ಮಹಿಳೆಯ ಜೊತೆ ಅನುಚಿತ ವರ್ತನೆ : ಕೆಲಸದಿಂದ ಟಿಟಿಇ ವಜಾ…!

ಬೆಂಗಳೂರು:

     ನಗರದ ಕೆಎಸ್​ಆರ್ ರೈಲು ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಬಳಿ ಅಸಭ್ಯವಾಗಿ ವರ್ತಿಸಿದ್ದ ರೈಲ್ವೆ ಟಿಕೆಟ್ ಪರೀಕ್ಷಕನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.ಸತತ ದೂರುಗಳು ಬಂದ ಹಿನ್ನೆಲೆಯಲ್ಲಿ ಟಿಟಿಇ ವಿ.ಸಂತೋಷ್ ಕುಮಾರ್ ಅವರನ್ನು ನೈಋತ್ಯ ರೈಲ್ವೆ ವಲಯವು ಸೇವೆಯಿಂದ ವಜಾಗೊಳಿಸಿದೆ.

    ಮಾರ್ಚ್ 14 ರಂದು ಕೃಷ್ಣರಾಜಪುರಂ ರೈಲು ನಿಲ್ದಾಣದಲ್ಲಿ ಯುವತಿಯೊಂದಿಗೆ ಸಂತೋಷ್ ಕುಮಾರ್ ಅನುಚಿತವಾಗಿ ವರ್ತಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

    ಮಾರ್ಚ್ 17 ರಂದು ಐಪಿಸಿಯ ಸೆಕ್ಷನ್ 354 ಅಡಿಯಲ್ಲಿ ಬೆಂಗಳೂರು ಕಂಟೋನ್ಮೆಂಟ್‌ನಲ್ಲಿರುವ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಮಹಿಳೆ ಸಂತೋಷ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಂತೋಷ್ ವಿರುದ್ಧ ಕ್ರಮ ಕೈಗೊಂಡಿದ್ದ ಅಧಿಕಾರಿಗಳು, ಆವರನ್ನು ಸೇವೆಯಿಂದ ಅಮಾನತುಗೊಳಿಸಿದ್ದರು. ಇದೀಗ ರೈಲ್ವೇ ಆಂತರಿಕ ವಿಭಾಗವು ಸಂತೋಷ್ ವಿರುದ್ಧ ಮೂರು ಆರೋಪಟ್ಟಿಗಳನ್ನು ಸಲ್ಲಿಸಿದ್ದು, ಆರೋಪ ಪಟ್ಟಿ ಹಿನ್ನೆಲೆಯಲ್ಲಿ ಸಂತೋಷ್ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

    ಬೆಂಗಳೂರು ಆಡಳಿತ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೇ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಅವರು ಮಾತನಾಡಿ, ಆಗಾಗ್ಗೆ ಗೈರುಹಾಜರಾಗುವುದು ಮತ್ತು ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆಗೆ ಸೇರಿದಂತೆ ಸಂತೋಷ್ ವಿರುದ್ಧ ಸಾರ್ವಜನಿಕರಿಂದ ಈ ಹಿಂದೆ ಹಲವು ದೂರುಗಳು ಕೇಳಿ ಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

    ಪ್ರಕರಣ ಸಂಬಂಧ ರೈಲ್ವೇ ಪೊಲೀಸರು ಮಾರ್ಚ್ 21 ರಂದು ಸಂತೋಷ್ ಅವರನ್ನು ಬಂಧನಕ್ಕೊಳಪಡಿಸಿ, 14ನೇ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಸಂತೋಷ್ ನನ್ನು ಸೆರೆವಾಸಕ್ಕೆ ರವಾನಿಸಿತ್ತು. ಮೂರು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸಂತೋಷ್ ನಂತರ ಜಾಮೀನು ಪಡೆದು ಹೊರಬಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Recent Articles

spot_img

Related Stories

Share via
Copy link
Powered by Social Snap