ತುಮಕೂರು: ಬಯೋಮೆಟ್ರಿಕ್ ಹಗರಣ ಆರೋಪ; ಜಿಪಂ ಅಧ್ಯಕ್ಷೆ ಪರ ನಿಂತ ಕೈ ಸದಸ್ಯರು!

 ತುಮಕೂರು:

     ಜಿಪಂ ಅಧ್ಯಕ್ಷೆ ಲತಾರವಿಕುಮಾರ್ ಹಾಗೂ ಸದಸ್ಯರ ನಡುವಿನ ಭಿನ್ನಮತದ ಕಾರಣಕ್ಕೆ ನನೆಗುದಿಗೆ ಬಿದ್ದಿದ್ದ ವಾರ್ಷಿಕ ಕ್ರಿಯಾಯೋಜನೆಗೆ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಡೆಗೂ ಅನುಮೋದನೆ ದೊರೆತಿದೆ.

      2020-21ನೇ ಸಾಲಿನ 529 ಕೋಟಿ ವೆಚ್ಚದ ಜಿಲ್ಲಾ ಪಂಚಾಯತ್ ವಾರ್ಷಿಕ ಕ್ರಿಯಾ ಯೋಜನೆ, ಅನಿರ್ಬಂಧಿತ ಅನುದಾನದ 6.93ಕೋಟಿ ರೂ. ಕ್ರಿಯಾಯೋಜನೆ ಹಾಗೂ 15ನೇ ಹಣಕಾಸು ಯೋಜನೆಯ 8.97ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಕಾಮಗಾರಿಗೆ ಸದಸ್ಯರು ಧ್ವನಿಮತದ ಅನುಮೋದನೆ ನೀಡಿದರು.

      ಕಳೆದ ಮಂಗಳವಾರ ನಡೆದಿದ್ದ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಶುಕ್ರವಾರದ ಸಾಮಾನ್ಯ ಸಭೆಯಲ್ಲಿ ಜಿಪಂ ಕ್ರಿಯಾ ಯೋಜನೆಗೆ ಅನುಮೋದನೆ ನೀಡದಿದ್ದರೆ ಅನುದಾನ ವಾಪಸ್ ಹೋಗಲಿದೆ.

      ಅನಿವಾರ್ಯವಾಗಿ ಜಿಲ್ಲಾ ಪಂಚಾಯತ್ ಅನ್ನು ಸೂಪರ್‍ಸೀಡ್ ಮಾಡಬೇಕಾಗುತ್ತದೆ ಎಂದು ಜಿಪಂ ಸದಸ್ಯರ ಹೊಣೆಗಾರಿಕೆಯನ್ನು ಜ್ಞಾಪಿಸಿ ಎಚ್ಚರಿಸುವ ಮಾತುಗಳನ್ನಾಡಿದ್ದರು. ಅಲ್ಲದೇ ಅನುಮೋದನೆಗೆ ಬಹುಮತದ ಕೊರತೆಯಾಗಬಾರದೆಂದು ಜಿಲ್ಲೆಯ ಶಾಸಕರು, ಸಂಸದರು ಸಾಮಾನ್ಯ ಸಭೆಗೆ ಭಾಗವಹಿಸಬೇಕೆಂದು ಕೋರಿದ್ದರು.

       ಅದರಂತೆ ಶುಕ್ರವಾರದ ಸಭೆಗೆ ನಿಗದಿತ 11 ಗಂಟೆಗೆ ಆಗಮಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದರಾದ ಜಿ.ಎಸ್.ಬಸವರಾಜ್, ನಾರಾಯಣಸ್ವಾಮಿ ಹಾಗೂ ಶಾಸಕರುಗಳು ಆಗಮಿಸಿದರಾದರೂ ಕೋರಂ ಆಗುವಷ್ಟು ಸದಸ್ಯರು ಬಂದಿರಲಿಲ್ಲ. 11.30ರವರೆಗೆ ಒಬ್ಬೊಬ್ಬರೇ ಸದಸ್ಯರು ಬರಲಾರಂಭಿಸಿದರು. ಸಭಾಂಗಣದ ಒಳಗೆ ಸದಸ್ಯರ ಆಗಮನಕ್ಕೆ ಎದುರು ನೋಡುತ್ತಿದ್ದ ಸಿಇಒ ಶುಭ ಕಲ್ಯಾಣ ಸದಸ್ಯರ ಎಣಿಕೆ ಮಾಡುವಲ್ಲಿ ಮಗ್ನರಾಗಿದ್ದರು. 11.40ರವೇಳೆಗೆ ಸದಸ್ಯರು, ಶಾಸಕರು, ಸಂಸದರು ಸೇರಿ ಒಟ್ಟು 48 ಸದಸ್ಯ ಬಲ ಬಂದಿತು. ಕೋರಂ ಸಿಕ್ಕಿತೆಂದು ನಾಡಗೀತೆಯೊಂದಿಗೆ ಅಧ್ಯಕ್ಷರ ಅನುಮತಿ ಪಡೆದು ಸಭೆ ಆರಂಭಿಸಿದ ಸಚಿವರು ನಿಮ್ಮ ರಾಜಕೀಯಗಳೇನೇ ಇರಲಿ ಮೊದಲು ಲಿಂಕ್ ಡಾಕ್ಯುಮೆಂಟ್ ಹಾಗೂ ಕ್ರಿಯಾಯೋಜನೆಗೆ ಅನುಮೋದನೆ ಕೊಡಿ ಎಂದು ಸದಸ್ಯರಲ್ಲಿ ಕೋರಿದರು.

  ನಮ್ಮ ಜವಾಬ್ದಾರಿ ಜ್ಞಾಪಿಸಿರುವಿರಿ:

      ಸದಸ್ಯರಾದ ಕೆಂಚಮಾರಯ್ಯ ಮಾತನಾಡಿ ಸಚಿವರೇ ವೈಯಕ್ತಿಕವಾಗಿ ಪತ್ರ ಬರೆದು ಸದಸ್ಯರನ್ನು ಸಭೆಗೆ ಆಹ್ವಾನಿಸಿದ್ದು, ಸದಸ್ಯರ ಜವಾಬ್ದಾರಿಯನ್ನು ಜ್ಞಾಪಿಸಿದೆ. ಆದರೆ ಎಲ್ಲಾ ಸಭೆಗಳಿಗೆ ಇದೇ ರೀತಿ ಶಾಸಕರು, ಸಂಸದರು ಆಗಮಿಸಿ ಸಲಹೆಗಳನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಪ್ರಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಶಾಸಕರುಗಳು ಸಾಮಾನ್ಯ ಸಭೆಗೆ ಬರಬಾರದೆಂಬುದೇನಿಲ್ಲ. ನಾವು ಬಂದರೆ ನಿಮ್ಮ ಚರ್ಚಾ ವೇದಿಕೆಗೆ ಹೆಚ್ಚು ಅಡ್ಡಿಯಾಗುತ್ತದೆ ಎಂದರು.

      ಫೆಬ್ರವರಿಯೊಳಗೆ ಕ್ರಮ ಜರುಗಿಸಿ: ಬಳಿಕ ಜಿಲ್ಲಾ ಪಂಚಾಯತ್ ವಿವಿಧ ಸ್ಥಾಯಿ ಸಮಿತಿ ನಡಾವಳಿಗಳನ್ನು ಅನುಮೋದಿಸುವ ಕುರಿತು ಚರ್ಚೆ ಆರಂಭವಾಯಿತು. 2019ರ ಡಿಸೆಂಬರ್‍ನಲ್ಲಿ ನಡೆದ ಸ್ಥಾಯಿ ಸಮಿತಿ ನಡಾವಳಿಗಳ ಬಗ್ಗೆ ಹೆಚ್ಚು ಚರ್ಚೆ ಬೇಡ. ಅದನ್ನು ಅನುಮೋದಿಸಿ. 2020 ಜೂನ್‍ನಲ್ಲಿ ನಡೆದ ಸಮಿತಿ ಸಭೆಗಳ ನಡಾವಳಿಗಳನ್ನು ಲಿಂಕ್ ಡಾಕ್ಯುಮೆಂಟ್ ಅನುಮೋದನೆ ಬಳಿಕ ಚರ್ಚೆ ಮಾಡಿಕೊಳ್ಳಿ ಎಂದು ಸಚಿವರು ಸದಸ್ಯರಲ್ಲಿ ಕೋರಿದರು. ಈ ಸಂಬಂಧ ಚರ್ಚೆಗಳು ನಡೆದು ಕಡೆಗೆ ವಿವಿಧ ಸ್ಥಾಯಿ ಸಮಿತಿಗಳಲ್ಲಾದ ತೀರ್ಮಾನದಂತೆ ಫೆಬ್ರವರಿಯೊಳಗೆ ಸಂಬಂಧಪಟ್ಟವರ ಕ್ರಮ ಜರುಗಿಸಬೇಕು ಎಂದು ಸಿಇಒಗೆ ಸೂಚಿಸಿದರು. ಬಳಿಕ ಕಳೆದ ಡಿಸೆಂಬರ್ ಹಾಗೂ ಜೂನ್ ಈ ಎರಡು ಸ್ಥಾಯಿಸಮಿತಿಗಳ ನಡಾವಳಿಗಳಿಗೆ ಸದಸ್ಯರು ಅನುಮೋದನೆ ನೀಡಿದರು. ನಂತರ ಕ್ರಿಯಾಯೋಜನೆಗಳ ಅನುದಾನ ವೆಚ್ಚಕ್ಕೆ ಸಭೆಯ ಅಂಗೀಕಾರ ಪಡೆಯಲಾಯಿತು.

  ಆರೋಗ್ಯ ಇಲಾಖೆ ಅಕ್ರಮದ ಚರ್ಚೆ:

      ನಂತರ ಆರೋಗ್ಯ ಇಲಾಖೆಯಲ್ಲಿ ಸಿಸಿ ಟಿವಿ ಹಾಗೂ ಬಯೋಮೆಟ್ರಿಕ್ ಅಳವಡಿಕೆಗೆ ಸಂಬಂಧಿಸಿದಂತೆ ಅವ್ಯವಹಾರವಾಗಿದೆ ಎಂದು ಸದಸ್ಯ ಮಹಾಲಿಂಗಪ್ಪ ವಿಷಯ ಪ್ರಸ್ತಾಪಿಸಿ ಸಭೆಯ ನಿರ್ಣಯಕ್ಕೆ ವಿರುದ್ಧವಾಗಿ ಘಟನೋತ್ತರ ಮಂಜೂರಾತಿ ನೀಡಲಾಗಿದೆ. 1 ಕೋಟಿ 36 ಲಕ್ಷ ಹೆಚ್ಚುವರಿ ಅನುದಾನ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯದೆ ವೆಚ್ಚ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸದಸ್ಯರಾದ ತಿಮ್ಮಯ್ಯ, ಬಂಡೆ ರಾಮಕೃಷ್ಣ, ನವ್ಯಾಬಾಬು, ಕಲ್ಲೇಶ್, ಯಶೋಧಮ್ಮ, ಮತ್ತಿತರರು ಆಗ್ರಹಿಸಿದರು. ಸಚಿವರ ಸೂಚನೆ ಮೇರೆಗೆ ಪ್ರತಿಕ್ರಿಯಿಸಿದ ಆಗಿನ ಡಿಎಚ್‍ಒ ಡಾ.ರಂಗಸ್ವಾಮಿ ಅವರು ಈ ಸಂಬಂಧ 2017 ಸೆ.22ರ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ವಿಷಯ ಚರ್ಚೆ ನಡೆಸಿ, ಎಲ್ಲಾ ಪಿಎಚ್‍ಸಿ ಕೇಂದ್ರಗಳಲ್ಲಿ ಅಳವಡಿಸಲು 1 ಕೋಟಿ 81 ಲಕ್ಷ ವೆಚ್ಚಕ್ಕೆ ಅನುಮೋದನೆ ಪಡೆಯಲಾಗಿದೆ. ನಂತರ ಹಣಕಾಸು ಸ್ಥಾಯಿ ಸಮಿತಿಯಲ್ಲೂ ಸಾಮಾನ್ಯಸಭೆಯಲ್ಲಿ ಘಟನೋತ್ತರ ಮಂಜೂರಾತಿ ಪಡೆಯಲು ನಿರ್ಣಯ ಮಾಡಿ ಅನುಮೋದನೆ ಪಡೆಯಲಾಗಿದ್ದು, 2018 ಜು.19ರ ಸಾಮಾನ್ಯ ಸಭೆಯಲ್ಲಿ ಘಟನೋತ್ತರ ಮಂಜೂರಾತಿಗೆ ಅನುಮೋದಿಸಲಾಗಿದೆ ಎಂದು ಮಾಹಿತಿ ನೀಡಿದರು.

      ಸಭೆಯಲ್ಲಿ ಸಂಸದರಾದ ಜಿ.ಎಸ್. ಬಸವರಾಜು ಹಾಗೂ ನಾರಾಯಣಸ್ವಾಮಿ, ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಬಿ.ಸಿ.ನಾಗೇಶ್, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಶಾಸಕರಾದ ಡಾ: ರಂಗನಾಥ್, ವೆಂಕಟರಮಣಪ್ಪ, ಮಸಾಲ ಜಯರಾಂ, ಡಾ: ಸಿ.ಎಂ.ರಾಜೇಶ್‍ಗೌಡ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್, ಜಿಪಂ ಸಿಇಒ ಶುಭಾ ಕಲ್ಯಾಣ್, ಜಿಪಂ ಸದಸ್ಯರು, ತಾ.ಪಂ. ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗ¼ ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿಗೊಂದು ಮಾದರಿ ಪಬ್ಲಿಕ್ ಶಾಲೆ ತೆರೆಯಿರಿ

      ಸರಕಾರಿ ಶಾಲೆಗಳ ದುಸ್ಥಿತಿಯ ಬಗ್ಗೆ ಸದಸ್ಯರು ವಿಷಯ ಪ್ರಸ್ತಾಪಿಸಿದರು. ಕುಣಿಗಲ್ ಶಾಸಕ ಡಾ.ರಂಗನಾಥ್ ದನಿಗೂಡಿಸಿ ಗ್ರಾಮ ಪಂಚಾಯಿತಿಗೊಂದು ಮಾದರಿ ಪಬ್ಲಿಕ್ ಶಾಲೆ ಸಾರಿಗೆ ವ್ಯವಸ್ಥೆ ಮಾಡಿ ಕಡಿಮೆ ವಿದ್ಯಾರ್ಥಿಗಳ ಶಾಲೆಗಳನ್ನು ರದ್ದು ಮಾಡಿ ಎಂದರು. ಆದರೆ ಸಚಿವರು ಇದು ಅಸಾಧ್ಯ. ಎಲ್ಲಾ ಗ್ರಾಮಗಳಲ್ಲೂ ಒಂದೇ ತರನಾದ ಪರಿಸ್ಥಿತಿಯಿಲ್ಲ. ಸಾರ್ವಜನಿಕವಾಗಿ ವ್ಯಾಪಕ ವಿರೋಧ ಎದುರಿಸಬೇಕಾಗುತ್ತದೆ. ಇದನ್ನು ಶಾಸನಸಭೆಯಲ್ಲಿ ಚರ್ಚಿಸೋಣ ಎಂದು ಚರ್ಚೆಗೆ ತೆರೆ ಎಳೆದರು.

“ಅನುಮೋದನೆಯಾದ ಮೇಲೆ ಚರ್ಚೆ ಅಪ್ರಸ್ತುತವೆಂದ ಕೆಂಚಮಾರಯ್ಯ’’

      ಸದಸ್ಯರಾದ ಕೆಂಚಮಾರಯ್ಯ, ಜಿ.ಜೆ.ರಾಜಣ್ಣ ಸಾಮಾನ್ಯ ಸಭೆಯಲ್ಲಿ ಈಗಾಗಲೇ ಮಂಜೂರಾತಿ ನೀಡಿದ ಮೇಲೆ ಚರ್ಚೆ ಅಪ್ರಸ್ತುತವೆಂದು ಅಧ್ಯಕ್ಷರ ಬೆಂಬಲಕ್ಕೆ ನಿಂತರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರಾದ ತಿಮ್ಮಯ್ಯ, ಮಹಾಲಿಂಗಪ್ಪ, ಕಲ್ಲೇಶ್. ರಾಮಕೃಷ್ಣ ಇತರರು ಘಟನೋತ್ತರ ಮಂಜುರಾತಿಗೆ ನಾವ್ಯಾರು ಒಪ್ಪಿಯೇ ಇಲ್ಲ. ತಮಗೆ ಬೇಕಾದಂತೆ ನಿರ್ಣಯ ಬರೆದುಕೊಂಡಿದ್ದಾರೆ ಎಂದು ದೂರಿದರು. ಅಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಗೆ ಒತ್ತಾಯಿಸಿದ ಕೆಂಚಮಾರಯ್ಯ ಅವರೇ ಈಗ ಈ ರೀತಿ ಏಕೆ ಮಾತಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

      ಅಧ್ಯಕ್ಷರು ಕಾಂಗ್ರೆಸ್‍ಗೆ ಬಂದ ಮೇಲೆ ನಿಮ್ಮ ವರಸೆ ಬದಲಾಯಿತೇ ಎಂದು ಪ್ರಶ್ನಿಸಿದರು. ಪರಸ್ಪರ ಮಾತಿನ ಸಮರ ನಡೆಯಿತು. ಇದಕ್ಕೆಲ್ಲ ಶಾಸಕರು, ಸಂಸದರು ಮೂಕಪ್ರೇಕ್ಷಕರಾದರು. ಕಡೆಗೆ ಸಚಿವರು ನಡಾವಳಿ ದಾಖಲೆ ತರಿಸಿ ಸಾಮಾನ್ಯ ಸಭೆಯ ಠರಾವನ್ನು ಓದಿಸಿ ಠರಾವಿನಲ್ಲಿ ಎಲ್ಲಿಯೂ ಸದಸ್ಯರು ವಿರೋಧಿಸಿದ ಅಂಶ ಇಲ್ಲ. ಏನಾದರೂ ನಿರ್ಣಯದಲ್ಲಿ ತನಿಖೆಗೆ ಒತ್ತಾಯಿಸಿದ್ದರೆ ಖಂಡಿತಾ ಸರಕಾರದ ಕಡೆಯಿಂದ ತನಿಖೆ ಮಾಡಿಸುತ್ತಿದ್ದೆ. ಈಗ ಏನೂ ಮಾಡಲು ಬರುವುದಿಲ್ಲವೆಂದು ಕೈ ಚೆಲ್ಲಿದರು. ಬಳಿಕ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap