ತುಮಕೂರು : ಕೋವಿಡ್ ಹೆಚ್ಚಳ : ಜಾತ್ರೆ, ಸಭೆ-ಸಮಾರಂಭ ನಿಷೇಧ!!

 ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಕ್ರಮ | ಹಬ್ಬಗಳ ಸಾರ್ವತ್ರಿಕ ಆಚರಣೆಗೂ ಬ್ರೇಕ್

ತುಮಕೂರು :

      ಕೋವಿಡ್ ಸೋಂಕು ಜಿಲ್ಲೆಯಲ್ಲಿ ತೀವ್ರವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಧಾರ್ಮಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಜಾತ್ರೆ, ಸಭೆ, ಸಮಾರಂಭ ಹಾಗೂ ಆಚರಣೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೈ.ಎಸ್.ಪಾಟೀಲ ಶುಕ್ರವಾರ ಆದೇಶಿಸಿದ್ದಾರೆ.

      ಜಾತ್ರೆ, ರಥೋತ್ಸವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಮರೆತು, ಸುರಕ್ಷತಾ ಕ್ರಮಗಳಿಲ್ಲದೆ ಹೆಚ್ಚು ಜನಜಂಗುಳಿ ಸೇರುತ್ತಿರುವ ಕಾರಣದಿಂದ ಜಿಲ್ಲಾಧಿಕಾರಿಗಳು ಜಿಲ್ಲಾ ವ್ಯಾಪ್ತಿಯ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಜಾತ್ರೆ, ಸಭೆ, ಸಮಾರಂಭಗಳನ್ನು ನಿಷೇಧಿಸಿದ್ದು, ಇದರಿಂದ ಯುಗಾದಿ, ಶ್ರೀರಾಮನವಮಿ ಹಿಂದೆ-ಮುಂದೆ ನಡೆಯುತ್ತಿದ್ದ ಹಲವು ಜಾತ್ರೆ, ರಥೋತ್ಸವಗಳಿಗೆ ಬ್ರೇಕ್ ಬಿದ್ದಿದೆ.

     ಅಂತೆಯೇ ಧಾರ್ಮಿಕ ಹಬ್ಬಗಳಾದ ಯುಗಾದಿ, ಹೋಳಿಹಬ್ಬ, ಷಬ್-ಎ-ಬರಾತ್, ಗುಡ್ ಫ್ರೈಡೇ ಹಬ್ಬಗಳ ಸಂದರ್ಭಗಳಲ್ಲಿ ಜಿಲ್ಲಾ ವ್ಯಾಪ್ತಿಯ ಯಾವುದೇ ಸಾರ್ವಜನಿಕ ಸ್ಥಳಗಳಾದ ಮೈದಾನ, ಉದ್ಯಾನವನ, ಮಾರುಕಟ್ಟೆ ಹಾಗೂ ಧಾರ್ಮಿಕ ಪ್ರದೇಶಗಳಲ್ಲಿ ಸಾರ್ವಜನಿಕ ಸಮಾರಂಭ, ಸಭೆಗಳನ್ನು ನಡೆಸುವುದನ್ನು ನಿಷೇಧಿಸಿದ್ದಾರೆ.

ಗುಂಪು ಸೇರುವುದು, ರಾಜಕೀಯ ಚಟುವಟಿಕೆ, ಪ್ರತಿಭಟನೆಗೂ ನಿರ್ಬಂಧ: ಸಾಮಾಜಿಕ, ರಾಜಕೀಯ, ಕ್ರೀಡಾ ಚಟುವಟಿಕೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕøತಿಕ ಕಾರ್ಯಕ್ರಮಗಳ ಆಯೋಜನೆಯನ್ನು ಹಾಗೂ ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ಧಾರ್ಮಿಕ ಕಾರ್ಯಗಳನ್ನು ಸಾಂಕೇತಿಕವಾಗಿ ಆಚರಣೆ ಮಾಡಬೇಕು. ಗುಂಪು-ಗುಂಪಾಗಿ ಪ್ರತಿಭಟನೆ, ಮುಷ್ಕರ ನಡೆಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಪ್ಪಿದ್ದಲ್ಲಿ ಸರ್ಕಾರದ ಆದೇಶದಂತೆ ಕ್ರಮವಹಿಸಲಾಗುವುದು ಎಂದಿದ್ದಾರೆ.

ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ:

      ಯಾವುದೇ ವ್ಯಕ್ತಿ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51 ರಿಂದ 60ರ ಜೊತೆಗೆ ಭಾರತೀಯ ದಂಡ ಸಂಹಿತೆಯ ಕಲಂ 188ರ ರೀತ್ಯಾ ಕಾನೂನು ಕ್ರಮ ಜರುಗಿಸಲಾಗುವುದು. ಈ ನಿಷೇಧಾಜ್ಞೆ ಆದೇಶದ ಮಾಹಿತಿಯನ್ನು ಕಾಣುವಂತೆ ಎಲ್ಲರಿಗೂ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲು, ಧ್ವನಿವರ್ದಕಗಳ ಮೂಲಕ ಪ್ರಚಾರ ಮಾಡಲು ಹಾಗೂ ಈ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಸೂಕ್ತ ಕಾನೂನು ರೀತ್ಯಾ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವರಾಯನದುರ್ಗ ರಥೋತ್ಸವ ರದ್ದು, ದರ್ಶನಕ್ಕಷ್ಟೇ ಅವಕಾಶ :

      ಜಾತ್ರೆ, ಸಭೆ, ಸಮಾರಂಭ ರದ್ದುಗೊಳಿಸಿ ಜಿಲ್ಲಾಧಿಕಾರಿಗಳು ಶುಕ್ರವಾರ ಹೊರಡಿಸಿದ ಆದೇಶದ ಬೆನ್ನಿಗೆ ಶನಿವಾರ ನಡೆಯಬೇಕಿದ್ದ ಐತಿಹಾಸಿಕ ದೇವರಾಯನದುರ್ಗ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ರದ್ದಾಗಿದೆ. ಜಾತ್ರೆ ಸಂಬಂಧ ಈಗಾಗಲೇ ಹಲವು ಮಂದಿ ಜಿಲ್ಲೆ, ಹೊರಗಡೆಯಿಂದ ಬಂದು ದೇವರಾಯನದುರ್ಗದಲ್ಲಿ ಕೊಪ್ಪಲುಗಳನ್ನು ಹಾಕಿಕೊಂಡಿದ್ದು, ಇಂದಿನ ರಥೋತ್ಸವಕ್ಕಾಗಿ ದೇವಾಲಯ ಹೊರಾಂಗಣಕ್ಕೆ ರಥವನ್ನು ಎಳೆತಂದು ಸಾಲಂಕೃತಗೊಳಿಸಲಾಗುತ್ತಿತ್ತು. ಆದರೆ ಜಿಲ್ಲಾಡಳಿತದ ತುರ್ತು ಆದೇಶದಿಂದ ಇಂದು ರಥ ಎಳೆಯುವುವನ್ನು ಕೈಬಿಟ್ಟಿದ್ದು, ರಥದಲ್ಲಿ ಉತ್ಸವ ಮೂರ್ತಿಗೆ ಸಾಂಕೇತಿಕ ಪೂಜೆ, ರಥಾಂಗಪೂಜೆಗೆ ನೆರವೇರಿಸಿ ಭಕ್ತರಿಗೆ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಸುನೀಲ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ. ಪ್ರತೀ ವರ್ಷ ಸಾವಿರಾರು ಸಂಖ್ಯೆಯಲ್ಲಿ ಭಕ್ತಸಾಗರದ ದೇವರಾಯನದುರ್ಗ ಜಾತ್ರೆಗೆ ಸೇರುತ್ತಿತ್ತು. ರಥೋತ್ಸವ ರದ್ದಾಗಿದ್ದು, ಭಕ್ತರಲ್ಲಿ ನಿರಾಶೆಗೆ ಕಾರಣವಾಗಿದೆ. ಜಾತ್ರೆಗೆ ಬರುವ ಭಕ್ತರು ಕಡ್ಡಾಯ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿ ದರ್ಶನ ಮಾಡಿಕೊಂಡು ವಾಪಸ್ಸಾಗಬೇಕೆಂದು ತಹಸೀಲ್ದಾರ್ ಮೋಹನ್‍ಕುಮಾರ್ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap