ತುಮಕೂರು :
ನಗರದ ಮೂಲಕ ಹಾದುಹೋಗಿರುವ ಬೆಂಗಳೂರು-ಪೂನಾ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕ್ಯಾತ್ಸಂದ್ರದಿಂದ ಕೋರಾವರೆಗೆ ಪ್ರತೀ ಒಂದು ಮೀಟರ್ ಅಂತರಕ್ಕೂ ಗುಂಡಿಗಳು ನಿರ್ಮಾಣವಾಗಿದ್ದು, ಬೈಪಾಸ್ ಗುಂಡಿ ಮುಚ್ಚುವಲ್ಲಿ ಆಗುತ್ತಿರುವ ಮಂದಗತಿ ವಾಹನ ಸವಾರರನ್ನು ಹೈರಾಣಾಗಿಸಿದೆ.
ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯು ಸಹ ಸುರಿಯುತ್ತಿದ್ದು ಹೆದ್ದಾರಿಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ನಿಲ್ಲುತ್ತಿರುವ ನೀರು, ರಸ್ತೆಯೋ ಗುಂಡಿಯೋ ಎಂಬುದು ರಾತ್ರಿಯ ವೇಳೆ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಗೆ ತಿಳಿಯದಂತಾಗಿದ್ದು, ಗುಂಡಿಗೆ ದಡಕ್ಕನೇ ಇಳಿಸಿ ವಾಹನ ಮುಗ್ಗರಿಸಿ ಸವಾರರ ಪ್ರಾಣಕ್ಕೂ ಸಂಚಕಾರದ ಅಪಾಯವನ್ನು ತಂದೊಡ್ಡಿದೆ.
ಕಳೆದ ಹಲವು ತಿಂಗಳಿನಿಂದ ಬಿದ್ದಿರುವ ಗುಂಡಿಯ ಬಗ್ಗೆ ನಿರ್ಲಕ್ಷ್ಯ ತಾಳಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜನರ ಆಕ್ರೋಶ ಪತ್ರಿಕೆಯಲ್ಲಿ ವರದಿಯಾದ ಮೇಲೆ ಜಿಲ್ಲಾಡಳಿತದ ಸೂಚನೆ ಮೇರೆಗೆ ಎಚ್ಚೆತ್ತುಕೊಂಡಿದ್ದು, 3 ದಿನದ ಹಿಂದಿನಿಂದ ಕ್ಯಾತ್ಸಂದ್ರ ಭಾಗದಿಂದ ಪ್ಯಾಚ್ ವರ್ಕ್ ಶುರು ಮಾಡಿದೆ. ಹೆದ್ದಾರಿಯುದ್ದಕ್ಕೂ 10-12 ಇಂಚು ಆಳಕ್ಕೆ ಬಿದ್ದಿರುವ ಗುಂಡಿಗಳಿಗೆ ಕಾಟಾಚಾರದ 2-3 ಇಂಚು ಡಾಂಬರ್ ಹಾಕಿ ತೇಪೆ ಹಾಕದೆ, ಸಮರ್ಪಕವಾಗಿ ಗುಂಡಿ ಮುಚ್ಚುವ ಕಾರ್ಯ ತ್ವರಿತವಾಗಿ ಆಗಬೇಕಿದೆ.
ತ್ವರಿತ ಗುಂಡಿಮುಚ್ಚಲು ಸೂಚನೆ:
ಪ್ರಜಾಪ್ರಗತಿ ಪತ್ರಿಕೆಯಲ್ಲಿ ಆ.13ರಂದು ಇದು ರಾಷ್ಟ್ರೀಯ ಹೆದ್ದಾರಿಯೋ? ಯಮನೆಡೆಗೆ ದಾರಿಯೋ? ಎಂಬ ಶೀರ್ಷಿಕೆಯಡಿ ಪ್ರಕಟವಾದ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ಬುಧವಾರ ಹಾಗೂ ಶನಿವಾರ ಎರಡು ಸಭೆಗಳನ್ನು ನಡೆಸಿದ್ದುಶನಿವಾರದ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ವ್ಯವಸ್ಥಾಪಕರಿಗೆ ತ್ವರಿತ ಗುಂಡಿ ಮುಚ್ಚಲು ಸೂಚಿಸಿದ್ದಾರೆ. ಈ ವೇಳೆ ಹೆದ್ದಾರಿ ಪ್ರಾಧಿಕಾರದ ಯೋಜನಾ ವ್ಯವಸ್ಥಾಪಕರು 3 ದಿನಗಳಿಂದ ಗುಂಡಿ ಮುಚ್ಚುವ ಪ್ರಕ್ರಿಯೆ ಆರಂಭಿಸಿದ್ದು ಹತ್ತು ದಿನದೊಳಗೆ ಗುಂಡಿ ಮುಚ್ಚುವುದಾಗಿ ಸಭೆಯಲ್ಲಿ ತಿಳಿಸಿದ್ದಾರೆಂದು ಡಿಸಿ ಪಾಟೀಲ್ ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ್ದಾರೆ.
ಬೃಹತ್ ಟ್ರಾಕ್‍ಗಳು ಹಾದು ಮತ್ತಷ್ಟು ಕುಸಿತ:
ಸರಾಸರಿ 100-120 ಕಿ.ಮೀ. ವೇಗದಲ್ಲಿ ಪ್ರಯಾಣಿಸಿದರೂ ಆರಾಮದಾಯಕ ಸುಗಮ ಪ್ರಯಾಣವಿರಬೇಕೆಂಬುದು ಹೆದ್ದಾರಿ ನಿರ್ಮಾಣದ ಹಿಂದಿನ ಉದ್ದೇಶ. ಆದರೆ ನೂರು ಕಿಮೀ ವೇಗದಲ್ಲಿ ತುಮಕೂರಿನಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಪ್ರಯಾಣಿಸಿದರೆ ವಾಹನ ಸವಾರ ಮುಗ್ಗರಿಸಿ ಅಪಘಾತಕ್ಕೀಡಾಗುವುದು ಗ್ಯಾರಂಟಿ ಎಂಬಂತಾಗಿದೆ. ಇನ್ನೂ ಇದೇ ಗುಂಡಿಗಳ ಮೇಲೆ 18, 12, 10 ಚಕ್ರಗಳ ಟ್ರಕ್, ಲಾರಿಗಳು ಟನ್‍ಗಟ್ಟಲೇ ಸರಕು-ಸಾಗಾಣೆ ಮಾಡುತ್ತಿದ್ದು, ಡಾಂಬರ್ ಕಿತ್ತು ಬಂದಿರುವ ಗುಂಡಿಗಳು ಇನ್ನಷ್ಟು ಆಳಕ್ಕೆ ಕುಸಿಯುವಂತಾಗಿದೆ.
ಗುಂಡಿಗಳ ನಗರಕ್ಕೆ ಸ್ವಾಗತವೆಂಬಂತಾಗಿದೆ, ತುಮಕೂರಿನ ಸ್ಥಿತಿ:
ರಾಷ್ಟ್ರೀಯ ಹೆದ್ದಾರಿ ಹಾಗೂ ತುಮಕೂರು ನಗರದಲ್ಲಿ ಬಿದ್ದಿರುವ ಗುಂಡಿಗಳ ಸ್ಥಿತಿಯನ್ನು ನೋಡಿದರೆ ಕಲ್ಪತರು ನಾಡು, ಶೈಕ್ಷಣಿಕ ನಗರಿಗೆ ಪ್ರವೇಶಿಸುತ್ತಿರುವ ಭಾವನೆಯೇ ಕಣ್ಮರೆಯಾಗಿ ಗುಂಡಿಗಳ ನಗರಕ್ಕೆ ಸ್ವಾಗತ ಎಂಬ ಸ್ಥಿತಿ ನಿರ್ಮಾಣವಾಗಿದೆ. ಪ್ರತೀ ಬಡಾವಣೆ ಸಂಪರ್ಕ ರಸ್ತೆಗಳು, ತಿರುವುಗಳು, ಮುಖ್ಯ ರಸ್ತೆಗಳು ಮಾರುದ್ದ ಗುಂಡಿಗಳಿಂದ ಕೂಡಿದ್ದು, ಕರ್ನಾಟಕದ ವಿವಿಧ ಜಿಲ್ಲೆ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನದಂತಹ ಉತ್ತರ ಭಾರತದ ರಾಜ್ಯಗಳಿಗೆ ಪ್ರವೇಶಿಸುವವರು ಗುಂಡಿಯ ಮೇಲೆ ಸಾಗಿ ಇದೆಂಥಾ ಹೆದ್ದಾರಿ ಎಂದು ಮೂಗುಮುರಿಯುವಂತಾಗಿರುವುದು ದುರಂತವೆನಿಸಿದೆ.
ತುಮಕೂರು ಜಿಲ್ಲೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ಮಹಾನಗ್ರಪಾಲಿಕೆಯವರು ಜಿಲ್ಲಾ ಕೇಂದ್ರದರಸ್ತೆ ಅವ್ಯವಸ್ಥೆ ಬಗ್ಗೆ ಗಂಭೀರ ಚಿಂತನೆ ಮಾಡಿ ತ್ವರಿತ ಪರಿಹಾರ ಕೈಗೊಳ್ಳದಿರುವುದು ನಾಗರಿಕರಲ್ಲಿ ವ್ಯಾಪಕ ಅಸಮಾಧಾನ ಮೂಡಿಸಿದೆ.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ 2 ಸಭೆಗಳನ್ನು ನಡೆಸಿದ್ದು ತ್ವರಿತವಾಗಿ ಬೈಪಾಸ್ ರಸ್ತೆ ಗುಂಡಿಮುಚ್ಚಲು ಸೂಚಿಸಿರುವೆ. ಕ್ಯಾತ್ಸಂದ್ರ ಭಾಗದಿಂದ ಗುಂಡಿಮುಚ್ಚುವ ಪ್ರಕ್ರಿಯೆ ಆರಂಭಗೊಳಿಸಿರುವುದು ಪ್ರಾಧಿಕಾರದ ಯೋಜನಾ ವ್ಯವಸ್ಥಾಪಕರು ತಿಳಿಸಿದ್ದು, ಹತ್ತು ದಿನದೊಳಗೆ ಮುಗಿಸುವುದಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಕಾಲವಿಳಂಬ ಮಾಡಬಾರದೆಂದು ಎಚ್ಚರಿಸಿರುವೆ.
-ವೈ.ಎಸ್.ಪಾಟೀಲ್ ಜಿಲ್ಲಾಧಿಕಾರಿ.
ರಾತ್ರಿ ವೇಳೆಯಲ್ಲಿ ಅತಿ ವೇಗವಾಗಿ ಆಂಬ್ಯುಲೆನ್ಸ್ ಸೇರಿದಂತೆ ಅಂತರ್‍ರಾಜ್ಯ ಟ್ರಕ್, ಕಾರು, ಬಸ್‍ಗಳು ಹೆದ್ದಾರಿಯಲ್ಲಿ ಸಂಚರಿಸುತ್ತಿರುತ್ತವೆ. ತಿಂಗಳಾನುಗಟ್ಟಲೇ ಗುಂಡಿ-ಗುದರಗಳನ್ನು ಹಾಗೆಯೇ ಬಿಟ್ಟರೆ ವಾಹನ ಸವಾರರು, ವಾಹನಗಳ ಗತಿಯೇನು? ಗುಂಡಿ ಮುಚ್ಚುವ ಕಾರ್ಯ ಕಾಟಾಚಾರಕ್ಕೆ ನಡೆಯದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿಗಾ ವಹಿಸಬೇಕು
-ನಾಗರಾಜು, ಕೋರಾ ನಿವಾಸಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ