ಮತ ಎಣಿಕೆ  ಸುತ್ತುಗಳು ಮುಗಿಯುತ್ತಾ ಹೋದಂತೆ ಏರಿಳಿಕೆಯಾದ ಬಾವುಟಗಳ ಹಾರಾಟ

  ತುಮಕೂರು :

       ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶಿರಾ ವಿಧಾನ ಸಭಾ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ ಬಿಗಿ ಭದ್ರತೆಯಲ್ಲಿ ನಡೆಯಿತು. ಮತ ಎಣಿಕಾ ಕೇಂದ್ರ ಹಾಗೂ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇದಕ್ಕಾಗಿ 200ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಹಾಗೂ 2 ಕೆಎಸ್‍ಆರ್‍ಪಿ. ಪ್ಲಟೂನ್‍ಗಳನ್ನು ನಿಯೋಜಿಸಲಾಗಿತ್ತು.

      ಚುನಾವಣೆ ಫಲಿತಾಂಶ ನಿರೀಕ್ಷಿಸಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಎಣಿಕೆ ಕೇಂದ್ರದ ಬಳಿ ಗುಂಪುಗೂಡಿ ತಮ್ಮ ಪಕ್ಷದ ಬಾವುಟ ಹಿಡಿದು ಕಾಯುತ್ತಿದ್ದರು. ಬಿಜೆಪಿ ಗುಂಪಿನಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‍ಗೌಡರು ಹಾಗೂ ಹಲವು ಮುಖಂಡರು ಉತ್ಸಾಹದಿಂದ ಸೇರಿದ್ದರು. ಇನ್ನೆರಡು ಪಕ್ಷಗಳ ಗುಂಪಿನಲ್ಲಿ ಪ್ರಮುಖ ನಾಯಕರಿರಲಿಲ್ಲ. ಕನಿಷ್ಟ ಸ್ಥಳೀಯ ಮುಖಂಡರೂ ಕಾಣಲಿಲ್ಲ. ಪ್ರತಿ ಸುತ್ತಿನ ಮತ ಎಣಿಕೆ ನಂತರ ಫಲಿತಾಂಶ ಪ್ರಕಟಿಸಲಾಗುತ್ತಿತ್ತು. ಪ್ರತಿ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‍ಗೌಡ ಮುನ್ನಡೆ ಕಾಯ್ದುಕೊಂಡಿದ್ದರು. ಪ್ರತಿ ಬಾರಿ ಆ ಸುತ್ತಿನ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಜೈಕಾರ ಹಾಕಿ ಸಂಭ್ರಮಿಸುತ್ತಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಮುನ್ನಡೆ ಪಡೆಯಬಹುದು ಎಂದು ಆ ಪಕ್ಷಗಳ ಗುಂಪು ಕಾಯುತ್ತಲೇ ಹೋದವು, ಆದರೆ, ಸಂಭ್ರಮ ಆಚರಿಸುವ ಸಂದರ್ಭ ಬಾರದ ನಿರಾಶೆ ಅನುಭವಿಸುವಂತಾಯಿತು.

      ಮೂರು-ನಾಲ್ಕು ಸುತ್ತಿನ ಎಣಿಕೆ ಮುಗಿದಾಗಲೂ ಜೆಡಿಎಸ್ ಅಭ್ಯರ್ಥಿ ಮುನ್ನಡೆ ಪಡೆಯಲಿಲ್ಲ ಹಾಗೂ ಗಮನಾರ್ಹ ಮತಗಳನ್ನೂ ಪಡೆಯಲಿಲ್ಲ ಎನ್ನುವ ಬೇಸರದಲ್ಲಿ ಜೆಡಿಎಸ್ ಕಾರ್ಯಕರ್ತರು ಅಲ್ಲಿಂದ ತೆರಳಿದರು. ಮಧ್ಯಾಹ್ನದವರೆಗೂ ಕಾಯ್ದರೂ ತಮ್ಮ ಅಭ್ಯರ್ಥಿಯು ಬಿಜೆಪಿ ಅಭ್ಯರ್ಥಿ ವಿರುದ್ಧ ಹೆಚ್ಚಿನ ಮತ ಪಡೆಯಲು ಸಾಧ್ಯವಾಗದ ಕಾರಣ ನಿರಾಶಗೊಂಡ ಕಾಂಗ್ರೆಸ್ ಗುಂಪು ಕರಗತೊಡಗಿತು.
ಆದರೆ, ಬಿಜೆಪಿ ಗುಂಪಿನಲ್ಲಿ ಪ್ರತಿ ಸುತ್ತಿನ ಎಣಿಕೆಯ ಫಲಿತಾಂಶ ಪ್ರಕಟವಾದಾಗಲ್ಲೂ ಉತ್ಸಾಹ ಇಮ್ಮಡಿಯಾಗುತ್ತಾ ಹೋಯಿತು. ಆರಂಭದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಬಿಜೆಪಿ ಗುಂಪು, ಅಭ್ಯರ್ಥಿಯ ಮತಗಳಿಕೆ ಪ್ರಮಾಣ ಏರಿಕೆಯಾಗುತ್ತಾ ಹೋದಂತೆ ಕಾರ್ಯಕರ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರ ತೊಡಗಿದರು.

      ಬಿಜೆಪಿ ಅಭ್ಯರ್ಥಿ ಗೆಲುವಿನ ದಡ ಸೇರುವುದು ಖಚಿತವಾಗುತ್ತಿದ್ದಂತೆ, ರಾಜ್ಯ ಬಿಜೆಪಿ ಉಪಾಧ್ಯಕ್ಷ, ಶಿರಾ ಉಪ ಚುನಾವಣೆಯ ಬಿಜೆಪಿ ಉಸ್ತುವಾರಿ ವಿಜಯೇಂದ್ರ, ಸಂಸದ ನಾರಾಯಣಸ್ವಾಮಿ, ಅಭ್ಯರ್ಥಿ ಡಾ.ರಾಜೇಶ್ ಗೌಡ, ಮಾಜಿ ಸಚಿವ ರೇಣುಕಾಚಾರ್ಯ ಮತ್ತಿತರರು ಆಗಮಿಸಿ ಕಾರ್ಯಕರ್ತರ ಉತ್ಸಾಹ, ಸಂಭ್ರಮ ಹೆಚ್ಚಲು ಕಾರಣರಾದರು.

      ಮತ ಎಣಿಕೆ ಮುಗಿದು ಡಾ.ರಾಜೇಶ್‍ಗೌಡರ ವಿಜಯ ಘೋಷಣೆಯಾಗುತ್ತಿದ್ದಂತೆ ಎಣಿಕೆ ಕೇಂದ್ರದ ಬಳಿ ಬಿಜೆಪಿ ಬಾವುಟಗಳು ರಾರಾಜಿಸಿದವು. ಕಾರ್ಯಕರ್ತರು ಜೈಕಾರ ಹಾಕಿ, ಸಡಗರ ಆಚರಿಸಿದರು.

ಸದ್ಯ ಚುನಾವಣೆ ಸುಗ್ಗಿ ಮುಗಿಯಿತಲ್ಲ!

      ತಿಂಗಳಿನಿಂದ ಶಿರಾ ಕ್ಷೇತ್ರದ ಹಳ್ಳಿಹಳ್ಳಿಯಲ್ಲಿ ಉಪ ಚುನಾವಣೆಯ ಪ್ರಚಾರ ಜಾತ್ರೆಯ ರೂಪದಲ್ಲಿ ಜನರಲ್ಲಿ ಸಡಗರ ತಂದಿತ್ತು. ಜನ ಖುಷಿ, ಕುತೂಹಲದಿಂದ ಚುನಾವಣೆಯನ್ನು ಸಂಭ್ರಮಿಸಿದರು. ಕೃಷಿಯ ಸುಗ್ಗಿಗಿಂತಾ ಚುನಾವಣಾ ಸುಗ್ಗಿಯೇ ಹಳ್ಳಿಗಳಲ್ಲಿ ಹೆಚ್ಚಾಗಿ ಮೆರೆದಾಡಿತು. ಹಳ್ಳಿ ಜನ ತಮ್ಮ ಕೃಷಿ ಕೆಲಸಕಾರ್ಯಗಳನ್ನು ಪಕ್ಕಕ್ಕಿಟ್ಟು ಚುನಾವಣಾ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು ಎಂದು ಕಳ್ಳಂಬೆಳ್ಳ ಹೋಬಳಿಯ ಕಾಳಾಪುರದ ನರಸಿಂಹಮೂರ್ತಿ ಹೇಳಿದರು.

      ಶೇಂಗಾ ಬಿಡಿಸುವ, ರಾಗಿ ತೆನೆ ಕೊಯ್ಯುವ ಕಾರ್ಯದಲ್ಲಿ ರೈತರಿಗೆ ಬಿಡುವಿಲ್ಲದ ಕೆಲಸ, ಈಗ ಕೂಲಿ ಆಳುಗಳೇ ಸಿಗುವುದು ಕಷ್ಟ ಎನ್ನುವ ಪರಿಸ್ಥಿತಿಯಲ್ಲಿ ಚುನಾವಣೆ ಬಂದು ಕೂಲಿಗೆ ಜನ ಬರದಂತಾಗಿ ರೈತರಿಗೆ ತೊಂದರೆಯೇ ಆಯಿತು. ಅಲ್ಲದೆ, ಕೂಲಿ ದರವೂ ದುಬಾರಿಯಾಯಿತು. ಆದರೂ ಚುನಾವಣೆ ಸಂಭ್ರಮವನ್ನು ಕಳೆದುಕೊಳ್ಳಲು ಯಾರಿಗೂ ಇಷ್ಟವಿರಲಿಲ್ಲ. ಪ್ರತಿದಿನ ಊರಿಗೆ ಒಂದಲ್ಲಾ ಒಂದು ಪಕ್ಷದ, ಒಬ್ಬರಲ್ಲಾ ಒಬ್ಬರು ನಾಯಕರು ಪ್ರಚಾರಕ್ಕೆ ಬರುತ್ತಿದ್ದರು. ಅವರನ್ನು ನೋಡುವ ಕುತೂಹಲ ಗ್ರಾಮಸ್ಥರಲ್ಲಿತ್ತು ಎಂದರು.

      ಈ ಬಾರಿ ಶಿರಾದಲ್ಲಿ ಬಿಜೆಪಿ ಗೆದ್ದಿದೆ. ಆದರೆ, ಜೆಡಿಎಸ್ ಗೆಲ್ಲಬೇಕಾಗಿತ್ತು. ದಿ.ಸತ್ಯನಾರಾಯಣ ಅವರು ನಮ್ಮೂರಿಗೆ ಒಳ್ಳೆಯ ಕೆಲಸ ಮಾಡಿದ್ದರು. ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಹೊನ್ನಗೊಂಡನಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದರು. ಆ ವೇಳೆ ಅವರು ಮದಲೂರು ಕೆರೆವರೆಗೆ ಪಾದಯಾತ್ರೆ ಮಾಡಿ, ಮದಲೂರು ಕೆರೆಗೆ ಹೇಮಾವತಿ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂದು ಜೆಡಿಎಸ್‍ನ ನರಸಿಂಹಮೂರ್ತಿ ನೆನಪು ಮಾಡಿಕೊಂಡರು.

ಕಾಂಗ್ರೆಸ್ ವರ್ಚಸ್ಸು ಕುಂದಿಲ್ಲ :

      ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಗೆಲ್ಲಲು ಸಾಧ್ಯ ವಾಗಿಲ್ಲವಾದರೂ ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿಲ್ಲ. ಕಾಂಗ್ರೆಸ್‍ನ ಎಲ್ಲಾ ನಿಷ್ಠಾವಂತ ಮತದಾರರು ಪಕ್ಷಕ್ಕೆ ಮತ ನೀಡಿದ್ದಾರೆ. ಗೆಲ್ಲಲು ಅಗತ್ಯವಿದ್ದ ಹೆಚ್ಚುವರಿ ಮತದಾರರನ್ನು ಬಿಜೆಪಿಯವರು ಹಣ ಹಂಚಿ ಕೊಂಡುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಮತಗಳನ್ನು ಕಿತ್ತಿಲ್ಲ, ಜೆಡಿಎಸ್‍ನ ಮತ ಸೆಳೆದಿದ್ದಾರೆ, ಕಾಂಗ್ರೆಸ್ ಗೆಲ್ಲದಿದ್ದರೂ ಪಕ್ಷದ ವರ್ಚಸ್ಸು ಕಮ್ಮಿಯಾಗಿಲ್ಲ ಎಂದು ನಾದೂರಿನ ನಟರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಗ್ರಾ ಪಂ ಚುನಾವಣೆಯಲ್ಲಿ ಹಣ ನಿರೀಕ್ಷೆಯಾದರೆ ಕಷ್ಟ :

      ಶಿರಾ ಕ್ಷೇತ್ರದಲ್ಲಿ ಈ ಬಾರಿ ನಡೆದಂತಹ ಚುನಾವಣೆಯನ್ನು ನಾನು ಎಂದೂ ನೋಡಲಿಲ್ಲ. ಲೆಕ್ಕವಿಲ್ಲದಂತೆ ದುಡ್ಡು ಹಂಚಿಬಿಟ್ಟರು. ಎಲ್ಲಾ ಪಕ್ಷದವರೂ ಎಲ್ಲಾ ಪಕ್ಷದ ಕಾರ್ಯಕರ್ತರಿಗೂ ಹಣ ಹಂಚಿದ್ದಾರೆ. ಚುನಾವಣೆಯಲ್ಲಿ ಹೀಗೆ ಹಣ ಖರ್ಚು ಮಾಡಿದರೆ ಮುಂದೆ ಬರುವ ಗ್ರಾಮ ಪಂಚಾಯ್ತಿ ಅಭ್ಯರ್ಥಿಗಳು ಸ್ಪರ್ಧೆ ಮಾಡಲು ಹೆದರುವಂತಾಗಿದೆ. ಮತದಾರರು ಚುನಾವಣೆಯಲ್ಲಿ ಹಣ ನಿರೀಕ್ಷೆ ಮಾಡಿದರೆ ಗ್ರಾಮ ಪಂಚಾಯ್ತಿ ಅಭ್ಯರ್ಥಿಗಳು ಎಲ್ಲಿ ಹೊಂಚಿಕೊಡುತ್ತಾರೆ ಎಂದು ಕಳ್ಳಂಬೆಳ್ಳ ಹೋಬಳಿ ತಾಳಗುಂದ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಲಕ್ಷ್ಮಯ್ಯ ಆತಂಕ ವ್ಯಕ್ತಪಡಿಸಿದರು.

ಗ್ರಾ ಪಂ ಚುನಾವಣೆಯಲ್ಲೂ ಬಿಜೆಪಿ ಅಲೆ ಮುಂದುವರೆಯಲಿದೆ :

      ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಲೆ ಎದ್ದಿದೆ. ವಿಧಾನ ಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ. ಮುಂದೆ ಬರಲಿರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲೂ ಈ ಅಲೆ ಮುಂದುವರೆಯಲಿದೆ. ಕ್ಷೇತ್ರದ ಬಹುತೇಕ ಪಂಚಾಯ್ತಿಗಳಲ್ಲಿ ಬಿಜೆಪಿ ಬೆಂಬಲಿತರೇ ಗೆಲುವು ಪಡೆಯುತ್ತಾರೆ, ಆ ಮೂಲಕ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲಗೊಳ್ಳಲಿದೆ ಎಂದು ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಸೇರಿರುವ ಯಾದವ ಸಮಾಜದ ಮುಖಂಡ ಚೆಂಗಾವರ ಮಾರಣ್ಣ ಹೇಳಿದರು.

ಅಭಿವೃದ್ಧಿಗಾಗಿ ಮತ :

      ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ, ಬಿಜೆಪಿ ಗೆದ್ದರೆ ಅಭಿವೃದ್ಧಿ ಕೆಲಸಗಳಾಗುತ್ತವೆ. ಕಾಂಗ್ರೆಸ್ ಅಥವಾ ಜೆಡಿಎಸ್ ಗೆದ್ದರೆ ವಿರೋಧ ಪಕ್ಷದಲ್ಲಿರಬೇಕಾಗುತ್ತದೆ ಹಾಗೂ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ, ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸದಿಂದ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ಗೌಡಗೆರೆ ಹೊಬಳಿ ಡ್ಯಾಗೇರಹಳ್ಳಿಯ ವಕೀಲರಾದ ಎಲ್.ಪುಟ್ಟಣ್ಣ ಹೇಳಿದರು.

      ಕ್ಷೇತ್ರದ ಜನ ಹೊಸ ಮುಖ ಬಯಸಿದ್ದರು. ಹಳ್ಳಿಹಳ್ಳಿಗಳಲ್ಲಿ ಯುವಜನ ಬಿಜೆಪಿ ಪರ ಸಂಘಟಿತರಾದರು. ಅಲ್ಲದೆ, ಮುಖ್ಯಂತ್ರಿ ಯಡಿಯೂರಪ್ಪನವರು ಅಗಸರು, ಕುಂಬಾರರು ಅಂತಹ ಸಣ್ಣ ಜಾತಿಗಳನ್ನು ಗುರುತಿಸಿ ಆರ್ಥಿಕ ನೆರವು ನೀಡಿದ್ದಾರೆ. ನಮ್ಮ ಹಳ್ಳಿಕಾರ್ ಸಮಾಜಕ್ಕೂ ಮುಖ್ಯಮಂತ್ರಿಗಳು ಆರ್ಥಿಕ ನೆರವು ನೀಡಿದ್ದಾರೆ. ಅಲ್ಲದೆ ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರಚಾರ ಕೆಲಸ ಮಾಡಿದ್ದರು. ಇವೆಲ್ಲ ಕಾರಣದಿಂದ ಶಿರಾದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಯಿತು ಎಂದು ಪುಟ್ಟಣ್ಣ ಹೇಳಿದರು.

      ಕಾಂಗ್ರೆಸ್, ಜೆಡಿಎಸ್‍ನ ಭದ್ರಕೋಟೆಯಾಗಿದ್ದ, ಬಿಜೆಪಿಗೆ ನೆಲೆಯೇ ಇರದಿದ್ದ ಶಿರಾ ಕ್ಷೇತ್ರದಲ್ಲಿ ಸಂದರ್ಭದಲ್ಲಿ ಬಿಜೆಪಿಯ ನಾಯಕರು ಸಂಘಟಿತರಾಗಿ, ಯೋಜನಾ ಬದ್ಧರಾಗಿ, ಪ್ರಮಾಣಿಕವಾಗಿ ಕೆಲಸ ಮಾಡಿದ್ದರು ಗೆಲುವು ಪಡೆಯಲು ಸಾಧ್ಯವಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್‍ನ ನಾಯಕರು ಕೇವಲ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಭಾಷಣ ಮಾಡಿಹೋದರು ಹೊರತು ತಳಮಟ್ಟದ ಕಾರ್ಯಕರ್ತರನ್ನು ಚುನಾವಣೆಯಲ್ಲಿ ಸಫಲವಾಗಿ ಬಳಸಿಕೊಳ್ಳಲಿಲ್ಲ ಎಂದು ಆಯಾ ಪಕ್ಷದವರೇ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link