ತುಮಕೂರು :
ಜಿಲ್ಲಾಡಳಿತ ಹಾಗೂ ಸಂಘಟನೆಗಳೆಲ್ಲರ ಸಹಕಾರದೊಂದಿಗೆ ಕೋವಿಡ್ ಮಾರ್ಗಸೂಚನೆಯನ್ವಯ ಕಡಿಮೆ ಜನಸಂಖ್ಯೆ ಸೇರಿಸುವುದರೊಂದಿಗೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ 130ನೇ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ 114ನೇ ಡಾ: ಬಾಬು ಜಗಜೀವನರಾಂ ಜನ್ಮದಿನಾಚರಣೆಯನ್ನು ಏಪ್ರಿಲ್ 14ರಂದು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಯಂತಿಯನ್ನು ಅಚ್ಚುಕಟ್ಟಾಗಿ ನಡೆಸಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಧೀಮಂತ ನಾಯಕರಿಬ್ಬರ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ ಮತ್ತು ಪಿಯುಸಿ ಕಾಲೇಜುಗಳಲ್ಲಿ ಪ್ರಬಂಧ ಸ್ವರ್ಧೆ ಏರ್ಪಡಿಸಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನ ಮತ್ತು ಕಾನೂನು ಬಲ್ಲವರಿಂದ ಉಪನ್ಯಾಸ ಏರ್ಪಡಿಸಬೇಕು. ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತುಮಕೂರು ಶೈಕ್ಷಣಿಕ ಜಿಲ್ಲೆಯಿಂದ 3 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಿಂದ ಇಬ್ಬರು ಸೇರಿ ಒಟ್ಟು ಐದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಬೇಕು. ದಲಿತ ಸಂಘಟನೆಯ ಹತ್ತು ಮಂದಿ ಹೋರಾಟಗಾರರನ್ನು ಗುರುತಿಸಿ ಸನ್ಮಾನಿಸಬೇಕು. ಪ್ರಶಸ್ತಿಗೆ ಈಗಾಗಲೇ ಸನ್ಮಾನ ಪಡೆದವರನ್ನು ಪರಿಗಣಿಸದೆ ಹೊಸಬರಿಗೆ ಆದ್ಯತೆ ನೀಡಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಏಪ್ರಿಲ್ 5ರಂದು ಡಾ: ಬಾಬು ಜಗಜೀವನ್‍ರಾಂ ಅವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ತಿಳಿಸಿದರು. ರಾಷ್ಟ್ರದ ಧೀಮಂತ ನಾಯಕರ ಆಚರಣೆ ಸಂಬಂಧ ನಡೆಯುತ್ತಿರುವ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಸುವ ಸಂಬಂಧ ಸರಕಾರದ ಮಾರ್ಗಸೂಚಿಯನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ. ರಘು, ಪಾಲಿಕೆ ಆಯುಕ್ತೆ ರೇಣುಕಾ, ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
