ತುಮಕೂರು :
ಹೆಚ್ಚಿನ ವರದಕ್ಷಿಣೆ ತರುವಂತೆ ಹೆಂಡತಿಗೆ ಕಿರುಕುಳ ಕೊಟ್ಟು ಪತ್ನಿ ಸಾವಿಗೆ ಕಾರಣನಾದ ಆರೋಪಿ ಪತಿ ಮೊಹಮ್ಮದ್ ಅಬೂಬಕ್ಕರ್‍ಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ 30,000 ರೂ. ದಂಡ ವಿಧಿಸಿ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ತೀರ್ಪು ನೀಡಿದ್ದಾರೆ.
ನಗರದ ವೀರಸಾಗರದಲ್ಲಿ ವಾಸವಿರುವ ಮೊಹಮ್ಮದ್ ಅಬೂಬಕ್ಕರ್ ಅವರಿಗೆ 2015ರ ಡಿಸೆಂಬರ್ 5ರಂದು ಫಾತಿಮ ಅವರ ಮಗಳಾದ ಯಾಸ್ಮಿನ್‍ನ್ನು ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಮದುವೆ ನಂತರ ಹೆಚ್ಚಿನ ವರದಕ್ಷಿಣೆ ತರುವಂತೆ ಪ್ರತಿದಿನ ಯಾಸ್ಮಿನ್ ಅವರಿಗೆ ಪತಿ ಮೊಹಮ್ಮದ್ ಅಬೂಬಕ್ಕರ್ ಕಿರುಕುಳ ಕೊಟ್ಟು ಅವಳ ಮೈಮೇಲೆ ಬಿಸಿ ನೀರು ಎರಚಿ ಹಾಗೂ ಗಲಾಟೆ ಮಾಡುತ್ತಿದ್ದ. ಗಂಡನ ಕಿರುಕುಳ ತಾಳಲಾರದೆ ಹೆಂಡತಿ ಯಾಸ್ಮಿನ್ 2015ರ ಡಿಸೆಂಬರ್ 4ರಂದು ವಿಷ ಕುಡಿದು ಸಾವನ್ನಪ್ಪಿದ್ದಳು.
ಈ ಸಂಬಂಧ ಮೃತಳ ತಾಯಿ ಫಾತಿಮಾ ತಿಲಕ್‍ಪಾರ್ಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ತನಿಖಾಧಿಕಾರಿಗಳಾದ ರಾಧಕೃಷ್ಣ ಮತ್ತು ಚಿದಾನಂದ ಮೂರ್ತಿ ಅವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಶಿಕ್ಷೆ ಮತ್ತು ದಂಡ ವಿಧಿಸಿದ್ದು, ದಂಡದ ಹಣವನ್ನು ಮೃತ ಯಾಸ್ಮಿನ್ ಅವರ ತಾಯಿ ಫಾತಿಮ ಅವರಿಗೆ ಕೊಡುವಂತೆ ನ್ಯಾಯಾಲಯ ಆದೇಶಿಸಿದೆ. 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕಿಯಾಗಿ ಕವಿತ ವಿ.ಎ. ವಾದ ಮಂಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ