ತುಮಕೂರು : ಉಸ್ತುವಾರಿ ಸಚಿವರ ಬದಲಾವಣೆ ಗುಲ್ಲು!!

ತುಮಕೂರು:

      ಶಿರಾ, ಆರ್.ಆರ್.ನಗರ ಹಾಗೂ ವಿಧಾನಪರಿಷತ್‍ನ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದ ಬೆನ್ನಿಗೆ ಸಿಎಂಗೆ ಸಂಪುಟ ವಿಸ್ತರಣೆ, ಪುನರ್‍ರಚನೆಯ ಕಸರತ್ತಿನ ಸಂಕಟ ಎದುರಾಗಿದೆ.

      ರಾಜ್ಯ ಸಚಿವ ಸಂಪುಟವನ್ನು ಇನ್ನೆರೆಡು ಮೂರು ದಿನಗಳಲ್ಲಿ ವಿಸ್ತರಣೆ ಮಾಡಲಾಗುವುದು. ಕೆಲವರನ್ನು ಸಂಪುಟದಿಂದಲೂ ಕೈ ಬಿಡಬೇಕಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ನೀಡಿರುವ ಹೇಳಿಕೆ ಜಿಲ್ಲೆಯಲ್ಲೂ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಂಪುಟದಲ್ಲಿ ಮುಂದುವರಿಯುತ್ತಾರೋ ಇಲ್ಲವೋ ಎಂಬುದು ಕಮಲ ಪಾಳಯದಲ್ಲೇ ತೀವ್ರ ಚರ್ಚೆಗೆ ಗ್ರಾಸವೊದಗಿಸಿದೆ.

      ಕೊರೊನಾ ಪಾಸಿಟಿವ್ ಆಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಸೇರಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ, ವಿಶ್ರಾಂತಿ ಬಯಸಿ ಶಿರಾ ಆಗ್ನೇಯ ಪದವೀಧರ ಉಪಚುನಾವಣೆ ಪ್ರಚಾರದಲ್ಲೆಲ್ಲೂ ಕಂಡುಬರಲಿಲ್ಲ. ಆದರೆ ತಮ್ಮ ನೇರ ನುಡಿಯ ಕಾರಣಕ್ಕೆ ಸಚಿವ ವಿ.ಸೋಮಣ್ಣ ಮತ್ತಿತರ ಸಹೋದ್ಯೋಗಿ ಮಂತ್ರಿಗಳ ನಡುವೆಯೂ ಕೆಲವು ಆಡಳಿತಾತ್ಮಕ ವಿಚಾರಗಳಲ್ಲಿ ಮನಸ್ತಾಪ ಮಾಡಿಕೊಂಡಿದ್ದು, ಜೊತೆಗೆ ಕೆಲವು ಹೇಳಿಕೆಗಳಿಂದ ವಿವಾದ ಮಾಡಿಕೊಂಡಿದ್ದು, ಈ ವಿಷಯವನ್ನೇ ರಾಜ್ಯ ಮಟ್ಟದಲ್ಲಿ ಕಮಲ ಪಾಳಯದಲ್ಲಿ ಕೆಲವರು ಮುಂದುಮಾಡಿ ಜೆಸಿಎಂ ಅವರನ್ನು ಮಂತ್ರಿಸ್ಥಾನದಿಂದ ಕೈ ಬಿಡಲು ಒತ್ತಡ ಹೇಳಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಸಿಎಂ ಬಿಎಸ್‍ವೈ ಸಮ್ಮತಿಸುತ್ತಾರೋ ಇಲ್ಲವೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.

      ಏಕೆಂದರೆ ಸಿಎಂ ಬಿಎಸ್‍ವೈ ಪರವಾಗಿ ನಿಂತು ವಿಪಕ್ಷ ನಾಯಕರುಗಳಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ವಾಗ್ಬಾಣಗಳಿಗೆ ಸದನದಲ್ಲಿ ಸಮರ್ಥವಾಗಿ ಏದಿರೇಟು ನೀಡುತ್ತಾ ಬಂದವರು ಸಚಿವ ಮಾಧುಸ್ವಾಮಿ ಅವರು. ಹಾಗಾಗಿ ಸಿಎಂ ಬಿಎಸ್‍ವೈ ಅವರು ಜೆಸಿಎಂರನ್ನು ಸಂಪುಟದಲ್ಲಿ ಮುಂದುವರಿಸುವ ಬಗ್ಗೆ ಮೃದುಧೋರಣೆ ಹೊಂದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಚರ್ಚೆಗಳ ಬೆನ್ನಿಗೆ ತುರುವೇಕೆರೆ ಶಾಸಕ ಮಸಾಲ ಜಯರಾಂ ಅವರು ಜೆ.ಸಿ.ಮಾಧುಸ್ವಾಮಿ ಬೆಂಬಲಕ್ಕೆ ನಿಂತಿದ್ದು, ಸರಕಾರದ ಸಮರ್ಥ ಮುನ್ನೆಡೆಗೆ ಮಾಧುಸ್ವಾಮಿ ಅವಶ್ಯಕ ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದಾರೆ. 

ಹೊಸ ಸೇರ್ಪಡೆಯಲ್ಲಿ ಕೇಳಿಬರುತ್ತಿರುವ ಬಿ.ಸಿ.ನಾಗೇಶ್ ಹೆಸರು:

      ಸದ್ಯ ರಾಜ್ಯ ಸಚಿವ ಸಂಪುಟ ಸೇರಲು ಬಿಜೆಪಿ ಸರಕಾರ ರಚನೆಗೆ ಕಾರಣರಾದ ಪರಿಷತ್ ಸದಸ್ಯರಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ಎಚ್.ವಿಶ್ವನಾಥ್, ಆರ್.ಆರ್.ನಗರದಿಂದ ಚುನಾಯಿತರಾದ ಮುನಿರತ್ನ, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ರೇಣುಕಾಚಾರ್ಯ, ತಿಪ್ಪಾರೆಡ್ಡಿ ಸೇರಿದಂತೆ ಹಲವರು ತುದಿಗಾಲಲ್ಲೇ ನಿಂತು, ಸಿಎಂ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಲು ಮುಂದಾಗಿದ್ದು, ಹೊಸದಾಗಿ ಸಂಪುಟ ಸೇರುವವರ ಸಾಲಿಗೆ ತಿಪಟೂರಿನ ಬಿಜೆಪಿ ಶಾಸಕ ಬಿ.ಸಿ.ನಾಗೇಶ್ ಹೆಸರು ಕೇಳಿಬರುತ್ತಿದೆ.

      ಪಕ್ಷ ನಿಷ್ಟ ಬಿಜೆಪಿ ಶಾಸಕ ಬಿ.ಸಿ.ನಾಗೇಶ್ ಅವರನ್ನು ಜಿಲ್ಲೆ ಹಾಗೂ ಬ್ರಾಹ್ಮಣ ಕೋಟಾದಡಿ ಪರಿಗಣಿಸಲಾಗುತ್ತದೆ ಎಂಬ ಚರ್ಚೆಗಳು ಸಾಗಿದ್ದು , ಪಕ್ಷಕ್ಕೆ ಸಲ್ಲಿಸಿದ್ದ ಸೇವೆ ಪರಿಗಣಿಸಿ ಸಹಜವಾಗಿ ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದ ಶಾಸಕ ನಾಗೇಶ್ ಅವರು ತಮಗೆ ನೀಡಲಾದ ತೆಂಗು ನಾರಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನವನ್ನು ಈವರೆಗೂ ವಹಿಸಿಕೊಳ್ಳದೇ ಶಾಸಕರಾಗಿಯೇ ಮುಂದುವರಿದಿರುವುದು ಸಂಪುಟ ಸೇರ್ಪಡೆ ವದಂತಿಗಳಿಗೆ ಇಂಬು ನೀಡಿದೆ.

     ನಾನು ಸದ್ಯ ಶಾಸಕನಾಗಿ, ಪಕ್ಷ ನಿಷ್ಟನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಂಪುಟ ಸೇರ್ಪಡೆ, ವಿಸ್ತರಣೆ ಬಗ್ಗೆ ಏನು ಹೇಳಲಾರೆ. ತೆಂಗು ನಾರಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಈವರೆಗೆ ವಹಿಸಿಕೊಂಡಿಲ್ಲ.

-ಬಿ.ಸಿ.ನಾಗೇಶ್, ತಿಪಟೂರು ಬಿಜೆಪಿ ಶಾಸಕ

      ಸರಕಾರವನ್ನು ಸಮರ್ಥವಾಗಿ ವಿಧಾನಸಭೆ, ವಿಧಾನಪರಿಷತ್‍ನಲ್ಲಿ ಪ್ರತಿನಿಧಿಸುತ್ತಿರುವ ಪ್ರಮುಖ ಸಚಿವರೆಂದರೆ ಜೆ.ಸಿ.ಮಾಧುಸ್ವಾಮಿ. ಅವರನ್ನು ಸಂಪುಟದಿಂದ ಕೈ ಬಿಡಲು ನನ್ನದಂತು ತೀವ್ರ ವಿರೋಧವಿದೆ. ಅವರನ್ನು ಕೈ ಬಿಟ್ಟರೆ ಸರಕಾರ, ಪಕ್ಷಕ್ಕೆ ತೀವ್ರ ಕಷ್ಟವಾಗುತ್ತದೆ ರಾಜಕೀಯ ದುಃಸ್ಥಿತಿ ಎದುರಿಸಬೇಕಾಗುತ್ತದೆ.

-ಮಸಾಲೆ ಜಯರಾಂ, ತುರುವೇಕೆರೆ ಬಿಜೆಪಿ ಶಾಸಕ.

ಲಿಂಗಾಯಿತ ಕೋಟಾದಡಿ ಕೇಂದ್ರ ಸಚಿವ ಸ್ಥಾನಕ್ಕೆ ಜಿಎಸ್‍ಬಿ ಹೆಸರು ಪ್ರಸ್ತಾಪ :

      ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ಲಿಂಗಾಯಿತ ಸಮುದಾಯಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನವಿಲ್ಲದಾಗಿದ್ದು, ಲಿಂಗಾಯಿತರಿಗೆ 1 ಸ್ಥಾನ ಮೀಸಲಿರಿಸಬೇಕು. ಈ ಸ್ಥಾನಕ್ಕೆ ಐದನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ಜಿ.ಎಸ್.ಬಸವರಾಜು ಹೆಸರು ಕೇಳಿಬರುತ್ತಿದೆ ಎನ್ನಲಾಗಿದೆ.

ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap