ಸಿದ್ಧಗಂಗಾ ಮಠದಲ್ಲಿ ಮಾ.1ರಿಂದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ

ತುಮಕೂರು :

     ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ನಡೆಯಲಿರುವ 57ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವು ಮಾರ್ಚ್ 1ರಿಂದ 15ರವರೆಗೆ ನಡೆಯಲಿದೆ ಎಂದು ಶ್ರೀ ಸಿದ್ಧಗಂಗಾ ವಸ್ತುಪ್ರದರ್ಶನ ಟ್ರಸ್ಟ್ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಪ್ರೊ.ಬಿ. ಗಂಗಾಧರಯ್ಯ ತಿಳಿಸಿದರು.

       ನಗರದ ಶ್ರೀ ಸಿದ್ದಗಂಗಾ ಮಠದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಆವರಣದಲ್ಲಿಂದು ಶ್ರೀ ಸಿದ್ದಗಂಗಾ ವಸ್ತುಪ್ರದರ್ಶನ ಟ್ರಸ್ಟ್ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಪ್ರೊll ಬಿ.ಗಂಗಾಧರಯ್ಯ, ಜಂಟಿ ಕಾರ್ಯದರ್ಶಿಗಳಾದ ಎಸ್. ಶಿವಕುಮಾರ್, ಕೆಂ.ಬ.ರೇಣುಕಯ್ಯ ಅವರೊಟ್ಟಿಗೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಾರ್ಚ್ 1ರಂದು ಸಂಜೆ 6.30ಕ್ಕೆ ಸಿದ್ಧಗಂಗಾ ಮಠದಲ್ಲಿ ನಡೆಯಲಿರುವ ವಸ್ತುಪ್ರದರ್ಶನದ ಉದ್ಘಾಟನಾ ಸಮಾರಂಭ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆಯ ದಿವ್ಯ ಸಾನಿಧ್ಯವನ್ನು ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ವಹಿಸಲಿದ್ದು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ವಸ್ತು ಪರದರ್ಶನದ ಉದ್ಘಾಟನೆ ನೆರವೇರಿಸಲಿದ್ದಾರೆ.

     ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ವಿ. ಕತ್ತಿ ಕೃಷಿ ಪ್ರಾತ್ಯಕ್ಷಿಕ ಮಳಿಗೆ ಉದ್ಘಾಟನೆ ನೆರವೇರಿಸಲಿದ್ದು, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಡಿ.ಸಿ. ಗೌರಿಶಂಕರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಂ. ಲತಾ ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಪಾಲಿಕೆ ಆಯುಕ್ತೆ ರೇಣುಕಾ ಉಪಸ್ಥಿತರಿರಲಿದ್ದಾರೆ ಎಂದು ಅವರು ಹೇಳಿದರು.

      15 ದಿನಗಳ ಕಾಲ ನಡೆಯುವ ಈ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವು ಹಲವಾರು ವಿಷಯಗಳ ಬಗ್ಗೆ ಅರಿವು ಮೂಡಿಸುವ ಪ್ರಯೋಗ ಶಾಲೆಯಾಗಲಿದ್ದು, ಹೊಸ ಅವಿಷ್ಕಾರಗಳ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಸಣ್ಣದಾಗಿ ಆರಂಭವಾದ ವಸ್ತುಪ್ರದರ್ಶನ ಇಂದು ನಾಡಿನ ಬಹುದೊಡ್ಡ ವಸ್ತುಪ್ರದರ್ಶನಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.

      ಗ್ರಾಮೀಣ ಪ್ರದೇಶದವರ ಶ್ರೇಯೋಭಿವೃದ್ಧಿಗಾಗಿ ತುಡಿತ ಹೊಂದಿದ್ದ ಲಿಂಗೈಕ್ಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು 1964ರಲ್ಲಿ ಸಣ್ಣ ಪ್ರಮಾಣದಲ್ಲಿ ಈ ವಸ್ತು ಪ್ರದರ್ಶನವನ್ನು ಪ್ರಾರಂಭಿಸಿದರು. ಇಂದು ಹೆಮ್ಮರವಾಗಿ ಬೆಳೆದು ನಾಡಿನ ಬೃಹತ್ ಪ್ರಸಿದ್ದ ವಸ್ತು ಪ್ರದರ್ಶನವೆಂದು ಹೆಗ್ಗಳಿಕೆ ಪಡೆದುಕೊಂಡಿದೆ. ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಕಳೆದ 56 ವರ್ಷಗಳಿಂದ ಪ್ರತಿವರ್ಷ ಈ ವಸ್ತು ಪ್ರದರ್ಶನವು ನಡೆಯುತ್ತಾ ಬಂದಿದ್ದು, 2021ರ ಈ ವರ್ಷದ ವಸ್ತು ಪ್ರದರ್ಶನವು 57ನೇ ಪ್ರದರ್ಶನವಾಗಿದೆ ಎಂದು ಹೇಳಿದರು.

      ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರದ ವಿವಿಧ ಕ್ಷೇತ್ರಗಳಲ್ಲಿ ಕೈಗಾರಿಕಾ, ಕೃಷಿ, ಆರೋಗ್ಯ, ತೋಟಗಾರಿಕೆ, ಅರಣ್ಯ, ರೇಷ್ಮೆ, ನೀರಾವರಿ, ಶಿಕ್ಷಣ, ಪಶುಪಾಲನೆ, ಮೀನುಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಉಂಟಾಗಿರುವ ವೈಜ್ಞಾನಿಕ ಬದಲಾವಣೆಗಳನ್ನು ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವ ಜನರಿಗೆ ಮನವರಿಕೆ ಮಾಡಿಕೊಡುವ ವಸ್ತು ಪ್ರದರ್ಶನ ಉದ್ದೇಶವಾಗಿದೆ. ರಾಜ್ಯ ಸರಕಾರಗಳ ಇಲಾಖೆಗಳಲ್ಲದೇ ಕೇಂದ್ರ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದ ಸಂಸ್ಥೆಗಳೂ ಸಹ ಮಳಿಗೆಗಳನ್ನು ತೆರೆದು ತಮ್ಮಲ್ಲಿರುವ ಯೋಜನೆಗಳು ಹಾಗೂ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಖಾಸಗಿ ಸಂಘ- ಸಂಸ್ಥೆಗಳವರೂ ಸಹ ವಸ್ತು ಪ್ರದರ್ಶನದಲ್ಲಿ ನಿತ್ಯ ಬಳಕೆಯ ವಸ್ತುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

      ವಸ್ತು ಪ್ರದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡುವವರಿಗೆ ಪಾರಿತೋಷಕ ಹಾಗೂ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ. ಪ್ರದರ್ಶನದ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ಪ್ರತಿನಿತ್ಯ ಸಂಜೆ ಖ್ಯಾತ ಕಲಾವಿದರುಗಳಿಂದ ಸುಗಮ ಸಂಗೀತ, ವಚನ ಗಾಯನ, ಭರತನಾಟ್ಯ, ಯಕ್ಷಗಾನ, ಮಕ್ಕಳಿಂದ ಸಾಂಸ್ಕøತಿಕ ಸಂಜೆ , ನಾಟಕ ಹಾಗೂ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

      ಈ ಬಾರಿಯ ವಸ್ತುಪ್ರದರ್ಶನದಲ್ಲಿ ಶ್ರೀ ಸಿದ್ದಲಿಂಗೇಶ್ವರ ನಾಟಕ ಮಂಡಳಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರ ಎಂಬ ಭಕ್ತಿ ಪ್ರದಾನ ಐತಿಹಾಸಿಕ ನಾಟಕ ನಡೆಯಲಿದ್ದು, ರಾಮಾಯಣ, ಶ್ರೀ ಕೃಷ್ಣ ರಾಯಭಾರ, ರೈತ ನಿನಗಾರು ಹಿತ ಎಂಬ ಸಾಮಾಜಿಕ ನಾಟಕಗಳು, ಚಿನ್ನದಗೊಂಬೆ, ಗೌಡ್ರಗದ್ಲ, ಬಸ್ ಕಂಡಕ್ಟರ್ ಮುಂತಾದ ನಾಟಕಗಳು ಪ್ರದರ್ಶನಗೊಳ್ಳಲಿವೆ. ಸಂಗೀತಸುಗಮ, ವಚನ ವೈಭವ, ಭಕ್ತಿ ಕುಸುಮಾಂಜಲಿ, ನೃತ್ಯಾವಳಿ, ಸಾಂಸ್ಕøತಿಕ-ಸಂಜೆ ಕಾರ್ಯಕ್ರಮಗಳು ನಡೆಯಲಿದ್ದು, ಅಂತರಾಷ್ಟ್ರೀಯ ಜಾನಪದ ಕಲಾವಿದ ಗೋ.ನಾ. ಸ್ವಾಮಿ ಮತ್ತು ತಂಡದವರಿಂದ ಸಂಗೀತ ನೃತ್ಯ ಸೌರಭ, ಸುಗಮ ಸಂಗೀತ ಮತ್ತು ಚಿತ್ರ ಗೀತೆಗಳು ಸೇರಿದಂತೆ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

      ತುಮಕೂರು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಶ್ರೀ ಸಿದ್ಧಗಂಗಾಮಠದ ಹಳೆಯ ವಿದ್ಯಾರ್ಥಿ ಸಂಘ, ಕೆಎಸ್ಸಾರ್ಟಿಸಿ ಸಂಸ್ಥೆ ಹಾಗೂ ಮತ್ತಿತರ ಇಲಾಖೆಗಳ ಸಹಕಾರದೊಂದಿಗೆ ಈ ವಸ್ತುಪ್ರದರ್ಶನ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ವಸ್ತುಪ್ರದರ್ಶನ ವೀಕ್ಷಣೆಗಾಗಿ ತುಮಕೂರು ನಗರದಿಂದ ಶ್ರೀ ಸಿದ್ಧಗಂಗಾ ಮಠಕ್ಕೆ ಕರ್ನಾಟಕ ಸಾರಿಗೆ ವತಿಯಿಂದ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

      ಈ ವರ್ಷದ ವಸ್ತುಪ್ರದರ್ಶನದಲ್ಲಿ ವೈದ್ಯರ ಸಲಹೆ ಮೇರೆಗೆ ಸಾನಿಟೈಜರ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ಸೆಂಟರ್‍ಗಳನ್ನು ತೆರೆಯಲಾಗಿದೆ. ವಸ್ತು ಪ್ರದರ್ಶನಕ್ಕೆ ಆಗಮಿಸುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇದಲ್ಲದೆ ಆಹಾರ ಪದಾರ್ಥದ ಅಂಗಡಿಗಳವರು ಕಟ್ಟುನಿಟ್ಟಿನ ಕ್ರಮ ವಹಿಸಬೇಕಾಗಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap