ತುಮಕೂರು :
ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಿ ಶೇ.100ರಷ್ಟು ಗುರಿ ಸಾಧಿಸಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಜಿ.ಎಸ್.ಬಸವರಾಜು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಕೂಲಿಕಾರರು ಲಭ್ಯವಿಲ್ಲ ಎಂಬ ಕಾರಣವೊಡ್ಡಿ ಕಾರ್ಯಪ್ರಗತಿಯಲ್ಲಿ ವಿಫಲತೆ ತೋರಬಾರದರು. ವೈಯಕ್ತಿಕ ಕಾಮಗಾರಿಗೆ ಒತ್ತು ಕೊಟ್ಟು ಪ್ರಗತಿ ಸಾಧಿಸಬೇಕು. ಕುಣಿಗಲ್ ತಾಲೂಕಿನಲ್ಲಿ ಕಡಿಮೆ ಸಾಧನೆಯಾಗಿದ್ದು, ಈ ತಾಲೂಕಿನಲ್ಲಿ ನರೇಗಾ ಯೋಜನೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯ ಸಾಧನೆ ಸಮಾಧಾನಕರವಾಗಿಲ್ಲ. ನರ್ಸರಿಯಲ್ಲಿ ಹುಣಸೆ, ಮಾವು, ಜಂಬುನೇರಳೆ ಗಿಡಗಳನ್ನು ಹೆಚ್ಚು ಬೆಳೆಸಿ ರೈತರಿಗೆ ವಿತರಣೆ ಮಾಡಬೇಕು. ವಿತರಣೆಯಾದ ಸಸಿಗಳು ಬೆಳೆದು ಫಸಲಿನ ಹಂತಕ್ಕೆ ಬರುವವರೆಗೂ ಸಂರಕ್ಷಣೆಯ ಹೊಣೆಯನ್ನು ತಾವೇ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಅರಣ್ಯ ಇಲಾಖಾಧಿಕಾರಿಗೆ ಸೂಚಿಸಿದರು.
ಎಂಎಲ್‍ಸಿ ಚಿದಾನಂದ ಎಂ. ಗೌಡ ಮಾತನಾಡಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆ ಗುರಿ ಸಾಧನೆ ಕೇವಲ ಶೇ.44 ರಷ್ಟಿದೆ ಎಂದು ಬೇಸರ ವ್ಯಕ್ತಪಡಿಸಿ, ಈ ಯೋಜನೆಯಡಿ ಶಾಲಾ ಕಾಂಪೌಂಡ್, ಮೈದಾನ ಹಾಗೂ ಶೌಚಾಲಯ ನಿರ್ಮಿಸಲು ಅವಕಾಶವಿದ್ದು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ ಮಾರಾಟ ಮಳಿಗೆ ಸ್ಥಾಪಿಸಬೇಕು ಎಂದು ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಸಭೆ ಗಮನಕ್ಕೆ ತಂದರು.
ಮಾರಾಟ ಮಳಿಗೆ ಸ್ಥಾಪನೆಗೆ ಸ್ಥಳ ಗುರುತಿಸಿ, ಸ್ಮಾರ್ಟ್ ಸಿಟಿಯಲ್ಲಿ ಉಳಿತಾಯದ ಹಣ ಬಳಕೆ ಮಾಡಿಕೊಂಡು ಮಳಿಗೆ ಸ್ಥಾಪಿಸಬಹುದಾಗಿದೆ. ಹಾಗಾಗಿ ಮೊದಲು ಯೋಜನಾ ವರದಿ ತಯಾರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.
‘ಮಗುವಿಗೊಂದು ಮರ-ಶಾಲೆಗೊಂದು ವನ’ ಕಾರ್ಯಕ್ರಮದಡಿ ನೆರಳು, ಫಲ ನೀಡುವ ಸಸಿಗಳನ್ನು ನೆಡಬೇಕು. ಅರಣ್ಯ ಮತ್ತು ಶಿಕ್ಷಣ ಇಲಾಖೆ ಸಮನ್ವಯ ಸಾಧಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದರಲ್ಲದೆ ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಲು ಒತ್ತು ನೀಡಬೇಕು. ಫಲಿತಾಂಶದಲ್ಲಿ ಜಿಲ್ಲೆ ಉತ್ತಮ ಸ್ಥಾನಕ್ಕೇರಲು ಶ್ರಮಿಸಬೇಕು ಎಂದು ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐಗಳಿಗೆ ಸಂಸದರು ನಿರ್ದೇಶಿಸಿದರು.
ಸಾಮಾಜಿಕ ಭದ್ರತಾ ಯೋಜನೆಯ ಸೌಲಭ್ಯಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿವೆ. ಜಿಲ್ಲೆಯಲ್ಲಿ ಈ ಕಾರ್ಯ ಸಮರ್ಪಕವಾಗಿ ಸಾಗುತ್ತಿದೆಯೇ ಎಂದು ಸಂಸದ ಜಿ.ಎಸ್. ಬಸವರಾಜು ಪ್ರಶ್ನಿಸಿದಾಗ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಪ್ರತಿಕ್ರಿಯಿಸಿ ಫಲಾನುಭವಿಗಳು ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯದಿಂದ ವಂಚಿತರಾಗದಂತೆ ಸಮರ್ಪಕವಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಆಧಾರ್ ಸಂಖ್ಯೆ ಜೋಡಣೆಯಾಗದಿರುವ ಫಲಾನುಭವಿಗಳಿಗೆ ಸೌಲಭ್ಯ ತಲುಪಲು ವಿಳಂಬವಾಗುತ್ತಿದ್ದು, ಈ ನಿಟ್ಟಿನಲ್ಲಿ ನಿರಂತರವಾಗಿ ಆಧಾರ್ ಜೋಡಣಾ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪಾಲಿಕೆ ಮೇಯರ್ ಬಿ.ಜಿ. ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ದಿಶಾ ಸಮಿತಿ ಸದಸ್ಯರಾದ ರಘೋತ್ತಮರಾವ್, ಲೋಕೇಶ್ವರಿ, ಪ್ರೇಮಾ ಹೆಗ್ಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರ ಸ್ವಾಮಿ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ