ತುಮಕೂರು : ಸಾಲು ಸಾಲು ರಜೆ… ಊರುಗಳತ್ತ ಜನರ ಪಯಣ!!

 ತುಮಕೂರು : 

      ಸಾಲು ಸಾಲು ರಜೆಗಳ ಪರಿಣಾಮ ನಗರದಲ್ಲಿರುವ ಉದ್ಯೋಗಸ್ಥರು ಹಳ್ಳಿಗಳ ಕಡೆಗೆ ಮುಖ ಮಾಡಿದ್ದಾರೆ. ಇದೇ ಸಮಯಕ್ಕೆ ಯುಗಾದಿ ಬಂದಿರುವುದರಿಂದ ಹಬ್ಬವನ್ನು ಊರಿನಲ್ಲೇ ಆಚರಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ನಗರ ಪ್ರದೇಶಗಳಲ್ಲಿರುವ ಗ್ರಾಮೀಣ ಸಮುದಾಯ ಹಳ್ಳಿಗಳತ್ತ ಪಯಣ ಬೆಳೆಸಿದ್ದಾರೆ.

      ಏಪ್ರಿಲ್ 10, 2ನೇ ಶನಿವಾರ, 11 ರಂದು ಭಾನುವಾರ, 12ನೇ ತಾರೀಖು ಸೋಮವಾರ ಕರ್ತವ್ಯದ ದಿನವಾಗಿದ್ದು, ಒಂದು ದಿನ ರಜೆ ಹಾಕಿಕೊಂಡರೆ 14 ರವರೆಗೂ ರಜಾ ಅನುಭವಿಸಬಹುದು. 13 ರಂದು ಯುಗಾದಿ ಹಬ್ಬ. 14 ರಂದು ಡಾ.ಅಂಬೇಡ್ಕರ್ ಜಯಂತಿ ಹೀಗೆ ನಾಲ್ಕು ದಿನಗಳ ಸರ್ಕಾರಿ ರಜೆ ಇರುವ ಕಾರಣ ಬಹಳಷ್ಟು ಮಂದಿ ಉದ್ಯೋಗಸ್ಥರು ಹಳ್ಳಿಗಳ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ ಊರು ಸೇರಿಕೊಂಡಿದ್ದಾರೆ.

     ಕಳೆದ ಬಾರಿಯಂತೆ ಈ ಬಾರಿಯು ಯುಗಾದಿ ಸಮಯದಲ್ಲಿಯೇ ಸಂಕಷ್ಟಗಳು ಎದುರಾದವು. ಯುಗಾದಿಗೆ ಮುನ್ನಾ ದಿನಗಳಲ್ಲಿಯೇ ಸಾರಿಗೆ ಸಿಬ್ಬಂದಿ ಮುಷ್ಕರ ಆರಂಭವಾಯಿತು. ಸತತವಾಗಿ ಮುಷ್ಕರ ಮುಂದುವರೆದ ಕಾರಣ ಹಾಗೂ ಇದಕ್ಕೆ ಅಂತ್ಯವಿಲ್ಲವೆಂಬ ಸುಳಿವು ಸಿಗುತ್ತಿದ್ದಂತೆಯೇ ಖಾಸಗಿ ವಾಹನಗಳನ್ನು ಹಿಡಿದು ಅಥವಾ ಸ್ವಂತ ವಾಹನಗಳಲ್ಲೋ ಅಂತೂ ಊರು ಸೇರಿಕೊಂಡಿದ್ದಾರೆ.

      ನಗರಗಳಲ್ಲಿ ಇರುವವರು ಮುಂಜಾಗ್ರತೆಯಾಗಿ ಊರು ಸೇರಿಕೊಳ್ಳಲು ಕಾರಣವೂ ಇದೆ. ಬೆಂಗಳೂರು ನಗರ, ತುಮಕೂರು ಸೇರಿದಂತೆ ಪ್ರಮುಖ 8 ನಗರಗಳಲ್ಲಿ ರಾತ್ರಿ ಕಫ್ರ್ಯೂ ಘೋಷಣೆಯಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಲಾಕ್‍ಡೌನ್ ಘೋಷಿಸಬಹುದೆಂಬ ವದಂತಿಗಳೂ ಸಹ ಹರಿದಾಡಿವೆ. ಇದೆಲ್ಲವನ್ನೂ ಗಮನಿಸಿರುವ ಯುವ ಸಮುದಾಯ ಹಬ್ಬವನ್ನು ಊರಿನಲ್ಲಿಯೇ ಆಚರಿಸೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

      ಕಳೆದ ಬಾರಿ ಯುಗಾದಿ ಸಂಭ್ರಮವನ್ನು ಕೋರೋನಾ ಕಸಿದಿತ್ತು. ಈ ಬಾರಿ ಸಾರಿಗೆ ಮುಷ್ಕರ ಕಸಿದು ಕೊಂಡಿದೆ. ಹಬ್ಬದ ಸಂದರ್ಭದಲ್ಲಿಯೇ ಸಾರಿಗೆ ನೌಕರರು ಮುಷ್ಕರ ನಡೆಸಬೇಕಿತ್ತೆ ಎಂಬ ಅಸಮಾಧಾನವೂ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಹಬ್ಬಕ್ಕೆ ಊರಿಗೆ ಹೋಗಬೇಕು ಅಂದುಕೊಂಡಿದ್ದವರಿಗೆ ಸಾರಿಗೆ ಮುಷ್ಕರ ಅಡ್ಡಿಯಾಯಿತು. ಪರಿಣಾಮವಾಗಿ ಬಸ್ಸುಗಳಲ್ಲಿ ನಿಯಮಿತವಾಗಿ ಊರು ಸೇರಿಕೊಳ್ಳಬೇಕಿದ್ದವರು ಒಂದಷ್ಟು ತ್ರಾಸಕ್ಕೆ ಒಳಗಾಗಿದ್ದಾರೆ.

ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಖಾಸಗಿ ಬಸ್‍ಗಳು, ಮ್ಯಾಕ್ಸಿ ಕ್ಯಾಬ್‍ಗಳು ಸೇರಿದಂತೆ ಖಾಸಗಿ ವಾಹನಗಳಿಗೆ ಡಿಮ್ಯಾಂಡ್ ಬಂದಿದೆ. ಆದರೆ ಬಸ್ ನಿಲ್ದಾಣದಲ್ಲಿ ಬಸ್ಸುಗಳಿದ್ದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿಯೇ ಇದೆ. ಮುಷ್ಕರದ ಮುನ್ಸೂಚನೆ ಅರಿತು ಸಾರ್ವಜನಿಕರು ಬಸ್‍ಗಳಲ್ಲಿ ಪ್ರಯಾಣಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಮುಷ್ಕರ ಇಂದಲ್ಲ ನಾಳೆ ಮುಕ್ತಾಯವಾಗಬಹುದು. ಆಗ ಬಸ್‍ಗಳಲ್ಲಿ ಊರು ಸೇರಿಕೊಂಡರಾಯಿತು ಎಂಬ ನಿರೀಕ್ಷೆಯಲ್ಲಿ ಇದ್ದ ಹಲವರು ಊರಿಗೆ ಹೋಗುವುದನ್ನೇ ಸ್ಥಗಿತಗೊಳಿಸಿದ್ದಾರೆ. ಅಂತಹ ಕುಟುಂಬಗಳು ಸಾಕಷ್ಟಿವೆ.

     ಜಿಲ್ಲೆಯಲ್ಲಿ ಪ್ರತಿದಿನ 580 ಬಸ್‍ಗಳು ಸಂಚರಿಸಬೇಕಿತ್ತು. ಆದರೆ ಕೆಲವೇ ಬಸ್‍ಗಳು ಮಾತ್ರವೇ ಸಂಚರಿಸಿದ್ದು, ಪ್ರತಿದಿನ ಸರಾಸರಿ 60 ಲಕ್ಷ ನಷ್ಟವಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link