ತುಮಕೂರು : ಕೋತಿತೋಪು-ಬೆಳಗುಂಬ ರಸ್ತೆ ಒತ್ತುವರಿ ತೆರವು

 ತುಮಕೂರು : 

      ನಗರದ ಕೋತಿತೋಪು-ಬೆಳಗುಂಬ ರಸ್ತೆಯಲ್ಲಿ ಶನಿವಾರ ಬೆಳ್ಳಂಬೆಳ್ಳಿಗೆ ಜೆಸಿಬಿ ಯಂತ್ರಗಳು ಸದ್ದು ಮಾಡಿದ್ದು, ಒತ್ತುವರಿಯಾಗಿದ್ದ ಸರಕಾರಿ ರಸ್ತೆ ಜಾಗವನ್ನು ಪಾಲಿಕೆ ವತಿಯಿಂದ ಪೊಲೀಸ್ ಬಂದೋಬಸ್ತ್ ನೊಂದಿಗೆ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು.

ಕೋತಿತೋಪು ರಸ್ತೆಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ತಲೆಯೆತ್ತಿದ್ದ ಪೆಟ್ಟಿಗೆ ಅಂಗಡಿಗಳು, ಕಾಪೌಂಡ್‍ಗಳನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ನಡೆಸಿದರು.

      ಕೋತಿತೋಪು ವೃತ್ತದಿಂದ ಬೆಳಗುಂಬವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸ್ಮಾರ್ಟ್ ಸಿಟಿಯಿಂದ ಕೈಗೊಳ್ಳಲಾಗಿದ್ದು, ಕೋತಿತೋಪುವಿನಿಂದ ತಮ್ಮಯ್ಯ ಆಸ್ಪತ್ರೆವರೆಗೆ ಅತಿಕ್ರಮಣ ತೆರವಾಗದೆ ಕಾಮಗಾರಿ ಕೈಗೊಂಡಿರಲಿಲ್ಲ. ಒತ್ತುವರಿ ತೆರವಿಗೆ ಪಾಲಿಕೆಗೆ ಕೋರಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಕೋತಿತೋಪು ರಸ್ತೆಯಲ್ಲಿ ಪಾಲಿಕೆ ಅಧಿಕಾರಿಗಳು ರಸ್ತೆಯ ಎರಡೂ ಬದಿಯಲ್ಲಿ ಒತ್ತುವರಿಯಾಗಿರುವ ಜಾಗವನ್ನು ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಿದರು. ರಸ್ತೆ ಮಧ್ಯದಿಂದ ಎರಡು ಬದಿಯಲ್ಲಿ ತಲಾ 37.5 ಅಡಿಗೆ ರಸ್ತೆ ವಿಸ್ತರಿಸಲು ಸರ್ವೆ ನಡೆಸಿ ಮಾರ್ಕ್ ಮಾಡಿ ಸಾರ್ವಜನಿಕರ ಸಹಕಾರದೊಂದಿಗೆ ತೆರವಿಗೆ ಕ್ರಮವಹಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಹೆದ್ದಾರಿಯ ಪ್ರಮುಖ ಸಂಪರ್ಕ ರಸ್ತೆ :

      ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಈ ರಸ್ತೆ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಸಂಪರ್ಕ ಹೊಂದಿರುವುದರಿಂದ ಸ್ಮಾರ್ಟ್‍ಸಿಟಿ ವತಿಯಿಂದ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ತೆರವುಗೊಳಿಸಲಾಗುತ್ತಿದೆ. ಕೋತಿತೋಪು-ಬೆಳಗುಂಬ ರಸ್ತೆಯ ಇಕ್ಕೆಲಗಳಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಡು ಕೆಲವರು ಮನೆ, ಕಾಂಪೌಂಡ್‍ಗಳನ್ನು ನಿರ್ಮಿಸಿಕೊಂಡಿದ್ದರು. ರಸ್ತೆ ಅಭಿವೃದ್ಧಿ ಉದ್ದೇಶದಿಂದ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸಿದ್ದಾರೆ ಎಂದರು.

ಸ್ಮಾರ್ಟ್ ರಸ್ತೆಯಾಗಿ ಅಭಿವೃದ್ಧಿ:

      ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ. ರಂಗಸ್ವಾಮಿ ಮಾತನಾಡಿ, ಬೆಳಗುಂಬ-ಕೋತಿತೋಪು ರಸ್ತೆಯನ್ನು ಸ್ಮಾರ್ಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಈ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಪೆÇಲೀಸರ ಸಹಕಾರದೊಂದಿಗೆ ಪಾಲಿಕೆಯಿಂದ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ನಡೆದಿದೆ. ತೆರವಾದ ಕೂಡಲೇ ಉಳಿಕೆಯಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

      ಈ ಸಂದರ್ಭದಲ್ಲಿ ಕೆಲವು ಮಾಲೀಕರು ತೆರವಿಗೆ ಆಕ್ಷೇಪ ವ್ಯಕ್ತಪಡಿಸಿದರು. ಅವರಿಗೆ ಮನದಟ್ಟು ಮಾಡಿ ಕಾರ್ಯಚರಣೆ ಮುಂದುವರಿಸಲಾಯಿತು. ಡಿವೈಎಸ್ಪಿ ಶ್ರೀನಿವಾಸ್, ನಗರ ಸಿಪಿಐ ನವೀನ್, ನಗರಠಾಣೆ ಪಿಎಸ್‍ಐ ಮಂಜುನಾಥ್ ಹಾಗೂ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

Recent Articles

spot_img

Related Stories

Share via
Copy link
Powered by Social Snap