ತುಮಕೂರು :

ನಗರ-ಗ್ರಾಮೀಣ ಬೀದಿ ಬದಿ ವ್ಯಾಪಾರಿಗಳಿಗೆ ವರವಾಗಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಬಡವರ ಬಂಧು ಯೋಜನೆಯನ್ನು ಸ್ಥಗಿತಗೊಳಿಸಿ, ಕೇಂದ್ರದ ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆಯೊಂದಿಗೆ ವಿಲೀನಗೊಳಿಸಲು ಸರಕಾರ ಮುಂದಾಗಿದ್ದು, ಕೇವಲ ಪಾಲಿಕೆ, ನಗರಸ್ಥಳೀಯ ಸಂಸ್ಥೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಯೋಜನೆಯಡಿ ಸಾಲಸೌಲಭ್ಯ ಒದಗಿಸಲು ಮುಂದಾಗಿರುವುದು ಗ್ರಾಮೀಣ ಬಡ ವ್ಯಾಪಾರಿಗಳಿಗೆ ಅನಾನುಕೂಲವಾಗಿ ಪರಿಣಮಿಸಿದೆಯಲ್ಲದೇ ಮತ್ತೆ ಖಾಸಗಿ ಮೀಟರ್ ಬಡ್ಡಿ ಹಾವಳಿಗೆ ಬೀದಿ ಬದಿ ವ್ಯಾಪಾರಿಗಳು ಸಿಲುಕುವ ಆತಂಕಕ್ಕೆ ಕಾರಣವಾಗಿದೆ.
25-11-2018ರಲ್ಲಿ ಬಡವರ ಬಂಧು ಯೋಜನೆಯನ್ನು ಪರಿಚಯಿಸಿದ್ದ ರಾಜ್ಯ ಸರಕಾರ ನಗರಹಾಗೂ ಗ್ರಾಮೀಣ ಪ್ರದೇಶವೆಂಬ ಬೇಧವಿಲ್ಲದೆ ಬೀದಿ ಬದಿ ವ್ಯಾಪಾರಿಗಳಿಗೆ 2000 ರೂ.ಗಳಿಂದ 10,000ದವರೆಗೆ ಬಡ್ಡಿರಹಿತ ಸಾಲವನ್ನು ಸಹಕಾರಿ ಬ್ಯಾಂಕ್, ಬ್ಯಾಂಕ್‍ಗಳ ಮೂಲಕ ಮೂರು ತಿಂಗಳ ಅವಧಿಗೆ ವಿತರಿಸಲು ಅನುವು ಮಾಡಿಕೊಟ್ಟಿತ್ತು. ಇದಕ್ಕೆ ಬ್ಯಾಂಕ್‍ಗಳು ವಿಧಿಸುತ್ತಿದ್ದ ಶೇ 11ರವರೆಗಿನ ಬಡ್ಡಿಯನ್ನು ಸರಕಾರವೇ ಬ್ಯಾಂಕ್‍ಗಳಿಗೆ ಮರುಪಾವತಿ ಮಾಡಿ, ಬಡ್ಡಿರಹಿತವಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಒದಗಿಸುತ್ತಿತ್ತು. ರಾಜ್ಯಾದ್ಯಂತ ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳು ಈ ಯೋಜನೆಯ ಪ್ರಯೋಜನ ಪಡೆದಿದ್ದರಲ್ಲದೇ ಸಕಾಲಕ್ಕೆ ಮರುಪಾವತಿಯನ್ನು ಸಹ ಮಾಡಿ ಯೋಜನೆಯನ್ನು ಯಶಸ್ವಿಗೊಳಿಸಿದ್ದರು.
ಕೋವಿಡ್‍ನಲ್ಲಿ 4.59ಕೋಟಿ ವಿತರಿಸಿ ಹೆಗ್ಗಳಿಕೆ ಪಡೆದಿದ್ದ ಡಿಸಿಸಿ ಬ್ಯಾಂಕ್
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಒಂದರಲ್ಲೇ ಯೋಜನೆ ಪ್ರಾರಂಭವಾದಾಗಿನಿಂದ 2021 ಮಾ.31ರವರೆಗೆ 5456 ಮಂದಿ ಫಲಾನುಭವಿಗಳಿಗೆ 5.42 ಕೋಟಿ ಸಾಲ ವಿತರಿಸಿದ್ದು, ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಬಡ ಬೀದಿ ಬದಿ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಬೇಕೆಂದು ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರ ಸೂಚನೆ ಮೇರೆಗೆ ಬ್ಯಾಂಕ್ ಸಿಬ್ಬಂದಿಗಳೇ ರಸ್ತೆಗಿಳಿದು ವ್ಯಾಪಾರಿಗಳನ್ನು ಗುರುತಿಸಿ, ಮಾರಾಟ ಸ್ಥಳದ ಫೋಟೋ, ಆಧಾರ್‍ಪ್ರತಿ, ಅರ್ಜಿ ಪಡೆದು, 4576 ಮಂದಿಗೆ 4.59 ಕೋಟಿಸಾಲ ವಿತರಿಸಿದ್ದು ರಾಜ್ಯದಲ್ಲೇ ಪ್ರಥಮವೆಂಬ ಹೆಗ್ಗಳಿಕೆ ಪಡೆದಿತ್ತು. ಬಂಡವಾಳವೂ ಇಲ್ಲದೆ ಬರಿಗೈ ಆಗಿದ್ದ ವ್ಯಾಪಾರಿಗಳು ಈ ಸಾಲಸೌಲಭ್ಯ ಪಡೆದು ಬಂಡವಾಳ ಹಾಕಿ ಮತ್ತೆ ಹಣ್ಣು, ಹೂ, ತರಕಾರಿ, ಚಪ್ಪಲಿ, ಪ್ಲಾಸ್ಟಿಕ್ ಮತ್ತಿತರ ಸಾಮಗ್ರಿ ಮಾರುವ ವ್ಯಾಪಾರ ಕೈಗೊಂಡು ಆರ್ಥಿಕ ಪುನಃಶ್ಚೇತನದತ್ತ ಸಾಗಿದ್ದರು. ಮರುಪಾವತಿಯಲ್ಲೂ ದಿನವಿರಬಹುದು, ವಾರಕ್ಕೊಮ್ಮೆಯಿರಬಹುದು ತಮಗೆ ಅನುಕೂಲವಾದ ಮಾದರಿಯಲ್ಲಿ ಮರುಪಾವತಿ ಮಾಡಿ ಮತ್ತೆ ನವೀಕೃತ ಸಾಲ ಪಡೆದಿದ್ದರು.

ಇಂತಹ ಮಹತ್ವದ ಯೋಜನೆ ಜಾರಿಗೊಂಡು ಎರಡೂವರೆ ವರ್ಷ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಸದರಿ ಯೋಜನೆಯನ್ನು ಕೇಂದ್ರ ಸರಕಾರದ ಪ್ರಧಾನಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ ನಿಧಿಯೆಂಬ ಹೊಸ ಯೋಜನೆಯೊಂದಿಗೆ ವಿಲೀನಗೊಳಿಸಿ ಸರಳವಾಗಿ ಸಿಗಬಹುದಾಗಿದ್ದ ಸಾಲ ಪ್ರಕ್ರಿಯೆಗೆ ಹಲವು ಮಿತಿಗಳನ್ನು ಅಳವಡಿಸಿ ನಗರ ಸ್ಥಳೀಯ ಸಂಸ್ಥೆಯಲ್ಲಿ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಆನ್‍ಲೈನ್ ಮೂಲಕ ಸೌಲಸೌಲಭ್ಯ ಒದಗಿಸಲು ಮುಂದಾಗಿರುವುದು ಗ್ರಾಮೀಣ, ಬೀದಿ ಬದಿ ವರ್ತಕರಿಗೆ ದೊಡ್ಡ ನಷ್ಟ ಉಂಟುಮಾಡಿದೆಯಲ್ಲದೆ ಸಹಕಾರಿ ಬ್ಯಾಂಕಿಗೆ ಬಡವರಬಂಧು ಯೋಜನೆಯಡಿ ಮರುಪಾವತಿಸುತ್ತಿದ್ದ ಬಡ್ಡಿ ಸಹಾಯಧನದಲ್ಲೂ ಇಳಿಕೆಯಾಗುವಂತೆ ಮಾಡಿದೆ.
ಗುರುತಿನ ಪತ್ರ ಹೊಂದಿದ ನಗರದ ವ್ಯಾಪಾರಸ್ಥರು ಮಾತ್ರ ಅರ್ಹರು: ನೂತನ ಪಿಎಂಸ್ವನಿಧಿ ಯೋಜನೆಯಡಿ ಪಾಲಿಕೆ/ ನಗರ ವ್ಯಾಪ್ತಿಯಲ್ಲಿ ನೋಂದಾಯಿಸಿ ಬೀದಿ ಬದಿ ವ್ಯಾಪಾರಿಗಳೆಂದು ಗುರುತಿನ ಪತ್ರ ಪಡೆದ ಅರ್ಜಿದಾರರು ಮಾತ್ರ ಯೋಜನೆಯಡಿ ಸಾಲಸೌಲಭ್ಯಕ್ಕೆ ಅರ್ಜಿ ಹಾಕಲು ಅರ್ಹರಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಬೀದಿ ಬದಿ ವ್ಯಾಪಾರಸ್ಥರು ಅರ್ಜಿ ಹಾಕಲು ಆಸ್ಪದವೇ ಇಲ್ಲದಂತಾಗಿದೆ. ಜೊತೆಗೆ ನಗರದಲ್ಲಿ ಅರ್ಜಿ ಹಾಕುವವರು ಆನ್‍ಲೈನ್ ಮೂಲಕವೇ ಅರ್ಜಿ ಹಾಕಿ ರಾಷ್ಟ್ರೀಕೃತ ಬ್ಯಾಂಕ್‍ಗಳು, ಡಿಸಿಸಿ ಬ್ಯಾಂಕ್‍ಗಳ ಮೂಲಕ ತೆರೆದು ಹಣ ಪಡೆಯಬೇಕಿದ್ದು, ಪಡೆಯುವ 2 ರಿಂದ 5, 10 ಸಾವಿರ ಹಣಕ್ಕೆ ತೀವ್ರ ಕಸರತ್ತು ಪರದಾಡುವಂತಾಗಿದೆ.ಅಲ್ಲದೇ ಬೀದಿ ಬದಿ ವ್ಯಾಪಾರಸ್ಥರನ್ನು ಗುರುತಿಸಿ ಸಾಲ ಮಂಜೂರಾತಿಗಾಗಿಯೂ ಪಾಲಿಕೆ ಆಯುಕ್ತರು, ಲೀಡ್ ಬ್ಯಾಂಕ್, ಪೊಲೀಸ್ ಮುಖ್ಯಸ್ಥರು, ವ್ಯಾಪರಸ್ಥರನ್ನೊಳಗೊಂಡ ಸಮಿತಿಯನ್ನು ರಚಿಸಬೇಕೆಂದಿರುವುದು ಆಡಳಿತ ನಿಯಂತ್ರಣಕ್ಕೆ ಇಡೀ ಯೋಜನೆಯನ್ನು ಒಳಪಡಿಸಿದಂತಾಗಿದೆ.
ಆನ್‍ಲೈನ್ ಅರ್ಜಿ -ಪಾವತಿ ಇದೆಲ್ಲ ಸಾಧ್ಯವೇ?:
ಬೀದಿ ಬದಿ ವ್ಯಾಪಾರಸ್ಥರು ಬಹುತೇಕ ಅನಕ್ಷರಸ್ಥರಾಗಿದ್ದು, ಆನ್‍ಲೈನ್ ಮೊದಲಾದ ತಾಂತ್ರಿಕ ಅರ್ಜಿಗಳ ಪರಿವೇ ಇಲ್ಲದವರಾಗಿದ್ದಾರೆ. ನಗದು ರಹಿತ ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಈಕ್ರಮ ಎಂದು ಕೇಂದ್ರ ಸರಕಾರ ಸಮರ್ಥಿಸುತ್ತಿದ್ದರೂ, ಬೀದಿ ಬದಿ ವ್ಯಾಪಾರಸ್ಥರಿಗೆ ಯೋಜನೆ ಕನಸಿನ ಕೂಸಂತಾಗಿರುವುದು ವಾಸ್ತವ ಕಟುಸತ್ಯವೆನಿಸಿದೆ.
ಜನಪರ ಯೋಜನೆ ಮುಂದುವರಿಸಲು ತುಮಕೂರು ಡಿಸಿಸಿ ಬ್ಯಾಂಕ್ ಆಗ್ರಹ
ಪಿಎಂ ಸ್ವನಿಧಿ ಯೋಜನೆಯ ಮಿತಿಗಳಿಂದ ಆಗುವ ಅನಾನುಕೂಲಗಳ ಬಗ್ಗೆ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಸೂಚನೆ ಮೇರೆಗೆ ತುಮಕೂರು ಡಿಸಿಸಿ ಬ್ಯಾಂಕ್ ಸರಕಾರದ ಸಹಕಾರ ಸಂಘಗಳ ನಿಬಂಧಕರಿಗೆ ಪತ್ರ ಬರೆದು ಗಮನಸೆಳೆದಿದ್ದು, ಪತ್ರದಲ್ಲಿ ಪ್ರಮುಖವಾಗಿ ರಾಜ್ಯ ಸರಕಾರದ ಬಡವರ ಬಂಧು ಯೋಜನೆಯಡಿ ನಗರ, ಗ್ರಾಮೀಣ ಬೀದಿ ಬದಿ ವ್ಯಾಪಾರಿಗಳು ಎಂಬ ಬೇಧವಿಲ್ಲದೆ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಒದಗಿಸಲಾಗುತ್ತಿತ್ತು. ಕೋವಿಡ್ ಸಂದರ್ಭದಲ್ಲಿ ಈ ಯೋಜನೆ ವ್ಯಾಪಾರಸ್ಥರ ಪುನರ್‍ಚೇತರಿಕೆಗೆ ಜೀವದ್ರವ್ಯವೆನಿಸಿತ್ತು, ಹೊಸದಾಗಿ ಪರಿಚಯಿಸುತ್ತಿರುವ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಮಹಾನಗರಪಾಲಿಕೆಯ ಗುರುತಿನ ಚೀಟಿ ಹೊಂದಿರುವ ಬೀದಿ ಬದಿ ವ್ಯಾಪಾರಿಗಳಿಗೆ ಮಾತ್ರ ಸಾಲ ನೀಡಬೇಕಿದ್ದು, ಗ್ರಾಮೀಣ ಭಾಗದ ವರ್ತಕರಿಗೆ ಅನೂನುಕಾಲವಾಗಲಿದೆ. ಅಲ್ಲದೇ ಯೋಜನೆಯಡಿ ಶೇ.7ರಂತೆ ಮಾತ್ರ ಬಡ್ಡಿ ಕ್ಲೆಂ ಮಾಡಲು ಅವಕಾಶವಿದ್ದು, ಬಡವರ ಬಂಧು ಯೋಜನೆಯಡಿ ಬಡ್ಡಿದರ ಶೇ.10 ಹಾಗೂ ಪ್ರೋತ್ಸಾಹಧನ ಶೇ.1ರಷ್ಟು ಸೇರಿ ಶೇ.11ರಷ್ಟು ಬಡ್ಡಿ ಬ್ಯಾಂಕ್‍ಗಳಿಗೆ ಮರುಪಾವತಿಯಾಗುತ್ತಿತ್ತು. ಹೊಸ ಯೋಜನೆಯಡಿ ಕೊರತೆಯಾಗುವ ಬಡ್ಡಿಯನ್ನು ಯಾರಿಂದ ತುಂಬಬೇಕು ಎಂಬ ಪ್ರಶ್ನೆ ಉದ್ಬವಿಸುತ್ತದೆ. ಹಾಗಾಗಿ ಎಲ್ಲಾಸ್ತರದ ಬೀದಿ ಬದಿ ವ್ಯಾಪಾರಿಗಳಿಗೂ ಅನುಕೂಲವಾಗುವ ಬಡವರಬಂಧು ಯೋಜನೆಯನ್ನು ಮುಂದುವರಿಸಬೇಕೆಂದು ಪತ್ರದಲ್ಲಿ ಕೋರಿದ್ದಾರೆ.
ಬಡವರ ಬಂಧು ಯೋಜನೆ ಬದಲಿಗೆ ಪಿಎಂಸ್ವನಿಧಿ ಯೋಜನೆ ಜಾರಿಗೆ ತರಲು ಹೊರಟಿರುವುದು ಗ್ರಾಮೀಣ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ. ಜೊತೆಗರ ಸರಕಾರದ ಕಡೆಯಿಂದ ಡಿಸಿಸಿ ಬ್ಯಾಂಕ್‍ಗಳಿಗೆ ಬಡ್ಡಿ ಮರುಪಾವತಿಯಲ್ಲೂ ಇಳಿಕೆಯಾಗಲಿದ್ದು, ಆನ್‍ಲೈನ್ ಅರ್ಜಿ ಹಾಕಿ, ಗುರುತಿನ ಪತ್ರ ದಾಖಲೆಯಾಗಿ ಸಲ್ಲಿಸಿ ಸಾಲ ಪಡೆಯುವುದು ಬಹುತೇಕ ಅನಕ್ಷರಸ್ಥರಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಕಷ್ಟವಾಗಲಿದೆ. ಇಷ್ಟು ಕಸರತ್ತು ಪಡೆದು ಸಾಲ ಪಡೆಯುವುದೇಕೆ ಎಂದು ವ್ಯಾಪಾರಿಗಳು ಮತ್ತೆ ಮೀಟರ್ ಬಡ್ಡಿಯವರ ಬಳಿ ಹೋಗುವ ಸಾಧ್ಯತೆಗೆ ಸರಕಾರವೇ ಆಸ್ಪದ ಮಾಡಿಕೊಟ್ಟಂತಾಗುತ್ತದೆ. ಜನಪರವಾದ ಬಡವರ ಬಂಧು ಯೋಜನೆಯನ್ನು ಮುಂದುವರಿಸಬೇಕು.
-ಕೆ.ಎನ್.ರಾಜಣ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷರು.
ಎಸ್.ಹರೀಶ್ ಆಚಾರ್ಯ








