ತುಮಕೂರು : ಪ್ರಭಾವಿಗಳಿಂದ ಖರಾಬು ಜಾಗ ಒತ್ತುವರಿ : ಧರಣಿ

ತುಮಕೂರು :

      ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿ ದಾಸೀಹಳ್ಳಿ ಪಾಳ್ಯದ ಸರ್ಕಾರಿ ಹುಲ್ಲು ಬನ್ನಿ ಖರಾಬು ಜಾಗವನ್ನು ಪ್ರಭಾವಿ ವ್ಯಕ್ತಿಗಳು ಆಕ್ರಮಿಸಿಕೊಳ್ಳುವ ಹುನ್ನಾರ ನಡೆಸುತ್ತಿರುವುದನ್ನು ವಿರೋಧಿಸಿ, ಬಡ ರೈತರು ವಾಸಿಸಲು ಆ ಜಾಗವನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ದಾಸಿಹಳ್ಳಿಪಾಳ್ಯ ಗ್ರಾಮಸ್ಥರೊಂದಿಗೆ ಸೇರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನಾ ಧರಣಿ ನಡೆಸಿದರು.

      ಈ ಸಂದರ್ಭದಲ್ಲಿ ಧರಣಿ ನಿರತರನ್ನುದ್ಧೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಮೆಳೇಕಲ್ಲಹಳ್ಳಿ ಯೋಗೀಶ್, ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿ ದಾಸೀಹಳ್ಳಿ ಗ್ರಾಮದ ಸ.ನಂ.95ರಲ್ಲಿ 8.09 ಎಕರೆ ವಿಸ್ತೀರ್ಣವುಳ್ಳ ಸರ್ಕಾರಿ ಹುಲ್ಲುಬನ್ನಿ ಖರಾಬು ಜಾಗವಿದ್ದು, ಸದರಿ ವಿಸ್ತೀರ್ಣ ಜಾಗದಲ್ಲಿ ಸುಮಾರು 25-30 ವರ್ಷಗಳಿಂದ 4 ಎಕರೆ ವಿಸ್ತೀರ್ಣ ಜಾಗದಲ್ಲಿ 2 ಎಕರೆಯಷ್ಟು ಜಾಗದಲ್ಲಿ ಎಲ್ಲಾ ಸಮುದಾಯದ ನಿವೇಶನ ರಹಿತರು ಸುಮಾರು 15 ಮನೆಗಳನ್ನು ನಿರ್ಮಿಸಿಕೊಂಡು ದಾಸೀಹಳ್ಳಿ ಪಾಳ್ಯ ಎಂಬ ಸಣ್ಣ ಗ್ರಾಮವನ್ನು ನಿರ್ಮಾಣ ಮಾಡಿಕೊಂಡು ಪಂಚಾಯಿತಿ ಬರುವಂತಹ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದಂತಹ ಸಂದರ್ಭದಲ್ಲಿ ದಾಸಿಹಳ್ಳಿ ಗ್ರಾಮದ ಪ್ರಭಾವಿ ವ್ಯಕ್ತಿ ಕಪನಯ್ಯ ಹಾಗೂ ಅವರ ಮಗ ವೆಂಕಟೇಶ್ ಎಂಬುವವರು ಸರ್ಕಾರಿ ಜಾಗದಲ್ಲಿ 1.30 ಎಕರೆ ಜಾಗವು ನಮಗೆ ಮಂಜೂರಾಗಿದೆ ಎಂದು ಅತಿಕ್ರಮ ಪ್ರವೇಶ ಮಾಡಿ ಅಲ್ಲಿನ ನಿವಾಸಿಗಳನ್ನು ಖಾಲಿ ಮಾಡಿಸಲು ಬೆದರಿಕೆ ಹಾಕುವುದು, ಹಲ್ಲೆ ಮಾಡುವುದು ಈ ರೀತಿಯ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿದರು

      ದಾಸೀಹಳ್ಳಿ ಗ್ರಾಮದ ವೆಂಕಟೇಶ್ ಎಂಬ ವ್ಯಕ್ತಿ ಆರೋಗ್ಯ ಇಲಾಖೆಯಲ್ಲಿ ಸರ್ಕಾರಿ ನೌಕರನಾಗಿದ್ದು, ಯಾವುದೇ ಸರ್ಕಾರಿ ಜಮೀನನ್ನು ಒಬ್ಬ ಸರ್ಕಾರಿ ನೌಕರನಿಗೆ ಮಂಜೂರು ಮಾಡುವಂತಹ ಆದೇಶ ಎಲ್ಲಿಯೂ ಇಲ್ಲ, ಆದರೆ ಕೆಲವು ಸರ್ಕಾರಿ ಅಧಿಕಾರಿಗಳ ಬೆಂಬಲದಿಂದ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿಕೊಂಡು ಅಲ್ಲಿನ ನಿವಾಸಿಗಳನ್ನು ಹೆದರಿಸುತ್ತಿದ್ದು, ವೆಂಕಟೇಶ್ ಬಳಿ ಇರುವ ದಾಖಲೆಗಳಿಗೆ ಯಾವುದೇ ಗ್ರಾಮ ಲೆಕ್ಕಾಧಿಕಾರಿಗಳ ವರದಿಯಾಗಲೀ, ಕಂದಾಯಾಧಿಕಾರಿ ವರದಿಯಾಗಲೀ ಗ್ರಾಮಸ್ಥರ ಮಹಜರು ಆಗಲೀ ಯಾವುದೂ ಇಲ್ಲ, ಆ ದಾಖಲೆಗಳ ಬಗ್ಗೆ ನಂಬಿಕೆ ಇಲ್ಲ, ಬೋಗಸ್ ದಾಖಲೆಗಳನ್ನು ಸೃಷ್ಠಿಮಾಡಿಕೊಂಡಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

      ಅಲ್ಲಿ ನೆಮ್ಮದಿಯಾಗಿ ವಾಸಿಸುತ್ತಿರುವ ಕುಟುಂಬಗಳ ಬಳಿ ಹೋಗಿ ರಾತ್ರೋ ರಾತ್ರಿ ಪುಂಡ ಪುಕಾರಿಗಳನ್ನು ಕರೆದುಕೊಂಡು ಹೋಗಿ ತೆಂಗಿನ ಸಸಿ ನೆಡುವುದರ ಮುಖಾಂತರ ನೆಮ್ಮದಿಯಾಗಿ ಜೀವನ ನಡೆಸುತ್ತಿರುವವರನ್ನು ಒಕ್ಕಲೆಬ್ಬಿಸುವಂತಹ ಕೆಲಸವನ್ನು ವೆಂಕಟೇಶ್ ಎಂಬ ವ್ಯಕ್ತಿ ಮಾಡುತ್ತಿದ್ದು, ಕೂಡಲೇ ವೆಂಕಟೇಶ್ ಎಂಬುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಇದಕ್ಕೆ ಸಂಬಂಧಪಟ್ಟಂತೆ ದಾಖಲಾತಿಗಳನ್ನು ಸೃಷ್ಠಿ ಮಾಡಿರುವಂತಹ ವಿಎ, ಆರ್‍ಐ ಮೇಲೆ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ಗ್ರಾಮಸ್ಥರು ಹಲವಾರು ಭಾರಿ ತಹಶೀಲ್ದಾರರರಿಗೆ, ವಿಎ, ಆರ್‍ಐಗೆ, ನಾಡಕಚೇರಿಗೆ ದೂರು ಸಲ್ಲಿಸಿದರೂ ಅವರು ಅರ್ಜಿ ಸ್ವೀಕರಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಥಳ ಮಹಜರು ಮಾಡಿ ಸಮಸ್ಯೆಯನ್ನು ಬಗೆ ಹರಿಸಿದ್ದರೆ ಗ್ರಾಮಸ್ಥರು ಯಾರೂ ಇಲ್ಲಿಯವರೆಗೆ ಬಂದು ಪ್ರತಿಭಟನೆ ಮಾಡುವ ಅಗತ್ಯವಿರುತ್ತಿರಲಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬೇಸತ್ತ ಗ್ರಾಮಸ್ಥರು ಇಂದು ಕರ್ನಾಟಕ ರಾಜ್ಯ ರೈತ ಸಂಘದ ಜೊತೆಗೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.

      ಈ ಸಮಸ್ಯೆ ಬಗೆಹರಿಸಬೇಕೆಂದು ತುರುವೇಕೆರೆ ಶಾಸಕರಿಗೆ ಮನವಿ ಮಾಡಿದಾಗ ಅಲ್ಲಿನ ಗ್ರಾಮಸ್ಥರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೀವು ಕ್ರಮ ತೆಗೆದುಕೊಳ್ಳಿ ಎಂದು ಶಾಸಕರು ಹೇಳಿದರೂ ಸಹ ಅಧಿಕಾರಿಗಳು ಒಬ್ಬ ಜನಪ್ರತಿನಿಧಿಯ ಮಾತಿಗೂ ಬೆಲೆ ಕೊಡದ ಅಧಿಕಾರಿಗಳು, ಇಂದು ಸರ್ಕಾರ ಯಾವ ಮಟ್ಟಕ್ಕೆ ಹೋಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ, ಯಾಕೆಂದರೆ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆಯೇ ಬಡವರ ದೂರುಗಳನ್ನು ಸ್ವೀಕರಿಸಲು ಮೀನಾಮೇಷ ಎಣಿಸುತ್ತಿದೆ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ದಾಸೀಹಳ್ಳಿಪಾಳ್ಯ ಗ್ರಾಮದ ಜನರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.

      ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಕೂಡಲೇ ಅಲ್ಲಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ವರದಿ ತರಿಸಿಕೊಂಡು ತನಿಖೆ ನಡೆಸಲಾಗುವುದು. ಆ ಜಾಗವನ್ನು ಯಥಾಸ್ಥಿತಿ ಕಾಪಾಡುವಂತೆ ಅಲ್ಲಿನ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

      ಪ್ರತಿಭಟನೆಯಲ್ಲಿ ಜೆಸಿಬಿ ವೆಂಕಟೇಶ್, ಕನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಅರುಣ್‍ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಂಗನಾಥ ಕೆ. ಅಪ್ಪಾಜಿಗೌಡ, ರಮೇಶ್ ಐ.ಡಿ.ಹಳ್ಳಿ, ಶಿವಣ್ಣ, ಲಿಂಗರಾಜು, ಅಡವೀಶಪ್ಪ, ರಾಜಪ್ಪ, ರಂಗರಾಜು, ಕುಮಾರಣ್ಣ, ಬೋಜಣ್ಣ, ಸಾವಿತ್ರಮ್ಮ, ನೇತ್ರಮ್ಮ, ಲಲಿತ, ಲಕ್ಷ್ಮೀದೇವಮ್ಮ, ಜಯಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link