ತುಮಕೂರು :
ಎ ಫಾರ್ ಆಪಲ್, ಬಿ ಫಾರ್ ಬಾಲ್ … ಅಂತ ಚಿಕ್ಕ ಮಕ್ಕಳು ಹೇಳುವುದನ್ನು ನಾವೆಲ್ಲಾ ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಆದರೆ ತುಮಕೂರು ನಗರದ ನಾಲ್ಕು ವರ್ಷದ ಪುಟಾಣಿ ಸಾನ್ವಿ ಚೇತನ್ ಇಂಗ್ಲೀಷ್ ಅಕ್ಷರ ಮಾಲೆಯ ಅನುಕ್ರಮಣಿಕೆಯಲ್ಲಿ ಅಲೋಪತಿಕ್ ಔಷಧಗಳ ಹೆಸರನ್ನು ಕೇವಲ 47 ಸೆಕೆಂಡುಗಳಲ್ಲಿ ಸ್ಮೃತಿ ಮುಖೇನ ವಾಚಿಸಿ ಪುಟಾಣಿ ಪ್ರತಿಭೆ ಖ್ಯಾತಿಗೆ ಪಾತ್ರಳಾಗಿದ್ದಾಳೆ.
ಈ ವಿಶೇಷ ಪ್ರಯತ್ನ, ತಾಳ್ಮೆ ಮತ್ತು ಕೌಶಲಗಳನ್ನು ಏಷ್ಯಾ ಬುಕ್‍ಆಫ್ ರೆಕಾಡ್ರ್ಸ್ ಜನವರಿ 28, 2021ರಲ್ಲಿ ‘ಅತಿ ಚಿಕ್ಕವಯಸ್ಸಿನ ಸಾಧನೆ’ ಎಂಬುದಾಗಿ ಗುರುತಿಸಿ ಮಾನ್ಯ ಮಾಡುವ ಮೂಲಕ ಅಭಿನಂದಿಸಿದೆ.
ಜಾರ್ಖಂಡ್ ರಾಜ್ಯದ ಐ.ಡಬ್ಲ್ಯೂ. ಆರ್ ಫೌಂಡೇಶನ್ ಸಂಸ್ಥೆ ಸಹ ತನ್ನ ‘ಭಾರತದ ವಿಶ್ವದಾಖಲೆಗಳು’ ಪುಸ್ತಕದಲ್ಲಿ ಈ ಪುಟಾಣಿಯ ಸಾಧನೆಯನ್ನು ದಾಖಲಿಸಿ ಗೌರವಿಸಿದೆ.
ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್, ಇಂಡಿಯಾಸ್ ವಲ್ರ್ಡ್ ರೆಕಾರ್ಡ್‍ಗಳಲ್ಲೂ ತನ್ನ ಹೆಸರನ್ನು ದಾಖಲಿಸಿರುವ ಈ ಪುಟಾಣಿ ಪ್ರತಿಭೆ ತುಮಕೂರಿನ ಡಾ.ಚೇತನ್‍ಎಸ್.ಪಿ.ಎ ಮತ್ತು ಗುಣ ಬಿ.ವಿ ದಂಪತಿ ಪುತ್ರಿ.
ಇಷ್ಟೆಲ್ಲಾ ಸಾಧಿಸಲು ಸಾಧ್ಯವಾದದ್ದು ತನ್ನ ತಂದೆ-ತಾಯಿಯರ ವಿಶೇಷ ಪ್ರಯತ್ನ ಮತ್ತು ಬೆಂಬಲದಿಂದ ಎಂದು ತನ್ನ ಬಾಲ ಭಾಷೆಯಲ್ಲಿ ನುಡಿಯುವ ಸಾನ್ವಿಯನ್ನು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದಜೀ ಮತ್ತು ಸ್ವಾಮಿ ಪರಮಾನಂದಜೀಯವರು ಆಶೀರ್ವದಿಸಿ, ಶ್ಲಾಘಿಸುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
