ತುಮಕೂರು : ಮನೆಗಳಿಗೆ ನುಗ್ಗುತ್ತಿದೆ ಕಲುಷಿತ ಚರಂಡಿ ನೀರು

 ತುಮಕೂರು :

ಶಿರಾಗೇಟ್‍ನಿಂದ ಸತ್ಯಮಂಗಲದ ಕಡೆ ಹೋಗುವ ರಸ್ತೆಯ ಹೊಂಬಯ್ಯನಪಾಳ್ಯ ಬಳಿ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದು, ಓಡಾಟಕ್ಕೆ ಕಿರಿಕಿರಿ ಉಂಟಾಗಿದೆ.

      ಇಲಾಖೆಗಳ ನಡುವೆ ಸಮನ್ವಯದ ಕೊರತೆ, ಅಧಿಕಾರಿಗಳ ಬೇಜವಾಬ್ದಾರಿತನದಿಂದ ನಗರದ ನಾಗರಿಕರು ಒಂದಲ್ಲಾ ಒಂದು ಸಮಸ್ಯೆಯಿಂದ ನರಳುತ್ತಲೇ ಇದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಶಿರಾಗೇಟ್-ಸತ್ಯಮಂಗಲ ರಸ್ತೆಯಲ್ಲಿ ಕಳೆದ ಕೆಲವು ದಿನಗಳಿಂದ ಚರಂಡಿ ನೀರು ಹರಿದು ಮನೆಗಳಿಗೆಲ್ಲಾ ವ್ಯಾಪಿಸುತ್ತಿರುವುದು, ರಸ್ತೆಯಲ್ಲಿನ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿರುವುದು.

      ಶಿರಾಗೇಟ್ ಮೂಲಕ ಸತ್ಯಮಂಗಲದ ಕಡೆಗೆ ಹೋಗುವ ರಸ್ತೆಯಲ್ಲಿ ಹೊಂಬಯ್ಯನಪಾಳ್ಯದ ಬಳಿ ಒಂದು ರಾಯಗಾಲುವೆ ಇದೆ. ಛತ್ರದ ಸ್ವಲ್ಪ ದೂರವೇ ಇರುವ ಈ ರಾಯಗಾಲುವೆ ಚರಂಡಿ ಮೂಲಕ ಹಿಂದಿನಿಂದಲೂ ನೀರು ಹರಿದು ಅಮಾನಿಕೆರೆಯತ್ತ ಪ್ರವೇಶಿಸುತ್ತಿತ್ತು. ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಅಮಾನಿಕೆರೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ರಾಯಗಾಲುವೆ ಮೂಲಕ ನೀರು ಹರಿದು ಬರುವ ಆ ಪ್ರದೇಶ ಹಾಗೂ ಕೆರೆಯ ಸುತ್ತ ಏರಿ ನಿರ್ಮಾಣವಾಗುತ್ತಿದೆ. ಪರಿಣಾಮವಾಗಿ ನೀರು ಹರಿಯದೆ ಸ್ಥಗಿತಗೊಂಡು ರಾಯಗಾಲುವೆ -ಸೇತುವೆ ಚರಂಡಿ ಮೂಲಕ ಹರಿದು ಬರುತ್ತಿದ್ದ ನೀರು ಮತ್ತೆ ಹಿಂಭಾಗ ಹಾಗೂ ಸುತ್ತಮುತ್ತ ವ್ಯಾಪಿಸತೊಡಗಿದ್ದು, ಆ ಸುತ್ತಮುತ್ತಲ ಮನೆಗಳಿಗೂ ನೀರು ಹರಿಯತೊಡಗಿದೆ.

      ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಆ ಭಾಗದ ಜನತೆ ಚಿಂತಾಕ್ರಾಂತರಾಗಿದ್ದಾರೆ. ಇತ್ತೀಚೆಗೆ ಸುರಿದ ಮಳೆಯ ಪರಿಣಾಮವಾಗಿ ಚರಂಡಿಗಳಲ್ಲಿ ನೀರು ಹರಿದು ಸದರಿ ನೀರು ಸೇತುವೆ ಬಳಿ ಸಂಗ್ರಹಗೊಂಡಿದೆ. ಶಿರಾಗೇಟ್ ಮೂಲಕವಾಗಿ ಚರಂಡಿಯಲ್ಲಿ ಹರಿದು ಬರುತ್ತಿದ್ದ ನೀರು ಹೊಂಬಯ್ಯನಪಾಳ್ಯದ ಸೇತುವೆ ಬಳಿ ತಟಸ್ಥವಾಗಿ ನಿಂತಿದೆ. ಇದರಿಂದಾಗಿ ಚರಂಡಿ ನೀರು ರಸ್ತೆಗೆ ಹರಿಯುತ್ತಿದ್ದು, ಈ ಕಲ್ಮಶ ನೀರು ಹೊರಗೆ ಹೋಗಲು ಸಾಧ್ಯವೇ ಆಗದಂತಹ ಪರಿಸ್ಥಿತಿ ಇದೆ. ಹಿಮ್ಮುಖವಾಗಿ ನೀರು ಹರಿಯುವಂತಹ ಹಾಗೂ ಅದೇ ಚರಂಡಿ ನೀರು ಸುತ್ತಮುತ್ತಲ ಪ್ರದೇಶ ಮತ್ತು ಮನೆಗಳಿಗೆ ವ್ಯಾಪಿಸುತ್ತಿದ್ದು, ಸಂಪು, ಮನೆಯಂಗಳದಲ್ಲಿ ನೀರು ಸಂಗ್ರಹಗೊಂಡಿದೆ. ಸುಮಾರು ಮನೆಗಳವರು ಇದರಿಂದ ರೋಸಿ ಹೋಗಿದ್ದು, ಮಹಾನಗರ ಪಾಲಿಕೆ, ಸ್ಮಾರ್ಟ್‍ಸಿಟಿ ಅಧಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ.

ಅಮಾನಿಕೆರೆಗೆ ಹೊಂದಿಕೊಂಡಂತೆ ಶಿರಾಗೇಟ್ -ಸತ್ಯಮಂಗಲ ರಸ್ತೆ ಬಳಿ ಏರಿ-ಸೈಕಲ್ ಪಾಥ್ ನಿರ್ಮಾಣಕ್ಕೆ ಕಾಮಗಾರಿ ನಡೆಯುತ್ತಿದ್ದು, ರಾಯಗಾಲುವೆ ಸೇತುವೆಯ ಮೂಲಕ ಹರಿಯುತ್ತಿದ್ದ ನೀರು ಸ್ಥಗಿತಗೊಂಡು ಕಲುಷಿತ ನೀರಿನ ಹೊಂಡ ನಿರ್ಮಾಣವಾಗಿರುವುದು

      ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಕೆರೆ ಅಭಿವೃದ್ಧಿ ಪಡಿಸಲು ಏರಿ ನಿರ್ಮಾಣವಾಗುತ್ತಿರುವುದೇನೋ ಸರಿ. ಆದರೆ ಅದಕ್ಕೂ ಮುನ್ನ ಮುಂಜಾಗ್ರತೆ ಇರಬೇಕಿತ್ತು. ಈಗ ಏರಿ ನಿರ್ಮಾಣದ ಸಲುವಾಗಿ ಮಣ್ಣು ಸುರಿದಿರುವುದರಿಂದ ಹಾಗೂ ಈಗಾಗಲೇ ಅಲ್ಲಿ ಏರಿ ಹಾದಿಯ ಕಾಮಗಾರಿಯೂ ನಡೆದಿರುವುದರಿಂದ ಅಲ್ಲಿ ನೀರು ಸಂಗ್ರಹಗೊಂಡಿದೆ. ಅಂದರೆ, ರಾಯಗಾಲುವೆ ಮೂಲಕ ಹರಿದು ಬರುತ್ತಿದ್ದ ಚರಂಡಿ ನೀರು ಮುಂದೆ ಯಾವ ಕಡೆಯೂ ಹರಿದು ಹೋಗಲಾರದಂತಹ ಪರಿಸ್ಥಿತಿ ಇದೆ. ಏರಿ ಕಾಮಗಾರಿ ಮಾಡುವ ಮುನ್ನ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಚರಂಡಿ ನೀರು ಹರಿದು ಹೋಗುವ ಬಗ್ಗೆ ಯೋಚಿಸಬೇಕಿತ್ತು. ಹಿಂದೆ ಅದೇ ಚರಂಡಿ ನೀರು ಅಮಾನಿಕೆರೆ ಸೇರುತ್ತಿತ್ತು. ಏರಿಯ ದಡದಲ್ಲಿಯೇ ಈ ನೀರು ಹರಿದು ಕೆರೆಕೋಡಿ ಭಾಗಕ್ಕೆ ಬರುವಂತೆ ಮಾಡಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಇದಾವ ಮುಂಜಾಗ್ರತೆ ಇಲ್ಲದೆ ಕಾಮಗಾರಿಗಳು ನಡೆಯುತ್ತಿರುವುದರಿಂದ ಅಲ್ಲಿನ ನಿವಾಸಿಗಳು ಬವಣೆ ಪಡುವಂತಾಗಿದೆ. ಇದು ಇಂದಿಗೆ ಸೀಮಿತವಾಗಿ ಕೊನೆಗೊಳ್ಳುವುದಿಲ್ಲ. ಭವಿಷ್ಯದಲ್ಲಿ ಮತ್ತಷ್ಟು ಅನಾಹುತಗಳಿಗೆ ಕಾರಣವಾಗಲಿದೆ.

      ಈ ಭಾಗದಲ್ಲಿ ಯುಜಿಡಿ ಸಂಪರ್ಕವೂ ಆಗಿಲ್ಲ. ಚರಂಡಿ ವ್ಯವಸ್ಥೆಯೂ ಸರಿಯಾಗಿಲ್ಲ. ಇದೀಗ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಕೆರೆ ಸುತ್ತಮುತ್ತ ಕಾಮಗಾರಿಗಳು ನಡೆಯುತ್ತಿರುವುದರಿಂದ ಮತ್ತಷ್ಟು ಸಮಸ್ಯೆಗಳು ಎದುರಾಗತೊಡಗಿವೆ.
ಈ ಸಮಸ್ಯೆ ಬಗ್ಗೆ ಸ್ಮಾರ್ಟ್‍ಸಿಟಿ ಅಧಿಕಾರಿಗಳನ್ನು ಕೇಳಿದರೆ ನಗರ ಪಾಲಿಕೆಯ ಮೇಲೆ ಹಾಕುತ್ತಾರೆ. ಅಲ್ಲದೆ, ಒಳಚರಂಡಿ ಮಂಡಳಿಯವರನ್ನು ಕೇಳಿ ಎನ್ನುತ್ತಾರೆ. ನಗರ ಪಾಲಿಕೆಯವರನ್ನು ಕೇಳಿದರೆ ಸ್ಮಾರ್ಟ್‍ಸಿಟಿ ಕಾಮಗಾರಿಗಳಿಂದ ಹೀಗೆಲ್ಲಾ ಆಗಿದೆ ಎನ್ನುತ್ತಾರೆ.

     ಇನ್ನು ಒಳ ಚರಂಡಿ ಮಂಡಳಿಯವರನ್ನು ಯಾರೂ ಕೇಳುವ ಹಾಗೆಯೇ ಇಲ್ಲ. ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕಂಡುಹಿಡಿಯುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಇಲಾಖೆಗಳ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ನಾಗರಿಕರು ಬವಣೆ ಅನುಭವಿಸುವಂತಾಗಿದೆ.
ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಕೆರೆಯ ಸುತ್ತಮುತ್ತ ಏರಿ ನಿರ್ಮಾಣ ಮಾಡುವುದಕ್ಕೆ ಮತ್ತು ಅಲ್ಲಿ ಕೆಲವು ಸೈಕಲ್ ಟ್ರಾಕ್‍ನಂತಹ ಅಭಿವೃದ್ಧಿ ಕಾಮಗಾರಿಗಳಿಗೆ ಗಮನ ಹರಿಸುತ್ತಿದ್ದಾರೆ. ಸಾಮಾನ್ಯ ಜನರ ಸಮಸ್ಯೆಗಳೇನು ಎಂಬುದರ ಬಗ್ಗೆ ಅವರಲ್ಲಿ ಅರಿವಿಲ್ಲ. ಚರಂಡಿ ನೀರಿನ ಸಮಸ್ಯೆ ಬಂದಾಗ ವಾಟರ್ ಬೋರ್ಡ್‍ನವರತ್ತ ಕೈತೋರಿಸುತ್ತಾರೆ. ಹೀಗೆ ಇವರ ಮೇಲೆ ಅವರು, ಅವರ ಮೇಲೆ ಇವರು ಕೈತೋರಿಸುತ್ತಾ ಹೋದರೆ ನಮ್ಮಗಳ ಪಾಡೇನು?, ಕೊನೇಪಕ್ಷ ಕೆರೆಯ ಕೊನೆಯ ಭಾಗದಲ್ಲಿ ಪೈಪುಗಳನ್ನು ಅಳವಡಿಸಿ ಕೆರೆಕೋಡಿ ಭಾಗಕ್ಕೆ ಚರಂಡಿ ನೀರು ಹರಿದು ಹೋಗುವಂತೆ ವ್ಯವಸ್ಥೇ ಮಾಡಬಹುದಿತ್ತಲ್ಲವೆ ಎನ್ನುತ್ತಾರೆ ಶಿರಾಗೇಟ್‍ನ ನಾಗರಿಕರು.

ಮನೆಯ ಮುಂದೆ ಹಾಗೂ ಮನೆಯೊಳಗೆ ಚರಂಡಿ ನೀರು ಹರಿದಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಕಾರ್ಪೋರೇಟರ್‍ಗೆ ತೋರಿಸಿ ಅಳಲು ತೋಡಿಕೊಳ್ಳುತ್ತಿರುವುದು

      ಹೆಚ್.ಕೆ.ಎಸ್. ಕಲ್ಯಾಣ ಮಂಟಪದ ಮುಂಭಾಗದಲ್ಲಿರುವ, ಹೊಂಬಯ್ಯನಪಾಳ್ಯಕ್ಕೆ ಹೊಂದಿಕೊಂಡಿರುವ ರಾಯಗಾಲುವೆ ಮುಚ್ಚಿ ಹೋಗಿದೆ. ಅಮಾನಿಕೆರೆಯೊಳಗೆ ಸುತ್ತಲೂ ಏರಿ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ಮಾಡುವ ಮುನ್ನ ರಾಯಗಾಲುವೆ ನೀರು ಹರಿದು ಎಲ್ಲಿ ಹೋಗಬೇಕು ಎಂಬ ಬಗ್ಗೆ ಸ್ಮಾರ್ಟ್‍ಸಿಟಿಯವರು ಯೋಚಿಸಬೇಕಿತ್ತು. ನಗರ ಪಾಲಿಕೆ ಮತ್ತು ಸ್ಮಾರ್ಟ್‍ಸಿಟಿ ಅಧಿಕಾರಿಗಳು ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ರಾಯಗಾಲುವೆ ಮುಚ್ಚಿರುವುದರಿಂದ ಚರಂಡಿ ನೀರು ಮನೆಗಳಿಗೆ ನುಗ್ಗುವಂತಾಗಿದೆ. ನಗರ ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ ಸ್ಮಾರ್ಟ್‍ಸಿಟಿ ಕಾಮಗಾರಿಗಳಿಂದ ಈ ರೀತಿಯಾಗುತ್ತಿದೆ ಎನ್ನುತ್ತಾರೆ. ಸಾರ್ವಜನಿಕರ ಪ್ರಶ್ನೆಗಳಿಗೆ ನಾವು ಉತ್ತರ ಕೊಡಬೇಕಾಗಿದೆ. ಸ್ಮಾರ್ಟ್‍ಸಿಟಿ ಅಧಿಕಾರಿಗಳು ಮನಸೋ ಇಚ್ಛೆ ಕಾರ್ಯನಿರ್ವಹಿಸುತ್ತಾ ಅವರೇ ಸುಪ್ರೀಂ ಎನ್ನುವಂತೆ ವರ್ತಿಸುತ್ತಿದ್ದಾರೆ. ಚರಂಡಿ ನೀರು ಹರಿಯಲು ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡದೆ ಜನಸಾಮಾನ್ಯರಿಗೆ ಬೇಕಿರುವ ಕಾಮಗಾರಿಗಳನ್ನು ನೋಡದೆ ಕೆರೆಯ ಏರಿ ಮೇಲೆ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಿ ಪ್ರಯೋಜನವೇನು?

-ಮಂಜುನಾಥ್, ಪಾಲಿಕೆ ಸದಸ್ಯರು, 2ನೇ ವಾರ್ಡ್.


ಮೇಲ್ಭಾಗದಿಂದ ಚರಂಡಿಯಲ್ಲಿ ಹರಿದು ಬರುವ ನೀರು ಸೇತುವೆ ಬಳಿ ನಿಂತುಕೊಳ್ಳುತ್ತಿರುವ ಕಾರಣ ಸದರಿ ನೀರು ಸುತ್ತಮುತ್ತ ವ್ಯಾಪಿಸುತ್ತಿದೆ. ನಮ್ಮ ಮನೆಯ ಮುಂದೆ ಚರಂಡಿ ತುಂಬಿ ನಿಂತಿದೆ. ಮನೆಯ ಒಳಗೂ ವ್ಯಾಪಿಸಿದೆ. ಮನೆಯ ಮುಂಭಾಗ ನಿಂತಿರುವ ನೀರನ್ನು ಎತ್ತಿ ಹಾಕುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದು ನಮ್ಮೊಬ್ಬರ ಸಮಸ್ಯೆಯಲ್ಲ. ಹೊಂಬಯ್ಯನಪಾಳ್ಯದ ಅನೇಕರು ಈ ಸಮಸ್ಯೆಗೆ ತುತ್ತಾಗಿದ್ದಾರೆ. ಶಿರಾಗೇಟ್ ನಿಂದ ಸತ್ಯಮಂಗಲ ಕಡೆಗೆ ಹೋಗುವ ಅನೇಕ ಬಡಾವಣೆಗಳ ಜನ ಇದರ ಸಮಸ್ಯೆಯಿಂದ ನರಳಬೇಕಾಗಿದೆ.

-ಅಲ್ಲಾಬಕಾಶ್ ಮತ್ತು ಕುಮಾರ್, 7ನೇ ಕ್ರಾಸ್, ಹೊಂಬಯ್ಯನಪಾಳ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap