ತುಮಕೂರು : ರಸ್ತೆಗಳಲ್ಲಿ ಜನಜಾತ್ರೆ ; ಅಗತ್ಯ ವಸ್ತುಗಳಿಗೆ ಹೆಚ್ಚಿದ ಬೇಡಿಕೆ!!

 ತುಮಕೂರು : 

     ಕೊರೋನಾ ಎರಡನೆ ಅಲೆಯ ಸರಪಣಿಯನ್ನು ತುಂಡರಿಸಲು ಇಂದಿನಿಂದ 14 (ಮೇ 10ರಿಂದ ಮೇ 24ರವರೆಗೆ) ದಿನಗಳವರೆಗೆ ರಾಜ್ಯ ಸರ್ಕಾರವು ಲಾಕ್‍ಡೌನ್ ಘೋಷಿಸಿದೆ. ಲಾಕ್‍ಡೌನ್ ಎದುರಿಸಲು ನಿನ್ನೆ ಮುಂಜಾನೆಯಿಂದಲೆ ಜನತೆ ಪೂರ್ವ ತಯಾರಿ ಮಾಡಿಕೊಳ್ಳಲು ಮುಂದಾದರು. ಲಾಕ್‍ಡೌನ್ ಸಮಯದಲ್ಲಿ ಅತ್ಯಾವಶ್ಯಕವಾಗಿ ಬೇಕಾದ ಸಾಮಗ್ರಿ ಕೊಳ್ಳಲು ಜನ ಮುಗಿಬಿದದ್ದ್ದರಿಂದ ಮಂಡಿಪೇಟೆ, ಟೌನ್‍ಹಾಲ್, ಅಂತರಸನಹಳ್ಳಿ ತರಕಾರಿ ಮಾರುಕಟ್ಟೆ, ಕುಣಿಗಲ್ ರಸ್ತೆ, ಸೋಮೇಶ್ವರ ಬಡಾವಣೆ, ಸರಸ್ವತಿ ಪುರ, ಹನುಮಂತನಗರ, ಕುವೆಂಪುನಗರ, ಶಿರಾ ಗೇಟ್, ಗುಬ್ಬಿ ಗೇಟ್, ಕ್ಯಾತ್ಸಂದ್ರ ಸೇರಿದಂತೆ ನಗರದ ಮುಖ್ಯ ರಸ್ತೆಗಳು ಜನರಿಂದ ಗಿಜಿಗುಟ್ಟುತ್ತಿದ್ದವು.

      ತಿಂಗಳಿಗಾಗುವಷ್ಟು ದಿನಸಿ ಖರೀದಿ:

     ಕಳೆದ ವರ್ಷದ ಮೊದಲನೆ ಅಲೆಯ ಲಾಕ್‍ಡೌನ್‍ನಿಂದ ಎಚ್ಚೆತ್ತ ಜನ ಮುಂದಿನ ದಿನಗಳು ಹೇಗಿರುತ್ತವೊ ಏನೊ ಎಂಬ ಆತಂಕದಿಂದ, ಮನೆಯಲ್ಲಿ ಅಗತ್ಯ ದಿನಸಿ ಸಾಮಗ್ರಿ ಇದ್ದರೆ ಹೇಗೋ ಜೀವನ ಸಾಗಿಸಬಹುದು ಎಂಬ ಲೆಕ್ಕಚಾರದೊಂದಿಗೆ ನಗರದ ದಿನಸಿ ಅಂಗಡಿ, ಡಿಪಾರ್ಟ್‍ಮೆಂಟಲ್ ಸ್ಟೋರ್ಸ್, ಫುಡ್ ವಲ್ರ್ಡ್, ರಿಲಯನ್ಸ್ ಸ್ಮಾರ್ಟ್, ಮೆಟ್ರೊ ಮತ್ತಿತರ ಕಡೆ ಲಗ್ಗೆ ಇಟ್ಟರು. ಮಧ್ಯಮ ವರ್ಗದವರು ತಿಂಗಳಿಗೆ ಆಗುವಷ್ಟು ದಿನಸಿ ಖರೀದಿಸಿದರೆ, ಸ್ಥಿತಿ ವಂತರು 3-4 ತಿಂಗಳಿಗಾಗುವಷ್ಟು ಸಾಮಗ್ರಿಗಳನ್ನು ಖರೀದಿಸಿ ಬ್ಯಾಗು, ಚೀಲಗಳಲ್ಲಿ ತುಂಬಿಕೊಂಡು ಬೈಕು, ಕಾರುಗಳಲ್ಲಿ ಕೊಂಡೊಯ್ಯುತ್ತಿದ್ದ ದೃಶ್ಯ ನಿನ್ನೆ ಬೆಳಗ್ಗೆ ಸಾಮಾನ್ಯವಾಗಿತ್ತು.

      ಪೌಷ್ಟಿಕ ಆಹಾರ ವಸ್ತುಗಳಿಗೆ ಡಿಮ್ಯಾಂಡ್: ಕೊರೋನಾ ಸೋಂಕಿನಿಂದ ರಕ್ಷಣೆ ಪಡೆಯಲು ಜನ ಪೌಷ್ಟಿಕ ಆಹಾರ ವಸ್ತುಗಳ ಮೊರೆ ಹೋಗಿದ್ದು, ಹೇಗೂ ಲಾಕ್‍ಡೌನ್ ಕಾಲದಲ್ಲಿ ಬಿಡುವಿರುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಮಯ ನೀಡುತ್ತಿದ್ದಾರೆ. ಹಾಗಾಗಿ ನಿನ್ನೆ ಹಣ್ಣುಗಳು, ಸೊಪ್ಪು-ತರಕಾರಿ, ಹಾಲು-ಮೊಸರು, ಮೊಟ್ಟೆ-ಮಾಂಸ, ಒಣಹಣ್ಣುಗಳು, ಸಿರಿಧಾನ್ಯಗಳು, ಕಾಳುಗಳು, ಕಷಾಯಕ್ಕೆ ಬೇಕಾದ ವಸ್ತುಗಳು, ಜೇನುತುಪ್ಪ, ಸಾವಯವ ಆಹಾರ ವಸ್ತುಗಳು ಹಾಗೂ ಮಸಾಲೆ ವಸ್ತುಗಳನ್ನು ಹೆಚ್ಚು ಹೆಚ್ಚಾಗಿ ಕೊಂಡು ಕೊಂಡರು. ಅದರಲ್ಲೂ ಹಳ್ಳಿಯಿಂದ ನಗರಕ್ಕೆ ಮಾರಾಟಕ್ಕೆ ತಂದ ಮಾವು, ಬೇಲ, ಸೀಬೆ, ಸಪೋಟ, ಸೊಪ್ಪು-ತರಕಾರಿ, ನಾಟಿ ಮೊಟ್ಟೆ, ಬೆಣ್ಣೆ, ತುಪ್ಪಕ್ಕೆ ಹೆಚ್ಚಿನ ಬೇಡಿಕೆ ಇತ್ತು.

ಮಾಂಸಕ್ಕೆ ಮುಗಿ ಬಿದ್ದ ಜನ:

      ನಿನ್ನೆ ಭಾನುವಾರ ಬೇರೆ ಆಗಿದ್ದರಿಂದ ಬಾಡೂಟಕ್ಕಾಗಿ ಮಾಂಸಾಹಾರ ಪ್ರಿಯರು ಮಟನ್, ಚಿಕನ್ ಸ್ಟಾಲ್‍ಗಳಿಗೆ ಮುಂಜಾನೆಯಿಂದಲೆ ದಾಂಗುಡಿ ಇಟ್ಟಿದ್ದರು. ಇಲ್ಲಿ ಎಷ್ಟರ ಮಟ್ಟಿಗೆ ಜನ ಜಾತ್ರೆ ಇತ್ತೆಂದರೆ ‘ಇನ್ನೂ ಜೀವಮಾನದಲ್ಲಿ ಮಾಂಸ ಸಿಗುವುದಿಲ್ಲವೇನೊ’ ಎಂಬಷ್ಟರ ಮಟ್ಟಿಗಿತ್ತು. ಅಲ್ಲದೆ ಸರ್ಕಾರವು ಇತ್ತೀಚೆಗೆ ಯುಗಾದಿ ಹಬ್ಬದ ಮಾರನೆ ದಿನದ ವರ್ಷತೊಡಕು, ರಾಮನವಮಿ ಹಬ್ಬ ಹಾಗೂ ಅಂಬೇಡ್ಕರ್, ಮಹಾವೀರ ಜಯಂತಿಯಂದು ನಗರದಲ್ಲಿ ಮಾಂಸ ಮಾರಾಟ ನಿಷೇಧ ಮಾಡಿತ್ತು. ಮುಂದೆ ಬರುವ ಮೇ 14 ರ ಬಸವ ಜಯಂತಿಯಂದು ನಗರದಲ್ಲಿ ಮಾಂಸಾಹಾರ ನಿಷೇಧವಿದೆ. ಹೀಗೆ ಸಾಲು ಸಾಲು ದಿನಗಳಲ್ಲಿ ಮಾಂಸಾಹಾರ ನಿಷೇಧ ಮಾಡಿದ್ದು ಹಾಗೂ ಮಾಂಸಾಹಾರ ನಿಷೇಧ ಯಾಕಾಗಿ ಮಾಡಿದ್ದಾರೆ ಎಂಬ ಮಾಹಿತಿ ಸಾಕಷ್ಟು ಜನರಲ್ಲಿ ಇಲ್ಲವಾದ್ದರಿಂದ, ಮುಂದೆ ಲಾಕ್‍ಡೌನ್ ಕಾಲದಲ್ಲಿ ಸರ್ಕಾರ ಯಾವಾಗ ಏನು ನಿರ್ಧಾರ ತೆಗೆದುಕೊಳ್ಳುತ್ತೊ ಎಂದು ಜನ ಗೊಂದಲಕ್ಕೊಳಗಾಗಿದ್ದರಿಂದ ಬಹುಸಂಖ್ಯಾತರ ಆಹಾರ ಭಾಗವಾಗಿರುವ ಮಾಂಸಕ್ಕೆ ಬೇಡಿಕೆ ಹೆಚ್ಚಿತ್ತು.

ಔಷಧ ಅಂಗಡಿಗಳ ಮುಂದೆ ಕ್ಯೂ:

      ಲಾಕ್‍ಡೌನ್ ಸಂದರ್ಭದಲ್ಲಿ ಜನರು ವೈಯಕ್ತಿಕ ಆರೋಗ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಟ್ಟಿದ್ದು, ನಗರದ ಮೆಡಿಕಲ್ ಸ್ಟೋರ್‍ಗಳ ಮುಂದೆ ಮಾಸ್ಕ್, ಸ್ಯಾನಿಟೈಸರ್, ಮಾತ್ರೆ, ಔಷಧ ಇನ್ನಿತರ ಆರೋಗ್ಯ ಸುಧಾರಣಾ ಸಾಮಗ್ರಿಗಳನ್ನು ಜನರು ಸರದಿ ಸಾಲಿನಲ್ಲಿ ನಿಂತು ಖರೀದಿಸಿದರು. ಹಲವರು ಮುನ್ನೆಚ್ಚರಿಕೆಯಿಂದ ಯಾವುದಕ್ಕೂ ಇರಲಿ ಎಂದು ಸಾಮಾನ್ಯ ಕಾಯಿಲೆಗಳಿಗೆ ಬೇಕಾದ ಮಾತ್ರೆ, ಔಷಧಗಳನ್ನು ಮುಂಚಿತವಾಗಿಯೇ ಖರೀದಿಸಿದರು.

 ಹೌಸ್‍ಫುಲ್ ಆದ ಕಟಿಂಗ್ ಶಾಪ್‍ಗಳು:

      ಲಾಕ್‍ಡೌನ್ ಕಾರಣದಿಂದ ಕಟಿಂಗ್ ಶಾಪ್‍ಗಳು ಸಹ ಬೆಳಗ್ಗೆ 6 ರಿಂದ 10 ರ ತನಕ ಮಾತ್ರ ತೆರೆಯುತ್ತಿದ್ದು, ಕೇವಲ 4 ಗಂಟೆ ಮಾತ್ರ ಕಾರ್ಯಾಚರಿಸುತ್ತಿವೆ. ಹಾಗಾಗಿ ಹೆಚ್ಚು ಜನರು ಕಟಿಂಗ್ ಶಾಪ್‍ಗಳತ್ತ ಹೋಗುತ್ತಿದ್ದಾರೆ. ಅಲ್ಲದೇ ಇಂದಿನಿಂದ ಮತ್ತೆ 14 ದಿನ ಲಾಕ್‍ಡೌನ್ ಇರುವುದರಿಂದ ಬಹಳ ದಿನಗಳಿಂದ ಕಟಿಂಗ್, ಶೇವಿಂಗ್ ಮಾಡಿಸದ ಗಡ್ಡಧಾರಿಗಳು, ಜಡೆಧಾರಿಗಳು ನಿನ್ನೆ ಬೆಳಗಿನಿಂದಲೇ ಸಲೂನ್‍ಗಳಿಗೆ ಹೋಗಿ ತಮ್ಮ ಗಡ್ಡ, ಕೂದಲುಗಳನ್ನು ಕತ್ತರಿಸಿಕೊಂಡು ಟ್ರಿಮ್ ಆಗಿ ಹೋಗುತ್ತಿದ್ದರು.

ಹಳ್ಳಿಗಳತ್ತ ಪ್ರಯಾಣ:

      ಇಷ್ಟೇ ಅಲ್ಲದೆ ಕಾರಣಾಂತರಗಳಿಂದ ಇದುವರೆಗೂ ನಗರದಲ್ಲೇ ಇದ್ದ ಗ್ರಾಮೀಣ ಪ್ರದೇಶದವರು, ಕಟ್ಟಡ, ರಸ್ತೆ ಇನ್ನಿತರ ನಿರ್ಮಾಣ ಕಾರ್ಯದ ಶ್ರಮಿಕ ವರ್ಗದವರು ತಮ್ಮ ವೈಯಕ್ತಿಕ ವಾಹನಗಳ ಮೂಲಕ ಊರಿನದಾರಿ ಹಿಡಿದರೆ, ಇನ್ನೂ ಕೆಲವರು ಬಾಡಿಗೆ ಕಾರು ಮಾಡಿಕೊಂಡು ತಮ್ಮ ತಮ್ಮ ಊರು ಸೇರಿಕೊಳ್ಳುತ್ತಿದ್ದರು.

ಹಳ್ಳಿಗಳಿಂದ ನಗರಕ್ಕೆ ಬಂದ ‘ಅನ್ನಭಾಗ್ಯ’ದ ಅಕ್ಕಿ:

      ಉದ್ಯೋಗ ಇನ್ನಿತರ ಕಾರಣಗಳಿಂದ ನಗರದಲ್ಲೇ ಇರುವ ಗ್ರಾಮೀಣ ಭಾಗದ ಬಡ, ಮಧ್ಯಮ ವರ್ಗದ ಜನರು ಉದ್ಯೋಗ ನಷ್ಟದ, ದುಡಿಮೆ ಇಲ್ಲದ ಈ ದುಬಾರಿ ಕಾಲದಲ್ಲಿ ನಗರದಲ್ಲಿ ಎಲ್ಲವನ್ನೂ ದುಡ್ಡು ಕೊಟ್ಟು ಕೊಂಡರೆ ಜೀವನ ದುಬಾರಿ ಎಂದು ಭಾವಿಸಿ, ಮೊನ್ನೆ ರಾತ್ರಿ ಮತ್ತು ನಿನ್ನೆ ಮುಂಜಾನೆಯೇ ತಮ್ಮ ಹಳ್ಳಿಗಳಿಗೆ ಹೋಗಿ ಅನ್ನಭಾಗ್ಯದ ಅಕ್ಕಿ ಸೇರಿದಂತೆ ಇನ್ನಿತರ ಪಡಿತರ, ತಮ್ಮ ಹೊಲ, ಜಮೀನುಗಳಲ್ಲಿ ಬೆಳೆದ ರಾಗಿ, ಕಾಯಿ, ಕಾಳು-ಕಡ್ಡಿ, ಮುಂತಾದ ಧವಸ-ಧಾನ್ಯಗಳನ್ನು ತಮ್ಮ ಬೈಕು, ಆಟೋ, ಇನ್ನಿತರ ವಾಹನಗಳ ಮೂಲಕ ನಗರದ ತಮ್ಮ ಮನೆಗಳಿಗೆ ತಂದರು.

ನಿಶ್ಚಯವಾಗಿದ್ದ ಮದುವೆಗಳ ತಯಾರಿ:

      ಸರ್ಕಾರವು ಪ್ರಸ್ತುತ ಲಾಕ್‍ಡೌನ್ ಅವಧಿಯಲ್ಲಿ ನಡೆಯುವ ಮದುವೆಗಳಿಗೆ ಕೇವಲ 40 ಜನ ಭಾಗವಹಿಸಲು ನಿರ್ಬಂಧ ಹೇರಿದ್ದು, ಹೆಚ್ಚು ಮದುವೆಗಳು ಮನೆಗಳಲ್ಲಿಯೇ ನಡೆಯುತ್ತಿವೆ. ಮುಂದೆ ಲಾಕ್‍ಡೌನ್ ನಿರ್ಬಂಧಗಳು ಏನೇನು ಇರುತ್ತವೋ? ಏನು ಕಥೆಯೋ ಎಂದು ಜನ ಈಗಾಗಲೇ ನಿಶ್ಚಯವಾಗಿದ್ದ ಮದುವೆಗಳನ್ನು ಆದಷ್ಟು ಬೇಗ ಮಾಡಿ ಮುಗಿಸುತ್ತಿದ್ದಾರೆ. ಹಾಗಾಗಿ ಇಂದು ಗ್ರಾಮಾಂತರ ಪ್ರದೇಶದಿಂದ ಮದುವೆಗೆ ಬೇಕಾದ ಸಾಮಗ್ರಿ ಕೊಳ್ಳಲು ಜನ ನಗರದ ಅಂಗಡಿ-ಮುಂಗಟ್ಟುಗಳಿಗೆ ಭೇಟಿ ನೀಡಿದ್ದರು. ಈ ನಿಟ್ಟಿನಲ್ಲಿ ನಿನ್ನೆ ಬೆಳಗುಂಬ ರಸ್ತೆಯ ಮನೆಯೊಂದರಲ್ಲಿ ಲಾಕ್‍ಡೌನ್ ನಿಯಮಾನುಸಾರ ಸರಳವಾಗಿ ಮದುವೆಯೊಂದು ನಡೆದಿದೆ.

      ಆತಂಕ, ಗೊಂದಲದ ನಡುವೆ “ನಾವ್ ಸೇಫ್ ಆದ್ರೆ ಸಾಕು” ಎಂಬ ಮನಸ್ಥಿತಿ: ಜನರಿಗೆ ಲಾಕ್‍ಡೌನ್ ಕುರಿತಾದ ಮಾಹಿತಿ ಇದೆ. ಆದರೆ ಯಾವ ಸಮಯದಲ್ಲಿ ಏನೇನು ಸಿಗುತ್ತೆ? ಯಾವ ಸೇವೆಗಳು ಲಭ್ಯವಿವೆ? ಲಾಕ್‍ಡೌನ್ ಸಮಯದಲ್ಲಿ ನಾವು ಹೇಗಿರಬೇಕು? ಜನರ ಕರ್ತವ್ಯಗಳೇನು ಎಂಬುದರ ಮಾಹಿತಿ ಹಲವು ಜನರಿಗೆ ಇನ್ನೂ ಅರಿವಿಗೆ ಬಂದಿಲ್ಲ. ಅಲ್ಲದೆ ಕೊರೋನಾ ಸಾಂಕ್ರಾಮಿಕ ಕುರಿತು ಆತಂಕ, ಗೊಂದಲ ಮುಂದುವರೆದಿದೆ. ಮನುಷ್ಯ ಸಂಬಂಧಗಳ ಬೆಲೆ ಕ್ಷೀಣಿಸಿರುವ ಈ ಹೊತ್ತು ನಾವು-ನಮ್ಮವರು ಸೇಫ್ ಆದರೆ ಸಾಕೆಂಬ ಮನಸ್ಥಿತಿ ಸಾಕಷ್ಟು ಜನರಲ್ಲಿ ಮನೆ ಮಾಡಿದೆ.

 -ಚಿದಾನಂದ್ ಹುಳಿಯಾರ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ