ತುಮಕೂರು :
ಸೌಹಾರ್ದತೆಯ ಅವಶ್ಯಕತೆ ಹಿಂದಿಗಿಂತಲೂ ಇಂದೇ ಹೆಚ್ಚು ಅವಶ್ಯಕವಾಗಿದ್ದು, ನಮ್ಮ ಯೋಚನೆಗಳಲ್ಲಿ, ಕೆಲಸಗಳಲ್ಲಿ, ಧರ್ಮಗಳಲ್ಲಿ, ವಿಜ್ಞಾನಗಳಲ್ಲಿ, ವ್ಯಕ್ತಿಗಳಲ್ಲಿ ಸಮಾಜದಲ್ಲಿ ಜೀವನೋತ್ಸಾಹದ ವಾತಾವರಣ ಸೃಷ್ಟಿಗೊಳಿಸುವ ಸೌಹಾರ್ದ ಮನೋಭಾವವನ್ನು ಬೆಳೆಸಿಕೊಳ್ಳಲು ಹೋರಾಡೋಣ ಎಂದು ಇಸ್ರೋ ಮಾಜಿ ಅಧ್ಯಕ್ಷ ಪದ್ಮವಿಭೂಷಣ ಡಾ.ಕೆ.ಕಸ್ತೂರಿಂಗನ್ ಕರೆಯಿತ್ತರು.
ತುಮಕೂರು ವಿಶ್ವವಿದ್ಯಾಲಯದ 14ನೇ ವಾರ್ಷಿಕ ಘಟಿಕೋತ್ಸವ ಭಾಷಣ ಮಾಡಿದ ಅವರು ಶಿಕ್ಷಣ ಎಂಬುದು ಒಂದೇ ಹೆಜ್ಜೆಯಲ್ಲಿ ಸಂಪೂರ್ಣಗೊಳ್ಳುವ ಪ್ರಕ್ರಿಯೆಯಾಗಿರದೆ ವ್ಯಕ್ತಿತ್ವ ನಿರ್ಮಾಣಕ್ಕಗಿ ಸಮಗ್ರವಾಗಿಬೇಕಿರುವ ನಿರಂತರ ಪ್ರಯತ್ನವನ್ನು ಬಯಸುತ್ತದೆ. ಉನ್ನತ ಸಾಧನೆಯ ಹಾದಿಯು ತ್ವರಿತ ಗತಿಯಲ್ಲಿ ಬದಲಾಗುತ್ತಿರುವ ಜ್ಞಾನಶಾಖೆಗಳಿಂದ ಪ್ರೇರಿಪಿಸಲ್ಪಟ್ಟಿರುವ ಉತ್ಕøಷ್ಟ ಮಟ್ಟದ ವೃತ್ತಿ ಪರತೆಯ ಅವಶ್ಯಕತೆಯನ್ನು ಅಪಾರವಾಗಿ ಬಯಸುತ್ತದೆ. 21ನೇ ಶತಮಾನದ ಅವಿದ್ಯಾವಂತರೆಂದರೆ ಓದಲು ಬರೆಯಲು ಬಾರದವರಲ್ಲ. ಬದಲಾಗಿ ಕಲಿಯಲು ಬಾರದವರು, ಕಲಿತಿದ್ದನ್ನು ಮರೆತು ಮರುಕಲಿಕೆ ಮಾಡಲಾಗದವರು ಎಂದು ವ್ಯಾಖ್ಯಾನಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರತಿಯೊಬ್ಬ ನಾಗರಿಕರ ಜೀವನವನ್ನು ಅವರ ಅವಶ್ಯಕತೆಗನುಗುಣವಾಗಿ ರೂಪಿಸಿಕೊಳ್ಳಲು ಸಹಾಯವಾಗುವ ದಿಸೆಯಲ್ಲಿ ಅನುಷ್ಟಾನಕ್ಕೆ ತರಲಾಗಿದೆ. ಸ್ನಾತಕ ಹಂತದಲ್ಲಿ ಸಮಗ್ರ ಬಹುಶಿಸ್ತೀಯ ಶಿಕ್ಷಣವನ್ನು ಮೂಲಭೂತ ಅಂಶವಾಗಿಸಲು ಒತ್ತು ನೀಡಲಾಗಿದೆ. ಸ್ನಾತಕ ಪದವಿಯು 3 ಅಥವಾ 4 ವರ್ಷಗಳ ಅವಧಿಯದ್ದಾಗಿದ್ದು, ವಿವಿಧ ಹಂತಗಳಲ್ಲಿ ನಿರ್ಗಮಿಸುವುದಕ್ಕೂ ಆಯಾ ಹಂತಗಳಲ್ಲಿ ಸೂಕ್ತ ಪ್ರಮಾಣ ಪತ್ರ ಪಡೆಯುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಸ್ನಾತಕೋತ್ತರ ಹಂತದಲ್ಲಿ ವಿಶ್ವವಿದ್ಯಾಲಯ ವ್ಯವಸ್ಥೆಯಲ್ಲಿ ಸಂಶೋಧನೆಯ ಬಲವರ್ಧನೆಗೆ ಪ್ರತಿಷ್ಠಾನ ರಚಿಸಲು ನೀತಿ ರೂಪಿಸಲಾಗಿದೆ. ಭಾರತೀಯ ಕಲೆ, ಸಂಸ್ಕøತಿ, ಸಾಹಿತ್ಯದ ಪ್ರಚಾರಕ್ಕೆ ಒತ್ತು ನೀಡಲಾಗಿದೆ ಎಂದು ವಿವರಿಸಿದರು.
ಬಹುಭಾಷಾ ಶಿಕ್ಷಕರ ತಯಾರಿಗೆ ಸಲಹೆ: ವಿಶ್ವವಿದ್ಯಾಲಯಗಳು ರಾಷ್ಟ್ರನಿರ್ಮಾಣದ ಅಡಿಪಾಯಗಳಾಗಿದ್ದು, ಹೊಸ ಅಲೋಚನೆಗಳು, ಜ್ಞಾನವನ್ನು ಉತ್ಪಾದಿಸಲು ಮತ್ತು ಪ್ರಸಾರ ಮಾಡುವ ದೀರ್ಘಕಾಲಿಕ ಮೂಲಗಳಾಗಿ ಕಾರ್ಯನಿರ್ವಹಿಸಬೇಕು. ತುಮಕೂರು ವಿವಿಯು ಕುಲಪತಿ ವೈ.ಎಸ್.ಸಿದ್ದೇಗೌಡರ ನೇತೃತ್ವದಲ್ಲಿ ಎನ್‍ಇಪಿಯ ಉದಾರ ಶಿಕ್ಷಣ ಪರಿಕಲ್ಪನೆಯನ್ನು ಜಾರಿಗೊಳಿಸುವಲ್ಲಿ ಪ್ರಮುಖ ಹೆಜ್ಜೆ ಇರಿಸಿದ್ದು, ಸೆಂಟರ್ ಫಾರ್ ಎಕ್ಸೆಲೆನ್ಸ್ ಇನ್ ಎಜುಕೇಶನ್ ಸ್ಥಾಪಿಸಿ ಬಿ.ಇಡಿ ಮತ್ತು ಎಂಇಡಿ ಕೋಸ್‍ಗಳನ್ನುಲಭ್ಯಗೊಳಿಸಿ ಬಹುಭಾಷಾ ಶಿಕ್ಷಕರನ್ನು ಸಹ ತಯಾರು ಮಾಡಬೇಕೆಂದು ಸಲಹೆ ನೀಡಿದರು.
ಏಳುವುದರಲ್ಲಿದೆ ಅಸಾಧಾರಣ ಗೆಲುವು:
ನಮ್ಮ ಅಸಾಧಾರಣ ಗೆಲುವಿರುವುದು ನಾವು ಬೀಳುವುದರಲ್ಲಲ್ಲ. ಬಿದ್ದಾಗ ಏಳುವುದರಲ್ಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಕಸ್ತೂರಿರಂಗನ್ ಅವರು ಸೂಕ್ತ ಅವಕಾಶ ನೀಡಿ ನಿರ್ಧಿಷ್ಟ ಗುರಿ ತೋರಿಸಿ ಅದಕ್ಕೆ ಪೂರಕವಾಗಿ ಸೌಕರ್ಯಗಳನ್ನು ಒದಗಿಸಿಕೊಟ್ಟರೆ ನಮ್ಮ ಮಕ್ಕಳು ಎಂತಹ ಕಷ್ಟದ ಕೆಲಸಗಳನ್ನಾದರೂ ಸಾಧಿಸಿ ತೋರಿಸುತ್ತಾರೆ. ನೀವು ಮತ್ತೊಬ್ಬರು ಈಗಾಗಲೇ ಸವೆಸಿರುವ ದಾರಿಯನ್ನು ಹಿಡಿಯದಿದ್ದರೆ ಅನ್ವೇಷಕರಾಗುತ್ತೀರಿ. ಮತ್ತು ನಿಮ್ಮ ಹೊಸತನ ಮತ್ತು ಶ್ರೇಷ್ಟ ಮಟ್ಟದ ಅನ್ವೇಷಣೆಗಳಿಂದ ಗುರುತಿಸಲ್ಪಡುತ್ತೀರಿ.
ಆತ್ಮವಿಶ್ವಾಸ ಪ್ರದರ್ಶಿಸುವ ಯುವಜನರಿಂದ ಭಾರತವು ಎಂದು ಬಾಹ್ಯಕಾಶ ವಿಜ್ಞಾನದಲ್ಲಿ ಸರ್ವೋಚ್ಛ ಸ್ಥಾನದಲ್ಲಿದೆ ಎಂದು ನುಡಿದರು.
50 ವರ್ಷದಲ್ಲಿ 220 ಭಾಷೆಗಳು ವಿನಾಶದಂಚಿಗೆ :
ಭಾಷೆಯು ಕಲೆ ಮತ್ತು ಸಂಸ್ಕøತಿಯ ಪರಿದಿಯಲ್ಲಿ ಅಂತರ್ಗತವಾಗಿದೆ. ಸಂಸ್ಕøತಿಯ ರಕ್ಷಣೆ ಮತ್ತು ಪ್ರಸರಣದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಭಾರತೀಯ ಭಾಷೆಗಳಿಗೆ ಬೇಕಾದ ಪ್ರೋತ್ಸಾಹ ದೊರೆಯದೆ ದೇಶದ 220ಭಾಷೆಗಳು ಕಳೆದ 50 ವರ್ಷಗಳಲ್ಲಿ ನಶಿಸಿ ಹೋಗಿವೆ. ನೂತನ ಶಿಕ್ಷಣ ನೀತಿಯು ಭಾರತೀಯ, ಪ್ರಾದೇಶಿಕ, ಆಧುನಿಕ ಮತ್ತು ಪ್ರಾಚೀನ ಭಾಷೆಗಳ ಶಿಕ್ಷಣ ಮತ್ತು ಸಂಶೋಧನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಪ್ರಸ್ತಾಪಿಸುತ್ತದೆ ಎಂದು ಡಾ.ಕೆ.ಕಸ್ತೂರಿರಂಗನ್ ಪ್ರತಿಪಾದಿಸಿದರು. ಕುಲ ಸಚಿವರುಗಳು, ಸಿಂಡಿಕೇಟ್, ಆಕಾಡೆಮಿಕ್ ಕೌನ್ಸಿಲ್ ಸದಸ್ಯರುಗಳು, ನಗರದ ಗಣ್ಯರು, ಆಹ್ವಾನಿತರು ಹಾಜರಿದ್ದರು. ನಾಡಗೀತೆ, ರಾಷ್ಟ್ರಗೀತೆ ಹಾಡಲಾಯಿತು.
ಸರತಿಯಲ್ಲಿ ಧಾವಿಸಿ ಬಂದು ಪಿಎಚ್‍ಡಿ, ಪದಕ ಸ್ವೀಕಾರ!
ಈ ಬಾರಿ ಘಟಿಕೋತ್ಸವದಲ್ಲಿ ದಾಖಲೆಯ 142 ಮಂದಿಗೆ ಪಿಎಚ್‍ಡಿ, 92 ಮಂದಿ ಪ್ರಥಮರ್ಯಾಂಕ್ ಪುರಸ್ಕøತರಿಗೆ ಚಿನ್ನದ ಪದಕ ಪ್ರದಾನ ಮಾಡಿದ್ದು, ರಾಜ್ಯಪಾಲರಿಂದ ಸ್ವೀಕರಿಸುವವರು ಅಧಿಕ ಸಂಖ್ಯೆಯಲ್ಲಿರುವ ಕಾರಣಕ್ಕೆ ಬೇಗ ಬೇಗನೆ ಬಂದು ಪ್ರಮಾಣ ಪತ್ರ, ಪದಕ ಸ್ವೀಕರಿಸಲು ಸೂಚಿಸಲಾಯಿತು. ಅದರಂತೆ ಧಾವಂತದಲ್ಲೇ ಸರತಿಯಲ್ಲಿ ಓಡಿ ಬಂದು ಅಭ್ಯರ್ಥಿಗಳು ರಾಜ್ಯಪಾಲರಿಂದ ಸ್ವೀಕರಿಸಿದ್ದು ಕಂಡುಬಂತು. ಘಟಿಕೋತ್ಸವದ ಬಳಿಕ ಅಭ್ಯರ್ಥಿಗಳು ಸ್ವಣಪದಕ, ಪಿಎಚ್‍ಡಿ ಪ್ರಮಾಣಪತ್ರಗಳನ್ನು ಹಿಡಿದು ಫೋಟೋ, ಸೆಲ್ಫಿ ಕ್ಲಿಕ್ಕಿಸುತ್ತಿದ್ದ ದೃಶ್ಯ ಗಮನಸೆಳೆಯಿತು.
ಉನ್ನತ ಕಲಿಕೆಯ ಜ್ಞಾನಚಾವಡಿಯಾಗಿ ವಿವಿ ದಾಪುಗಾಲು
ತುಮಕೂರು ವಿವಿ ವಾರ್ಷಿಕ ವರದಿ ಮಂಡಿಸಿದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಜಿಲ್ಲೆಗೊಂದು ವಿಶ್ವವಿದ್ಯಾಲಯ ಎಂಬ ಆಶಯದಡಿ 2004ಲ್ಲಿ ಸ್ಥಾಪನೆಯಾದ ತುಮಕೂರು ವಿವಿ ಉನ್ನತ ಕಲಿಕೆಗೆ ಅವಕಾಶ ಕಲ್ಪಿಸುವ ಜ್ಞಾನಚಾವಡಿಯಾಗಿ ತನ್ನ ಛಾಪು ಮೂಡಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳಾದ ಸಮಾನತೆ, ಪ್ರಾದೇಶಿಕತೆ, ಸೌಲಭ್ಯ ಗುಣಮಟ್ಟ ಮತ್ತು ಹೊಣೆಗಾರಿಕೆಯ 5 ತತ್ವಗಳನ್ನು ವಿವಿಯ ಬೋಧನೆ, ಕಲಿಕೆ, ಸಂಶೋಧನೆ ಮತ್ತು ವಿಸ್ತರಣೆ ಚಟುವಟಿಕೆಗಳಲ್ಲಿ ಹಾಸಹೊಕ್ಕಾಗಿಸಲಾಗಿದೆ. ಕೋವಿಡ್ ಸಂಕಷ್ಟದಲ್ಲಿ ಸಂತ್ರಸ್ತರಿಗೆ ನೆರವಾಗಿದ್ದು, ಸಕಾಲ, ಆರ್‍ಟಿಐ, ಅಖಿಲಭಾರತ ಉನ್ನತ ಶಿಕ್ಷಣ ಸಮೀಕ್ಷೆಯಲ್ಲಿ ಉತ್ತಮ ಹೆಜ್ಜೆಯಿರಿಸಿ ನ್ಯಾಕ್ ಬಿ++ ಶ್ರೇಣಿ ಪಡೆಯುವತ್ತಾ ಸಾಗಿದೆ. ಬಿದರಕಟ್ಟೆಯಲ್ಲಿ ಹೊಸ ಕ್ಯಾಂಪಸ್ ಅಭಿವೃದ್ಧಿಯಾಗುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ ಎಂದರು.
ರಾಜ್ಯಪಾಲರಿಂದ ಪದವಿ, ಗೌ.ಡಾಕ್ಟರೇಟ್ ಪ್ರದಾನ
ಘಟಿಕೋತ್ಸವಕ್ಕೆ ಚಾಲನೆ ನೀಡಿದ ಕುಲಾಧಿಪತಿಗಳಾದ ರಾಜ್ಯಪಾಲ ವಾಜೂಬಾಯಿ ವಾಲಾ ಅವರು 142 ಮಂದಿಗೆ ಪಿಎಚ್‍ಡಿ, 3 ಮಂದಿಗೆ ಡಿ.ಲಿಟ್, 1716 ಸ್ನಾತಕೋತ್ತರ, 7992 ಮಂದಿಗೆ ಸ್ನಾತಕ ಪದವಿ ಪ್ರದಾನ ಮಾಡಿದರು. ಇದೇ ವೇಳೆ ಪದವಿ, ಸ್ನಾತಕೋತ್ತರ ಪದವೀಧರ 92 ಮಂದಿ ಪ್ರಥಮರ್ಯಾಂಕ್ ವಿಜೇತರಿಗೆ ಚಿನ್ನದ ಪದಕ ಪ್ರದಾನ ಮಾಡಿದರು. ಸಮಾಜಸೇವಕ ಐ.ಎಸ್.ಪ್ರಸಾದ್ ಅವರಿಗೆ ಅತೀ ಹೆಚ್ಚು ಚಿನ್ನದ ಪದಕ ಪಡೆದವರಲ್ಲಿ ಎಂಎ ಕನ್ನಡ ಪೂರೈಸಿರುವ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿ ಕೆ.ಎನ್.ಪಾವನಗೆ ನಾಲ್ಕು, ಬಿ.ಎ. ವಾಣಿ (ಎಂ.ಕಾಂ 3), ಕೃತಿಕ ಎಸ್.ಮೇದ (ಬಿ.ಕಾಂ 3), ವಿದ್ಯಾಶ್ರೀ ಆರ್ (ಎಂಎಸ್ಸಿ ಗಣಿತ 3), ಫರೋಜಬಾನು( ಎಂಎಸ್ಸಿ 3) ಪದಕ ಪಡೆಯುವುದರೊಂದಿಗೆ ಗಮನಸೆಳೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
