ವೈದ್ಯರ ಸೇವೆ ಸ್ಮರಣೀಯ – ಶಾಸಕ

 ತುಮಕೂರು:

      ದೇಶ ಕಟ್ಟುವುದರಲ್ಲಿ ಹಾಗೂ ಜನಸಾಮಾನ್ಯರ ಆರೋಗ್ಯ ಕಾಪಾಡುವುದರಲ್ಲಿ ವೈದ್ಯರ ಪಾತ್ರ ಮಹತ್ತರವಾಗಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಇಂದಿಲ್ಲಿ ಹೇಳಿದರು.

      ನಗರದ ಟೌನ್‍ಹಾಲ್ ವೃತ್ತದಲ್ಲಿರುವ ಭಾರತೀಯ ವೈದ್ಯಕೀಯ ಸಂಘದ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  ವೈದ್ಯರು ದೇಶದ ಬೆನ್ನೆಲು. ಜನಸಾಮಾನ್ಯರು ಆರೋಗ್ಯವಂತರಾಗಿರಲು ವೈದ್ಯರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ವೈದ್ಯರುಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದರು.

      ಭಾರತ ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಬಹುಮುಖ್ಯವಾಗಿದೆ. ಪ್ರಸ್ತುತ ದಿನಗಳಲ್ಲಿ ಚಿಕಿತ್ಸೆ ಬಡವರ ಕೈಗೆಟದ ಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಹೋಗಲಾಡಿಸುವಂತಹ ಕೆಲಸವನ್ನು ವೈದ್ಯರುಗಳು ಮಾಡಬೇಕಾಗಿದೆ ಎಂದರು.

      ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ಜನಸಾಮಾನ್ಯರು ಅನಾರೋಗ್ಯಕ್ಕೆ ತುತ್ತಾದಾಗ ದೇವರಿಗಿಂತ ವೈದ್ಯರನ್ನು ಹೆಚ್ಚು ನಂಬುತ್ತಾರೆ. ಹಾಗಾಗಿ ವೈದ್ಯರು ನಿಸ್ವಾರ್ಥ ಮನೋಭಾವನೆಯಿಂದ ಚಿಕಿತ್ಸೆ ನೀಡಬೇಕು ಎಂದು ಅವರು ಹೇಳಿದರು.

      ಐಎಂಎ ಅಧ್ಯಕ್ಷ ಡಾ. ಪರಮೇಶ್ವರಪ್ಪ ಮಾತನಾಡಿ, ಸರ್ಕಾರಿ ವೈದ್ಯರಾಗಿ, ವೆಸ್ಟ್ ಬೆಂಗಾಲ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ 1962 ರ ಜು. 1 ರಂದು ನಿಧನರಾದ ಡಾ. ಬಿ.ಸಿ.ರಾಯ್ ನೆನಪಾರ್ಥವಾಗಿ ಭಾರತ ಸರ್ಕಾರ 1991 ಜು. 1 ರಂದು ವೈದ್ಯರ ದಿನಾಚರಣೆ ಆಚರಿಸುವಂತೆ ಆದೇಶ ನೀಡಿತು. ಅಂದಿನಿಂದ ಜು. 1 ರಂದು ವೈದ್ಯರ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.  ಡಾ. ಬಿ.ಸಿ.ರಾಯ್ ಅವರು ಪ್ರತಿಯೊಬ್ಬ ವೈದ್ಯರಿಗೆ ರೋಲ್ ಮಾಡಲ್. ಅವರ ಆದರ್ಶವನ್ನು ಪಾಲಿಸಿದರೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದು ಎಂದರು.

      ಡಾ. ಸುರೇಶ್‍ಬಾಬು ಮಾತನಾಡಿ, ವೈದ್ಯರ ದಿನಾಚರಣೆ ಅಂಗವಾಗಿ ಟಿಹೆಚ್‍ಎಸ್ ಮತ್ತು ಐಎಂಎ ವತಿಯಿಂದ ಉಚಿತವಾಗಿ ಮಧುಮೇಹ ತಪಾಸಣೆ ಮಾಡಲಾಗುತ್ತಿದೆ. ಇಂದು ಸಾಂಕೇತಿಕವಾಗಿ ವೈದ್ಯರ ದಿನಾಚರಣೆ ಆಚರಿಸಿದ್ದೇವೆ. ಮುಂದಿನ 2 ವಾರದ ನಂತರ ಬಿರ್ಲಾ ಆಡಿಟೋರಿಯಂನಲ್ಲಿ ಎಲ್ಲ ವೈದ್ಯರುಗಳ ಕುಟುಂಬದವರೆಲ್ಲಾ ಸೇರಿ ಅದ್ದೂರಿಯಾಗಿ ವೈದ್ಯರ ದಿನಾಚರಣೆ ಆಚರಿಸಲಾಗುವುದು ಎಂದು ಹೇಳಿದರು.

      ಈ 2 ವಾರದ ಅವಧಿಯಲ್ಲಿ ವೈದ್ಯರು ಮತ್ತು ಕುಟುಂಬದವರಿಗೆ ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿವೆ. ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಅಂದು ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದರು.

      ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಇನಾಯತ್ ಉಲ್ಲಾಖಾನ್, ವೈದ್ಯರುಗಳಾದ ಡಾ. ವಿಜಯಕುಮಾರ್, ಡಾ. ಮಹೇಶ್, ಡಾ. ಭೂಷಣ್, ಡಾ. ಮೋಹನ್, ಡಾ. ಗಿರೀಶ್, ರಾಜೇಂದ್ರ, ರಮೇಶ್, ಜ್ಯೋತಿಸ್ವರೂಪ್, ಕೃಷ್ಣ, ಹರೀಶ್, ಶ್ರೀಪಾದಕುಮಾರ್ ಮತ್ತಿತರರು ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ ಟಿಹೆಚ್‍ಎಸ್ ಮತ್ತು ಐಎಂಎ ವತಿಯಿಂದ ಉಚಿತವಾಗಿ ಮಧುಮೇಹ ತಪಾಸಣೆ ನಡೆಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link