ತುಮಕೂರು:
ನಗರದಾದ್ಯಂತ ಜನಸಂದಣಿ ನಿಷೇಧದ ಹಿನ್ನೆಲೆ ಹಾಗೂ ಅಂಬೇಡ್ಕರ್ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಾಣಿ ಬಲಿಗೆ ನಿಷೇಧ ಹೇರಲಾಗಿತ್ತು. ವರ್ಷದ ತೊಡಕು ದಿನವಾದ ನಿನ್ನೆ ಚಿಕನ್, ಮಟನ್ ಖರೀದಿಗಾಗಿ ಮಾಂಸ ಪ್ರಿಯರ ಪರದಾಟ ಹೇಳತೀರದಾಗಿತ್ತು.
ವರ್ಷಕ್ಕೊಮ್ಮೆ ಬರುವ ಯುಗಾದಿ ಹಬ್ಬದ ಮಾರನೇ ದಿನ ವರ್ಷದ ತೊಡಕನ್ನು ಆಚರಿಸಲು ಮಾಂಸ ಪ್ರಿಯರು ಬಹಳ ಉತ್ಸುಕತೆಯಿಂದ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಈ ಬಾರಿ ನಗರದಲ್ಲಿ ಮಾಂಸ ಮಾರಾಟ ನಿಷೇಧಿಸಿರುವುದಿಂದ ಮಟನ್ ಮತ್ತು ಚಿಕನ್ ಅಂಗಡಿಗಳು ಬಂದ್ ಆಗಿದ್ದವು. ಯುಗಾದಿ ಹಬ್ಬದಂತೆಯೇ ಅದರ ಮಾರನೆಯ ವರ್ಷದೊಡಕು ಬಹಳಷ್ಟು ಜನರಿಗೆ ಹೆಚ್ಚು ಪ್ರಿಯವಾದದ್ದು. ಬೇಸಿಗೆಯ ಈ ದಿನಗಳಲ್ಲಿ ಮಾಂಸಪ್ರಿಯರಿಗೆ ಇದು ಹೇಳಿ ಮಾಡಿಸಿದಂತಹ ದಿನ. ಆದರೆ ಈ ಬಾರಿ ನಾನಾ ಕಾರಣಗಳಿಂದಾಗಿ ಮಾಂಸ ಮಾರಾಟ ನಗರದಲ್ಲಿ ಸ್ಥಗಿತಗೊಂಡಿದ್ದ ಕಾರಣ ಮಾಂಸಪ್ರಿಯರಿಗೆ ನಿರಾಸೆ ಎದುರಾಯಿತು. ಬೆಳ್ಳಂಬೆಳಿಗ್ಗೆ ಮನೆಯಿಂದ ಹೊರಟು ಮಟನ್ ಸ್ಟಾಲ್‍ಗಳ ಮುಂದೆ ಹೋದಾಗ ಅವುಗಳ ಬಾಗಿಲು ಬಂದ್ ಆಗಿದ್ದನ್ನು ನೋಡಿದ ನಂತರವೇ ವಿಷಯ ತಿಳಿಯಿತು. ಹೀಗಾಗಿ ಬಹಳಷ್ಟು ಜನ ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಿದರೆ, ಇನ್ನು ಕೆಲವರು ಹೊರ ವಲಯದ ಮನೆಗಳಲ್ಲಿ ಮಾಂಸ ಮಾರಾಟ ಮಾಡುತ್ತಿದ್ದ ಮನೆಗಳಿಗೆ ತೆರಳಿ ಕದ್ದು ಮುಚ್ಚಿ ತಂದ ಉದಾಹರಣೆಗಳು ಕೇಳಿಬಂದವು. ವರ್ಷದೊಡಕು ದಿನವಾದ ನಿನ್ನೆ ಮಾಂಸ ಮಾರಾಟ ಸ್ಥಗಿತಗೊಳಿಸಿದ್ದು ಸರಿಯಾದ ಕ್ರಮವಲ್ಲ ಎಂಬ ಅಸಮಾಧಾನದ ನುಡಿಗಳು ಎಲ್ಲೆಡೆ ಕೇಳಿಬಂದವು.
ನಗರ ವ್ಯಾಪ್ತಿ ಹೊರತುಪಡಿಸಿ ಹೊರವಲಯದ ಗ್ರಾಮೀಣ ಪ್ರದೇಶಗಳಲ್ಲಿರುವ ಚಿಕನ್ ಮತ್ತು ಮಟನ್ ಅಂಗಡಿಗಳಲ್ಲಿ ಮಾಂಸ ಖರೀದಿಗಾಗಿ ಜನತೆ ಮುಗಿ ಬಿದ್ದಿರುವುದರಿಂದ ಅಂಗಡಿಗಳ ಮುಂದೆ ಕಿ.ಮೀ. ಗಟ್ಟಲೆ ಸರದಿಯ ಸಾಲುಗಳು ಕಂಡು ಬಂದವು.
ಗುಡ್ಡೆ ಬಾಡಿಗೆ ಹೆಚ್ಚಿದ ಬೇಡಿಕೆ :
ವರ್ಷದ ತೊಡಕನ್ನು ಆಚರಿಸಲು ಹಳ್ಳಿಗಳಲ್ಲಿ ಬಾಡಿನ ಚೀಟಿ ಮಾಡಿಕೊಂಡಿರುತ್ತಾರೆ. ಇಂತಹ ಹಳ್ಳಿಗಳ ಮಾಹಿತಿ ಪಡೆದುಕೊಂಡಿರುವ ನಗರ ಪ್ರದೇಶದ ಜನತೆ ತಮ್ಮ ಸ್ನೇಹಿತರ ಮೂಲಕ ಗುಡ್ಡೆ ಬಾಡಿಗೆ ಬೇಡಿಕೆ ಇಟ್ಟಿರುವ ಪರಿಣಾಮ ಹಳ್ಳಿಗಳಲ್ಲೂ ಮಾಂಸ ಮಾರಾಟಕ್ಕೆ ಹೊಸ ಹುರುಪು ಬಂದಂತಾಗಿತ್ತು. ಹಬ್ಬದ ಮಾರನೆಯ ದಿನ ಈ ಬಾರಿ ಮಾಂಸ ಮಾರಾಟ ನಿಷೇಧವಿದೆ ಎಂಬ ಮಾಹಿತಿ ತಿಳಿದ ಕೆಲವರು ಗ್ರಾಮೀಣ ಪ್ರದೇಶಗಳಿಗೆ ಕರೆ ಮಾಡಿ ತನಗೂ ಒಂದು ಪಾಲು ಬೇಕು ಎಂದು ಹೇಳಿ ಬೆಳ್ಳಂಬೆಳಿಗ್ಗೆಯೇ ತರಿಸಿಕೊಂಡ ಹಾಗೂ ರಾತ್ರಿಯೇ ವ್ಯವಸ್ಥೆ ಮಾಡಿಕೊಂಡಿದ್ದ ಸಂಗತಿಗಳು ನಡೆದಿವೆ. ಒಟ್ಟಾರೆ ಈ ಬಾರಿ ಮಾಂಸ ಪ್ರಿಯರಿಗೆ ನಿರಾಸೆ ಕಾದಿದಂತೂ ಸತ್ಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ