ಅಮೇರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಟ್ರಂಪ್‌

ನವದೆಹಲಿ: 

    ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ 47ನೇ ಅಧ್ಯಕ್ಷರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ರಾಜಕೀಯ ವೃತ್ತಿ ಜೀವನದಲ್ಲಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದಂತಾಯಿತು. ಭಾರತೀಯ ಕಾಲಮಾನ 10:30ಕ್ಕೆ ಅಮೆರಿಕದ ಸಂಸತ್ತಿನ ಕ್ಯಾಪಿಟಲ್ ಹಿಲ್‌ನಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಾನ್ ರಾಬರ್ಟ್ಸ್, ಟ್ರಂಪ್‌ಗೆ ಪ್ರಮಾಣ ವಚನ ಬೋಧಿಸಿದರು.

    ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಟ್ರಂಪ್ ಪತ್ನಿ ಮೆಲಾನಿಯಾ ಬೈಬಲ್ ಹಿಡಿದು ನಿಂತಿದ್ದರು. ಪ್ರಮಾಣ ವಚನದ ನಂತರ ಸಂಸತ್ತಿನ ಕ್ಯಾಪಿಟಲ್ ರೊಟುಂಡಾ ಸಭಾಂಗಣದಲ್ಲಿ ನೆರೆದಿದ್ದ ಎಲ್ಲರೂ ಕೆಲಕಾಲ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. 2017 ರಿಂದ 2021 ರವರೆಗೆ ಅಮೆರಿಕದ 45ನೇ ಅಧ್ಯಕ್ಷರಾಗಿ ಟ್ರಂಪ್‌ ಸೇವೆ ಸಲ್ಲಿಸಿದ್ದರು. ಇವರಿಗಿಂತಲೂ ಮೊದಲು ರಿಪಬ್ಲಿಕನ್ ನಾಯಕ ಜೆಡಿ ವ್ಯಾನ್ಸ್ ಅಮೆರಿಕದ 50ನೇ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. 

     ಪ್ರಮಾಣ ವಚನ ಸ್ವೀಕರಿಸಿದ ನಂತರ ಡೊನಾಲ್ಡ್‌ ಟ್ರಂಪ್ 30 ನಿಮಿಷಗಳ ಕಾಲ ದೇಶವನ್ನುದ್ದೇಶಿಸಿ ಮಾತನಾಡಿದರು. ತಮ್ಮ ಮೊದಲ ಭಾಷಣದಲ್ಲಿ ಅವರು, “ಅಮೆರಿಕದ ಸುವರ್ಣಯುಗ ಈಗಷ್ಟೇ ಆರಂಭವಾಗಿದೆ. ಇಂದಿನಿಂದ ನಮ್ಮ ದೇಶವು ಮತ್ತೆ ಅಭಿವೃದ್ಧಿ ಹೊಂದುತ್ತದೆ ಮತ್ತು ಪ್ರಪಂಚದಾದ್ಯಂತ ಗೌರವಿಸಲ್ಪಡುತ್ತದೆ. ನಾನು ಅಮೆರಿಕಕ್ಕೆ ಮೊದಲ ಸ್ಥಾನ ನೀಡುತ್ತೇನೆ. ನಮ್ಮ ಸಾರ್ವಭೌಮತ್ವವನ್ನು ಮರಳಿ ಪಡೆಯಲಾಗುವುದು. ನಮ್ಮ ಭದ್ರತೆಯನ್ನು ಪುನಃಸ್ಥಾಪಿಸಲಾಗುತ್ತದೆ. ನಾವು ಅಮೆರಿಕವನ್ನು ಮತ್ತೆ ಶ್ರೇಷ್ಠಗೊಳಿಸುತ್ತೇವೆ,” ಎಂದು ಹೇಳಿದ್ದಾರೆ.

    “ಅಮೆರಿಕ ಹಿಂದೆಂದಿಗಿಂತಲೂ ಶ್ರೇಷ್ಠ, ಬಲಶಾಲಿ ಮತ್ತು ಹೆಚ್ಚು ಅಸಾಮಾನ್ಯವಾಗಿರುತ್ತದೆ. ದೇಶದಲ್ಲಿ ಬದಲಾವಣೆಯ ಅಲೆ ಎದ್ದಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಅಮೆರಿಕಕ್ಕೆ ಹಿಂದೆಂದಿಗಿಂತಲೂ ಉತ್ತಮ ಅವಕಾಶವಿದೆ,” ಎಂದು ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

    ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ತಾಪಮಾನ ಮೈನಸ್ 5 ಡಿಗ್ರಿ ಸೆಲ್ಸಿಯಸ್ ಇದೆ. ಕೊರೆಯುವ ಚಳಿಯಿಂದಾಗಿ 40 ವರ್ಷಗಳ ಬಳಿಕ ಸಂಸತ್ತಿನೊಳಗೆ ಪ್ರಮಾಣ ವಚನ ಸ್ವೀಕರಿಸಲಾಯಿತು. ಕೊನೆಯ ಬಾರಿ 1985ರಲ್ಲಿ ರೊನಾಲ್ಡ್ ರೇಗನ್ ಕ್ಯಾಪಿಟಲ್ ಹಿಲ್ ಒಳಗೆ ಪ್ರಮಾಣವಚನ ಸ್ವೀಕರಿಸಿದ್ದರು. ಸಾಮಾನ್ಯವಾಗಿ ಅಧ್ಯಕ್ಷರು ತೆರೆದ ಮೈದಾನದ ನ್ಯಾಷನಲ್ ಮಾಲ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ.ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಟ್ರಂಪ್ ಅವರನ್ನು ಅಭಿನಂದಿಸಿದ್ದಾರೆ. ರಷ್ಯಾ-ಉಕ್ರೇನ್ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ವಿಷಯದ ಬಗ್ಗೆ ಮಾತುಕತೆಗೆ ಸಿದ್ಧ ಎಂದು ಅವರು ಹೇಳಿದ್ದಾರೆ

Recent Articles

spot_img

Related Stories

Share via
Copy link