ತುಮಕೂರು : ಪ್ರಯಾಣಿಕರಿಗೆ ತಟ್ಟಿದ ಮುಷ್ಕರದ ಬಿಸಿ

ತುಮಕೂರು : 

      ವಿವಿದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರ ಸಂಘಟನೆ ಮುಷ್ಕರ ಕರೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸ್ಥಗಿತವಾಗಿದೆ.ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.ಖಾಸಗಿ ಬಸ್ಸುಗಳು ಕಾರ್ಯಾಚರಣೆ ನಡೆಸುತ್ತಿದ್ದರೂ,ಪ್ರಯಾಣಿಕರಿಗೆ ಸಂಪೂರ್ಣ ತೃಪ್ತಿಕರ ಸೇವೆ ನೀಡಲು ಸಾಧ್ಯವಾಗಿಲ್ಲ.

      ಸಾರ್ವಜನಿಕರು ಎಂದಿನಂತೆ ಶಾಲಾ, ಕಾಲೇಜು, ಸರಕಾರಿ ಮತ್ತು ಖಾಸಗಿ ಕಚೇರಿಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದು,ಸರಕಾರಿ ಬಸ್ಸುಗಳಿಲ್ಲದೆ, ಅವುಗಳ ಸ್ಥಾನದಲ್ಲಿದ್ದ ಬೆರಳೆಣಿಯ ಖಾಸಗಿ ಬಸ್ಸುಗಳಿಗೆ ಹತ್ತಬೇಕೆ, ಬೇಡವೆ ಎಂಬ ಗೊಂದಲದಲ್ಲಿಯೇ ಇದ್ದಂತೆ ಕಂಡಬಂದಿದೆ.ಕೆಲವರು ಖಾಸಗಿ ಬಸ್ಸುಗಳಿಗೆ ಹತ್ತಲು ಹಿಂದೇಟು ಹಾಕಿರುವುದು ಕಂಡುಬಂದಿದೆ.

      ನಗರದಿಂದ ತುಮಕೂರು ಜಿಲ್ಲೆಯ 9 ತಾಲೂಕು ಕೇಂದ್ರಗಳಾದ ತಿಪಟೂರು,ಕುಣಿಗಲ್,ಪಾವಗಡ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ,ಶಿರಾ,ಗುಬ್ಬಿ,ತುರುವೇಕೆರೆಗಳಿಗೆ ತೆರೆಳಲು ಸರಿಯಾದ ಬಸ್ಸುಗಳಿಲ್ಲದ ಪ್ರಯಾಣಿಕರು ಪರದಾಡುವಂತಾಗಿದೆ.

     ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಾರಿಗೆ ಸಮಿತಿಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ,ಪ್ರಯಾಣಿಕರಿಗೆ ತೊಂದರೆಯಾಗದ ರೀತಿ, ಖಾಸಗಿ ಸಾರಿಗೆ ಸೇವೆ ಉಪಯೋಗಿಸಿಕೊಳ್ಳಲು ತೀರ್ಮಾನಿಸಿ, ಅಗತ್ಯ ಕ್ರಮ ಕೈಗೊಂಡಿದ್ದರೂ ಸಹ ಅಂತಹ ದೊಡ್ಡ ಪ್ರಮಾಣದ ಪ್ರಯೋಜನವಾದಂತೆ ಕಂಡುಬಂದಿಲ್ಲ.

      ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್.ಬಸವರಾಜು ಮಾತನಾಡಿ, ಮಧ್ಯಾಹ್ನ 12 ಗಂಟೆಯ ಒಳಗೆ ತುಮಕೂರು ಡಿಪೋ ದಿಂದ 310 ಬಸ್ಸುಗಳು ಹೊರಡಬೇಕಾಗಿತ್ತು. ಆದರೆ ಇದುವರೆಗು ಒಂದು ಸಹ ಕಾರ್ಯಾಚರಣೆ ನಡೆಸಿಲ್ಲ. ಈಗಾಗಲೇ ಮುಷ್ಕರ ನಿರತ ಚಾಲಕರು, ನಿರ್ವಾಹಕರೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, 15-20 ಜನರು ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ . ಅವರು ಬಂದರೆ ಅಗತ್ಯವಿರುವ ಕಡೆ ಬಸ್ಸುಗಳ ಸಂಚಾರ ಕಾರ್ಯಾರಂಭವಾಗಲಿದೆ ಎಂದರು.

      ಆರ್.ಟಿ.ಓ ಎಸ್.ರಾಜು ಮಾತನಾಡಿ, ಕೆ.ಎಸ್.ಆರ್.ಟಿ.ಸಿ.ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ 550 ಬಸ್ಸುಗಳನ್ನು ಓಡಿಸಲು ಮಂಗಳವಾರ ನಡೆದ ಸಾರಿಗೆ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.ಖಾಸಗಿ ಬಸ್ಸುಗಳ ಜೊತೆಗೆ, ಮ್ಯಾಕ್ಸಿಕ್ಯಾಬ್,ಮಿನಿ ಬಸ್,ಟೆಂಪೋ ಇನ್ನಿತರ ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಸಲಾಗಿದೆ.ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಲಹೆಯಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.
ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಕೆಎಸ್‍ಆರ್‍ಪಿ ತುಕಡಿ, ಡಿಎಆರ್ ತುಕಡಿ, 40 ಪೊಲೀಸ್ ಪೇದೆಗಳನ್ನು ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap