ ಶಕ್ತಿ ಮೇಲೆ ಅವಲಂಬಿತವಾಗಿವೆ. ಈ ಹೇಳಿಕೆಗಳಿಂದ ನೇಮಕಾತಿ ಸ್ಥಗಿತಗೊಂಡರೆ, ಭಾರತದ ಔದ್ಯೋಗಿಕ ಕ್ಷೇತ್ರದ ಮೇಲೆ ಪರಿಣಾಮ ಉಂಟಾಗಲಿದೆ.
ಟೆಕ್ ಕಂಪನಿಗಳು ಭಾರತ ಪರವಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದು ತುಸು ಸಮಾಧಾನಕರ ಸಂಗತಿಯಾಗಿದೆ. ಮೈಕ್ರೋಸಾಫ್ಟ್ ಸಿಒಇ ಸತ್ಯ ನಾಡೆಲ್ಲಾ ಪ್ರತಿಕ್ರಿಯಿಸಿ, “ತಂತ್ರಜ್ಞಾನಕ್ಕೆ ಗಡಿ ಇಲ್ಲ. ನಾವೆಲ್ಲ ಮಾನವ ಸಂಪತ್ತಿನ ಹೂಡಿಕೆಯಲ್ಲಿ ವಿಶ್ವದ ಯಾವುದೇ ಮೂಲೆಯಿಂದಲೂ ಸಹಭಾಗಿತ್ವಕ್ಕೆ ಸಿದ್ಧವಿರಬೇಕು” ಎಂದು ಹೇಳಿದ್ದಾರೆ.
ಟ್ರಂಪ್ ಈ ಹೇಳಿಕೆ ರಾಜಕೀಯ ಉದ್ದೇಶದಿಂದ ಕೂಡಿದೆ ಎನ್ನುವುದು ಸ್ಪಷ್ಟ. ಆದರೆ ಈ ಮಾತುಗಳು ಮುಂದಿನ H-1B ಯೋಜನೆ, ಭಾರತೀಯ ಉದ್ಯೋಗಿಗಳ ಭವಿಷ್ಯ ಹಾಗೂ ಅಮೆರಿಕ–ಭಾರತದ ಬಾಂಧವ್ಯಕ್ಕೆ ಪರಿಣಾಮ ಬೀರಬಹುದಾದ ಎಂಬ ಪ್ರಶ್ನೆ ಹುಟ್ಟುಹಾಕಿವೆ.
