ತುಮಕೂರಲ್ಲೂ ಬೆಡ್ ಮಾಫಿಯಾ : ಮೇಯರ್ ಅನುಮಾನ!!

ತುಮಕೂರು : 

      ರಾಜಧಾನಿ ಬೆಂಗಳೂರಲ್ಲಿ ಕಂಡುಬಂದಂತೆ ತುಮಕೂರಲ್ಲೂ ಬೆಡ್ ಮಾಫಿಯಾ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ತುಮಕೂರು ಮಹಾನಗರಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾ ಕೇಂದ್ರ ತುಮಕೂರು ನಗರದ ಹಲವು ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನಡೆಯುತ್ತಿದ್ದು, ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‍ಗಳು ಲಭ್ಯವಿದೆ. ಡಿಎಚ್‍ಓ ಕಚೇರಿಯಿಂದ ಯಾವುದೇ ಮಾಹಿತಿ ನಗರದ ಪ್ರಥಮ ಪ್ರಜೆಯಾದ ತಮಗಾಗಲೀ, ಉಪಮೇಯರ್‍ಗಾಗಲೀ ದೊರೆಯುತ್ತಿಲ್ಲ. ಈ ಬಗ್ಗೆ ಪಾಲಿಕೆ ಆರೋಗ್ಯಾಧಿಕಾರಿಗಳನ್ನು ಕೇಳಿದರೆ ತಮ್ಮ ಬಳಿಯೂ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ನಗರದ ನೂರಾರು ನಾಗರಿಕರು, ಪಾಲಿಕೆ ಸದಸ್ಯರೆಲ್ಲರೂ ಬೆಡ್ ಒದಗಿಸಲು ತಮ್ಮ ಬಳಿ ಮೊರೆಯಿಡುತ್ತಿದ್ದು, ಅವರಿಗೆಲ್ಲ ಏನು ಉತ್ತರವೇಳುವುದು ಎಲ್ಲಿ ದಾಖಲಿಸುವುದು ಎಂಬುದು ತಿಳಿಯದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಆಯಾ ದಿನದ ದಾಖಲು, ಖಾಲಿಯಿರುವ ಆಕ್ಸಿಜನ್, ವೆಂಟಿಲೇಟರ್‍ಗಳ ಮಾಹಿತಿಯನ್ನು ಪಾಲಿಕೆ ಹಾಗೂ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಬಹಿರಂಗಪಡಿಸಬೇಕು. ಈವರೆಗೆ ಇದನ್ನು ಬಹಿರಂಗಪಡಿಸದ ಕಾರಣ ರಾಜಧಾನಿ ಬೆಂಗಳೂರು ರೀತಿಯಲ್ಲೇ ತುಮಕೂರಲ್ಲೂ ಬೆಡ್ ಮಾಫಿಯಾ ನಡೆಯುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದರು.

      ಔಷಧಿಗಳು ದುಬಾರಿ ಬೆಲೆಗೆ ಮಾರಾಟ: ನಗರದ ಮೆಡಿಕಲ್ ಸ್ಟೋರ್‍ಗಳಲ್ಲಿ ಔಷಧಿ ಮಾತ್ರೆಗಳನ್ನು ನಿಗದಿತ ದರಕ್ಕಿಂತ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳಿವೆ. ಜಿಲ್ಲಾಧಿಕಾರಿಗಳು, ಡ್ರಗ್ ಕಂಟ್ರೋಲರ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಕೋವಿಡ್ ಸೋಂಕಿಗೆ ಸಿಲುಕಿ ನಲುಗುತ್ತಿರುವ ಸಂದರ್ಭದಲ್ಲಿ ಔಷಧಿ ಮಾತ್ರೆಗಳಿಗೆ ದುಪ್ಪಟ್ಟು ದರ ಪಡೆಯುತ್ತಿರುವುದು ನೋವಿನ ಸಂಗತಿ. ಈ ಬಗ್ಗೆ ಕ್ರಮವಹಿಸದಿದ್ದರೆ ತಾವೇ ಸದಸ್ಯರೊಡಗೂಡಿ ಆಸ್ಪತ್ರೆ, ಫಾರ್ಮಸಿಗಳನ್ನು ಪರಿಶೀಲಸಿಸಬೇಕಾಗುತ್ತದೆ ಎಂದು ಹೇಳಿದರು.

 ಲಂಚ ಕೊಟ್ಟು ಬೆಡ್ ಪಡೆಯಬೇಕಾಯಿತು : ಬಿಜೆಪಿ ಜಿಲ್ಲಾಧ್ಯಕ್ಷ 

      ಬೆಂಗಳೂರಿನ ತಮ್ಮ ಸಂಬಂಧಿಕರೊಬ್ಬರಿಗೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಆಕ್ಸಿಜನ್ ಬೆಡ್ ಅವಶ್ಯಕತೆಯಿತ್ತು. ಅದನ್ನು ಪಡೆಯಲು ಹರಸಾಹಸಪಟ್ಟು ಕೊನೆಗೆ ಒಬ್ಬರಿಗೆ 20ಸಾವಿರ ಲಂಚ ನೀಡುವ ಮೂಲಕ ಬೆಡ್ ಪಡೆದುಕೊಂಡೆವು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಬಿ.ಸುರೇಶ್‍ಗೌಡ ಸಹ ಹೇಳಿಕೆ ನೀಡಿರುವುದು ರಾಜ್ಯದಲ್ಲಿ ನಡೆಯುತ್ತಿರುವ ಬೆಡ್ ಮಾಫಿಯಾಕ್ಕೆ ಸಾಕ್ಷಿ ಎನಿಸಿದೆ.
ಕಳೆದ ನಾಲ್ಕು ದಿನಗಳ ಹಿಂದೆಫೋನ್ ಪೇ ಮೂಲಕವೇ 20000 ನೀಡಿ ಬೆಡ್ ಪಡೆದುಕೊಂಡಿದ್ದು, ಈ ಬಗ್ಗೆ ನನ್ನ ಬಳಿ ದಾಖಲೆ ಇದೆ. ಮುಖ್ಯ ಮಂತ್ರಿಗಳ ಬಳಿ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.

      ಆಡಳಿತಾರೂಢ ಬಿಜೆಪಿ ಜಿಲ್ಲಾಧ್ಯಕ್ಷರು, ಮೇಯರ್‍ಗಳೇ ಬೆಡ್ ಆಕ್ಸಿಜನ್ ಪೂರೈಕೆ ವಿಷಯದಲ್ಲಿ ಈ ದುಸ್ಥಿತಿ ಎದುರಿಸಿದರೆ ಇನ್ನೂ ಜನಸಾಮಾನ್ಯರ ಪಾಡೇನು ಎನ್ನುವ ಪ್ರಶ್ನೆ ಎದುರಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link